ಮೋದಿಗೆ ಬಿಜೆಪಿ ಕಾರ್ಯಕರ್ತರಿಂದ ಮುಜುಗರ, ವ್ಯಂಗ್ಯವಾಡಿದ ರಾಹುಲ್
Recommended Video

ಚೆನ್ನೈ, ಡಿಸೆಂಬರ್ 25 : ಪ್ರಧಾನಿ ನರೇಂದ್ರ ಮೋದಿ ಅವರು 'ನಮೋ' ಅಪ್ಲಿಕೇಶನ್ ಮೂಲಕ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವಾಗ ಮುಜುಗರ ಅನುಭವಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ವಿಚಾರ ಬಗ್ಗೆ ಟ್ವೀಟ್ ಮಾಡಿದ್ದು, ಮೋದಿ ಅವರನ್ನು ಟೀಕಿಸಿದ್ದಾರೆ.
ಉತ್ತರ ತಮಿಳುನಾಡಿನ ಕೆಲವು ಜಿಲ್ಲೆಗಳು ಮತ್ತು ಪುದುಚೇರಿಯ ಬಿಜೆಪಿ ಕಾರ್ಯಕರ್ತರೊಂದಿಗೆ ಮೋದಿ ಅವರು ಸಂವಾದ ನಡೆಸುವಾಗ ವಿಳ್ಳುಪುರಂ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ನಿರ್ಮಲ್ ಕುಮಾರ್ ಜೈನ್ ಪ್ರಶ್ನೆ ಕೇಳಿದರು.
'ಆದಾಯ ತೆರಿಗೆಯಲ್ಲಿ ಸಾಲ ನೀಡಿಕೆ ಪ್ರಕ್ರಿಯೆಗಳಲ್ಲಿ ತಮಗೆ ವಿನಾಯಿತಿ ಏಕೆ ನೀಡುತ್ತಿಲ್ಲ ಎಂಬುದು ಮಧ್ಯಮ ವರ್ಗದ ಜನರಿಗೆ ಅರ್ಥವಾಗುತ್ತಿಲ್ಲ. ಈ ವರ್ಗದ ಜನರಿಂದ ತೆರಿಗೆ ವಸೂಲಿ ಮಾಡಲು ಮಾತ್ರ ಸರ್ಕಾರ ಕಾಳಜಿ ವಹಿಸುತ್ತದೆ. ಇತರ ವಿಷಯಗಳಲ್ಲೂ ಈ ವರ್ಗದ ಬಗ್ಗೆ ಅಷ್ಟೇ ಕಾಳಜಿ ವಹಿಸಿ' ಎಂದು ಸಲಹೆ ನೀಡಿದರು.

ಈ ಪ್ರಶ್ನೆ ಬಳಿಕ ಮೋದಿ ಗಂಭೀರವಾದರು. 'ಧನ್ಯವಾದಗಳು ನಿರ್ಮಲ್ ಜೀ. ನೀವೊಬ್ಬ ವ್ಯಾಪಾರಿ. ಹೀಗಾಗಿ ಸದಾ ವ್ಯಾಪಾರ ವಹಿವಾಟಿನ ಬಗ್ಗೆಯೇ ಮಾತನಾಡುತ್ತೀರಿ. ಶ್ರಿ ಸಾಮಾನ್ಯನ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಎಂದು ಭರವಸೆ ನೀಡುತ್ತೇನೆ' ಎಂದರು.
Vanakam Puducherry!
— Rahul Gandhi (@RahulGandhi) December 25, 2018
That’s NoMo’s answer to the struggling middle class.
Forget a press conference he can’t even string together a polling booth worker’s conference.
BJP-vetted questions is a superb idea. Consider vetted answers as well. https://t.co/ukoDtgCvld @deccanherald
ಈ ಪ್ರಶ್ನೆಗೆ ಉತ್ತರ ನೀಡಿದ ಬಳಿಕ ಮೋದಿ ವಿಳ್ಳುಪುರಂ ಕಾರ್ಯಕರ್ತರೊಂದಿಗೆ ನಡೆಸುತ್ತಿದ್ದ ಸಂವಾದವನ್ನು ತಕ್ಷಣವೇ ಮೊಟಕುಗೊಳಿಸಿ, ಪುದುಚೇರಿಯ ಕಾರ್ಯಕರ್ತರನ್ನು ಸಂವಾದಕ್ಕೆ ಆಹ್ವಾನಿಸಿದರು. ಬಿಜೆಪಿ ಕಾರ್ಯಕರ್ತನಿಂದಲೇ ಮೋದಿ ಮುಜುಗರ ಅನುಭವಿಸಿದರು.
ರಾಹುಲ್ ಗಾಂಧಿ ಟ್ವೀಟ್ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ಇಂದು ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡಿದ್ದಾರೆ. 'ನರೇಂದ್ರ ಮೋದಿ ಅವರು ಮಧ್ಯಮ ವರ್ಗದ ಜನರ ಪ್ರಶ್ನೆಗೆ ಉತ್ತರಿಸಲು ತಡವರಿಸಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
'ಪತ್ರಿಕಾಗೋಷ್ಠಿಯನ್ನು ಮರೆತು ಬಿಡಿ, ಅವರು ತಮ್ಮ ಪಕ್ಷದ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ನೀಡಲು ವಿಫಲರಾಗಿದ್ದಾರೆ' ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.












Click it and Unblock the Notifications