ತಮಿಳುನಾಡಿನಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನ
ಚೆನ್ನೈ, ಮೇ 28: ತಮಿಳುನಾಡಿನ ಮೈಲಾಡುತುರೈನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಐಎಸ್‌ಐಎಸ್ ಶಂಕಿತ ಉಗ್ರನೊಬ್ಬನನ್ನು ಗುರುವಾರ ರಾತ್ರಿ ಬಂಧಿಸಿದೆ. ಬಂಧಿತನನ್ನು 25 ವರ್ಷದ ಮೊಹಮ್ಮದ್ ಆಶಿಕ್ ಎಂದು ಗುರುತಿಸಲಾಗಿದೆ.
2018ರಲ್ಲಿ ಕೊಯಮತ್ತೂರಿನಲ್ಲಿ ಕೆಲವು ಮುಖಂಡರನ್ನು ಕೊಲ್ಲಲು ಸಂಚುಹಾಕಿದ್ದ ಆರೋಪದ ಮೇಲೆ ಈತನನ್ನು ಈ ಮುನ್ನವೂ ಬಂಧಿಸಲಾಗಿತ್ತು. ಮೈಲಾಡುತುರೈ ಬಳಿಯ ನೀರ್ಡೂರಿನಲ್ಲಿ ಗುರುವಾರ ರಾತ್ರಿ ತನಿಖಾ ಸಂಸ್ಥೆ ಮತ್ತೆ ಆಶಿಕ್‌ನನ್ನು ಬಂಧಿಸಿದೆ.
2018ರಲ್ಲಿ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ಜೊತೆಗೆ ಸಹಕರಿಸಿ ಕೊಯಮತ್ತೂರಿನಲ್ಲಿ ಕೆಲವು ನಾಯಕರನ್ನು ಕೊಲ್ಲಲು ಸಂಚು ರೂಪಿಸಿದ್ದು, ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಈತ ಹೊರಬಂದಿದ್ದ.

ಇದಾದ ಮೇಲೆ ವಿಚಾರಣೆಗೆ ಹಾಜರಾಗದ ಆಶಿಕ್ ವಿರುದ್ಧ ವಿಶೇಷ ನ್ಯಾಯಾಲಯ ಜಾಮೀನುರಹಿತ ಬಂಧನ ವಾರೆಂಟ್ ಜಾರಿ ಮಾಡಿತ್ತು. ಇದೀಗ ತನಿಖಾ ಸಂಸ್ಥೆ ಆಶಿಕ್‌ನನ್ನು ಮತ್ತೆ ಬಂಧಿಸಿದೆ.
ತಮಿಳುನಾಡಿನ ವಿವಿಧ ಭಾಗದ ಏಳು ಜನರ ತಂಡ ಕೊಯಮತ್ತೂರಿನಲ್ಲಿ ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ಸಹಕರಿಸುವುದಾಗಿ ನಿರ್ಧರಿಸಿ, ಕೊಯಮತ್ತೂರು ಮೂಲದ ನಾಯಕರನ್ನು ಕೊಲ್ಲಲು ಸಂಚು ರೂಪಿಸಿತ್ತು ಎಂದು ಮೂಲಗಳು ತಿಳಿಸಿತ್ತು.
ಕೋಮು ಸೌಹಾರ್ದತೆ ಮತ್ತು ದೇಶದ ಭದ್ರತೆಗೆ ಧಕ್ಕೆ ತಂದ ಆರೋಪದಲ್ಲಿ ಈ ತಂಡವನ್ನು ಬಂಧಿಸಿ 2018ರ ಸೆಪ್ಟೆಂಬರ್‌ನಲ್ಲಿ ದೆಹಲಿಯ ಎನ್‌ಐಎ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿತ್ತು.
ಕೊಯಮತ್ತೂರು ಮರಕ್ಕಡೈ ಮೂಲದ ಮೊಹಮದ್ ಆಶಿಕ್‌ನನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು.












Click it and Unblock the Notifications