ರಾಜೀವ್ ಗಾಂಧಿ ಹತ್ಯೆ : ಜೈಲಿನಲ್ಲಿ ಉಪವಾಸ ಆರಂಭಿಸಿದ ನಳಿನಿ
ಚೆನ್ನೈ, ಫೆಬ್ರವರಿ 11 : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ತಮಿಳುನಾಡಿನ ವೆಲ್ಲೂರು ಜೈಲಿನಲ್ಲಿ ನಳಿನಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲರನ್ನೂ ಜೈಲಿನಿಂದ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಕೊಂಡು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಶನಿವಾರದಿಂದ ಅವರು ಉಪವಾಸ ಮಾಡುತ್ತಿದ್ದು, ಸೋಮವಾರ ಮೂರನೇ ದಿನವಾಗಿದೆ.
'ನಳಿನಿ ಶ್ರೀಹರನ್ ಅವರ ಬೇಡಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲು ತಮಿಳುನಾಡು ಸರ್ಕಾರ ವಿಳಂಬ ಮಾಡುತ್ತಿದೆ. ಇದರಿಂದಾಗಿ ಅವರ ಆರೋಗ್ಯದ ಬಗ್ಗೆ ಆತಂಕ ಎದುರಾಗಿದೆ' ಎಂದು ನಳಿನಿ ಶ್ರೀಹರನ್ ಪರ ವಕೀಲರು ಹೇಳಿದ್ದಾರೆ.

'ತಮಿಳುನಾಡು ಸರ್ಕಾರದ ಸಚಿವ ಸಂಪುಟ ಎಲ್ಲರ ಬಿಡುಗಡೆಗೆ ಒಪ್ಪಿಗೆ ಕೊಟ್ಟಿದೆ. ಆದರೆ, ಈ ಕುರಿತ ಆದೇಶಕ್ಕೆ ಸಹಿ ಮಾಡಲು ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಸಹ ಗಮನ ಹರಿಸುತ್ತಿಲ್ಲ. ರಾಜ್ಯಪಾಲರು ಕಾನೂನುನ್ನು ಪಾಲಿಸುತ್ತಿಲ್ಲ' ಎಂದು ವಕೀಲರು ಆರೋಪಿಸಿದರು.
ನಳಿನಿ ಶ್ರೀಹರನ್ ಅವರು 9/2/2019ರಂದು ರಾಜ್ಯಪಾಲರಿಗೆ ಪತ್ರ ಬರೆದು ಉಪವಾಸ ಆರಂಭಿಸುವುದಾಗಿ ಹೇಳಿದ್ದರು. ಜೈಲಿನಲ್ಲಿ 28 ವರ್ಷಗಳನ್ನು ನಾವು ಕಳೆದಿದ್ದೇವೆ. ಈ ನರಕದಿಂದ ನಾವು ಹೊರ ಬರಬೇಕು. ನಾವು ಮುಗ್ಧರು ಎಂದು ಪತ್ರದಲ್ಲಿ ಅವರು ವಿವರಿಸಿದ್ದರು.
2018ರ ಸೆಪ್ಟೆಂಬರ್ ತಿಂಗಳಿನಲ್ಲಿ ತಮಿಳುನಾಡು ಸರ್ಕಾರ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿತ್ತು. ಸಂವಿಧಾನದ 161ನೇ ನಿಯಮದ ಪ್ರಕಾರ ಬಿಡುಗಡೆಗೆ ಒಪ್ಪಿಗೆ ನೀಡಲಾಗಿತ್ತು. ಆದರೆ, ರಾಜ್ಯಪಾಲರು ಇದಕ್ಕೆ ಇನ್ನೂ ಅನುಮತಿ ಕೊಟ್ಟಿಲ್ಲ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಮೇ 21, 1991ರಂದು ಚೆನ್ನೈ ಸಮೀಪದ ಶ್ರೀಪೆರಂಬೂರಿನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹತ್ಯೆ ಮಾಡಲಾಗಿತ್ತು. ಆತ್ಮಾಹುತಿ ಬಾಂಬರ್ ಧನು ತನ್ನನ್ನು ಸ್ಫೋಟಿಸಿಕೊಂಡು ಹತ್ಯೆ ಮಾಡಿದ್ದಳು.












Click it and Unblock the Notifications