ತಮಿಳು ಸ್ಟಾರ್ ವಿಜಯ್ ರಾಜಕೀಯ ಪ್ರವೇಶಿಸಿದರೂ ಮೋದಿ ಪರ ನಿಲ್ಲಲ್ಲ
ಚೆನ್ನೈ, ಅಕ್ಟೋಬರ್ 03: 2014ರಲ್ಲಿ ಮೋದಿ ಭೇಟಿ ಮಾಡಿದ್ದ ವಿಜಯ್ ಅವರು ರಾಜಕೀಯ ಪ್ರವೇಶಿಸುವ ಬಗ್ಗೆ ಸುದ್ದಿ ಹಬ್ಬಿತ್ತು. ಈಗ 2019ರಲ್ಲಿ ಮತ್ತೊಮ್ಮೆ ಇದೇ ರೀತಿ ಸುದ್ದಿ ಹರಿದಾಡುತ್ತಿದೆ. ಸ್ಟಾರ್ ಗಿರಿ, ಅಸಂಖ್ಯ ಫ್ಯಾನ್ಸ್ ಬಳಗ ಹೊಂದಿರುವ 'ಇಳೆಯ ದಳಪತಿ' ವಿಜಯ್ ಅವರು ರಾಜಕೀಯ ಪ್ರವೇಶ ಸದ್ಯಕ್ಕಂತೂ ಇಲ್ಲ. ರಾಜಕೀಯಕ್ಕೆ ಎಂಟ್ರಿ ಕೊಟ್ಟರೂ ಬಿಜೆಪಿಗೆ ಬಲ ತುಂಬುವುದಿಲ್ಲ ಎಂಬ ಸುದ್ದಿ ಖಚಿತವಾಗಿದೆ.
ರಜನಿಕಾಂತ್, ಅಜಿತ್, ವಿಜಯ್ ಸೇರಿದಂತೆ ಎಲ್ಲಾ ಸೂಪರ್ ಸ್ಟಾರ್ ಗಳನ್ನು ರಾಜಕೀಯ ನಾಯಕರಾಗಿ ನೋಡಲು ತಮಿಳು ಜನರು ಬಯಸಿದ್ದಾರೆ. ತಮಿಳುನಾಡಿನಲ್ಲಿ ಸಿನಿಮಾ ಸ್ಟಾರ್ ಗಳು ರಾಜಕೀಯ ಜತೆಗಿನ ಅವಿನಾಭಾವ ಸಂಬಂಧದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಸರ್ಕಾರ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ವಿಜಯ್ ಅವರು ಹೇಳಿದ ಡೈಲಾಗ್ ಈಗ ಭಾರಿ ಚರ್ಚೆಯಲ್ಲಿದೆ. ವಿಜಯ್ ಅವರು ಮಾತನಾಡಿದ ಈ ಮಾತುಗಳನ್ನ ಕೇಳಿದ್ರೆ, ರಾಜಕೀಯದ ಬಗ್ಗೆ ಅವರಿಗೆ ಮತ್ತೆ ಆಸಕ್ತಿ ಕೆರಳಿರುವುದು ಸ್ಪಷ್ಟವಾಗುತ್ತದೆ.
ಆದರೆ, ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂಬುದು ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಇಷ್ಟೆಲ್ಲಾ ಹೇಳುವಾಗಲೂ ಕೂಡ ವಿಜಯ್ ಅವರು ''ನಾನು ಯಾರನ್ನ ಉದ್ದೇಶವಾಗಿಟ್ಟುಕೊಂಡು ಹೇಳುತ್ತಿಲ್ಲ. ಯಾವ ಪಕ್ಷವನ್ನ ಟಾರ್ಗೆಟ್ ಮಾಡ್ತಿಲ್ಲ'' ಎಂದು ಸ್ಪಷ್ಟಪಡಿಸಲು ಯತ್ನಿಸಿದ್ದಾರೆ. ಆದರೆ, ಇಳಯದಳಪತಿ ಫ್ಯಾನ್ಸ್ ಗಳು ಪುಲ್ ಖುಷಿಯಲ್ಲಿದ್ದಾರೆ.

ಭ್ರಷ್ಟಚಾರ ಮುಕ್ತ ಮಾಡಬೇಕು ಎಂದ ವಿಜಯ್
'ನಿಜ ಜೀವನದಲ್ಲಿ ಸಿಎಂ ಆದ್ರೆ, ಸಿಎಂ ರೀತಿ ನಟಿಸಲ್ಲ. ನಿಜವಾಗಲೂ ಸಿಎಂ ಆಗಿರುತ್ತೇನೆ' ಎಂದು ಸರ್ಕಾರ್ ಆಡಿಯೋ ಕಾರ್ಯಕ್ರಮದಲ್ಲಿ ವಿಜಯ್ ಹೇಳಿದ್ದರು.
ಸಿಎಂ ಆದ ಬಳಿಕ ಮಾಡುವ ಮೊದಲ ಕೆಲಸ ಎಲ್ಲರೂ ಹೇಳುವುದೇ ಭ್ರಷ್ಟಚಾರ ಮುಕ್ತ ಮಾಡಬೇಕು. ಅದು ಹೇಗೆ ಅಂದ್ರೆ, ಅಧಿಕಾರದಲ್ಲಿರೋರು ಮತ್ತು ನಾಯಕರು ಚೆನ್ನಾಗಿದ್ರೆ, ಜನ ಸಾಮಾನ್ಯರು ಮತ್ತು ಕೆಳ ಹಂತದ ಜನರು ಎಲ್ಲರೂ ಉತ್ತಮವಾಗಿರ್ತಾರೆ. ಆದ್ರೆ, ಈಗ ಎಲ್ಲದಕ್ಕೂ ಲಂಚ ಕೊಡಬೇಕು. ಹುಟ್ಟಿದ ಪ್ರಮಾಣಪತ್ರಕ್ಕೂ ಲಂಚ ಜನನ ಪ್ರಮಾಣಪತ್ರಕ್ಕೂ ಲಂಚ ಕೊಡಬೇಕು'' ಎಂದು ತಮ್ಮ ಅಭಿಪ್ರಾಯ ಹೊರಹಾಕಿದರು.

ಮೆರ್ಸೆಲ್ ಚಿತ್ರದ ವಿವಾದದಿಂದ ಬಿಜೆಪಿಗೆ ನೋವು
'ಮೆರ್ಸಲ್' ಚಿತ್ರದಲ್ಲಿ ಮೋದಿ ಸರ್ಕಾರದ ಜಿಎಸ್‌ಟಿ, ಡಿಜಿಟಲ್ ಇಂಡಿಯಾ ಕುರಿತಂತೆ ಅವಹೇಳನಕಾರಿ ಡೈಲಾಗ್ ಗಳಿವೆ. ಇಂಥ ದೃಶ್ಯಗಳಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಬಿಜೆಪಿ ಆರೋಪಿಸಿತ್ತು.
ಗಾಯದ ಮೇಲೆ ಉಪ್ಪು ಹಾಕಿದಂತೆ, ಮೋದಿ ಬೆಂಬಲಿಸುವ ರಜನಿ ಕಾಂತ್ ಕೂಡಾ ಮೆರ್ಸೆಲ್ ಡೈಲಾಗ್ ಸಮರ್ಥಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸೌಹಾರ್ದಯುತ ಭೇಟಿ ಎಂದಿದ್ದ ಮೋದಿ
2014ರಲ್ಲಿ ರಜನಿ ಕಾಂತ್ ಅವರ ಭೇಟಿ ಮಾದರಿಯಲ್ಲೇ ವಿಜಯ್ ಜತೆಗಿನ ಭೇಟಿ ಬಗ್ಗೆ ಮೋದಿ ಅವರು ಟ್ವೀಟ್ ಮಾಡಿದ್ದರು. ಇದು ಕೂಡಾ ಸೌಹಾರ್ದಯುತ ಭೇಟಿ ಎಂದು ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅದರೆ, ರಾಜಕೀಯ ಪಂಡಿತರು ಬೇರೆಯದ್ದೇ ಲೆಕ್ಕಾಚಾರ ಹಾಕಿದ್ದರು ವಿಜಯ್ ಭೇಟಿ ನಂತರ ಅಲ್ಲಸಂಖ್ಯಾತರ ಓಲೈಕೆ ಮಾಡುವುದು ಬಿಜೆಪಿಗೆ ಸುಲಭವಾಗಲಿದೆ. ತಮಿಳುನಾಡಿನಲ್ಲಿ ಬಿಜೆಪಿ ತನ್ನ ಬುನಾದಿ ಹಾಕಲು ಬಲ ಸಿಗಲಿದೆ ಎನ್ನಲಾಗಿತ್ತು.

ವಿಜಯ್ ಅವರು ಕ್ರೈಸ್ತ ಸಮುದಾಯ ಅನುಯಾಯಿ
ವಿಜಯ್ ಅವರು ಕ್ರೈಸ್ತ ಸಮುದಾಯ ಅನುಯಾಯಿಯಾಗಿದ್ದು, ಅಲ್ಪಸಂಖ್ಯಾತ ಮೀಸಲು ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲೇ ಸ್ಪರ್ಧಿಸಲು ಬಯಸಿದ್ದರು ಆದರೆ, ಟಿಕೆಟ್ ಸಿಕ್ಕಿರಲಿಲ್ಲ. ಇತ್ತೀಚಿನ ಅವರ ಮಾಸ್ ಚಿತ್ರಗಳು ಅವರ ಸಕ್ರಿಯ ರಾಜಕೀಯ ಪ್ರವೇಶಕ್ಕೆ ಮುನ್ನುಡಿ ಬರೆದಿವೆ ಎನ್ನಲಾಗಿತ್ತು. ಆದರೆ, ನಾಲ್ಕು ವರ್ಷಗಳು ಕಳೆದರೂ ಈ ಬಗ್ಗೆ ಯಾವುದೇ ಸುಳಿವು ಕಂಡು ಬರಲಿಲ್ಲ.












Click it and Unblock the Notifications