'ಮೆರ್ಸಲ್' ಚಿತ್ರದ ಬಗ್ಗೆ ರಜನಿ ಮೆಚ್ಚುಗೆ, ಬಿಜೆಪಿ ಪೇಚಿಗೆ
ಚೆನ್ನೈ, ಅಕ್ಟೋಬರ್ 23: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರೆನಿಸಿರುವ ವಿಜಯ್ ಅವರ ಹೊಚ್ಚ ಹೊಸ ಚಿತ್ರ ಮೆರ್ಸಲ್ ನಲ್ಲಿ ಮೋದಿ ಅವರ ಸರ್ಕಾರದ ವಿರುದ್ಧ ಡೈಲಾಗ್ ಗಳಿವೆ ಎಂದು ಬಿಜೆಪಿ ನಾಯಕರು ಗರಂ ಆಗಿರುವುದು ಗೊತ್ತಿರಬಹುದು.
ಈಗ ಗಾಯದ ಮೇಲೆ ಬರೆ ಎಳೆದಂತೆ, ವಿಜಯ್ ಗೆ ಚಿತ್ರರಂಗದ ಹಲವಾರು ಗಣ್ಯರಿಂದ ಬೆಂಬಲ ವ್ಯಕ್ತವಾಗಿದೆ. ಅದರಲ್ಲೂ ರಜನಿಕಾಂತ್ ಅವರ ಟ್ವೀಟ್ ಈಗ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
'ಮೆರ್ಸಲ್' ಸಿನಿಮಾ ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದೆ ಎಂದು ರಜನಿ ಅವರು ಮಾಡಿರುವ ಟ್ವೀಟ್ ಯಾವ ಅರ್ಥವನ್ನು ನೀಡುತ್ತಿದೆಯೋ ಗೊತ್ತಿಲ್ಲ. ರಜನಿ ಕೇವಲ ಚಿತ್ರದ ಬಗ್ಗೆ ಮಾತ್ರ ಪ್ರಶಂಸೆ ವ್ಯಕ್ತಪಡಿಸಿರಬಹುದು. ಆದರೆ, ರಾಜಕೀಯ ನಾಯಕರಿಗೆ ಈ ಟ್ವೀಟ್ ನಲ್ಲಿ ಭಾಷೆ ನೇರವಾಗಿ ತಟ್ಟಿದ್ದು, ವಿಜಯ್ ಪರ ರಜನಿ ನಿಂತಿರುವುದು ಸ್ಪಷ್ಟವಾಗಿದೆ.
ಸರಳ ಟ್ವೀಟ್ ಮೂಲಕ ರಜನಿ ಸೇಫ್ ಗೇಮ್ ಆಡುತ್ತಿದ್ದಾರಾ? ಅಥವಾ ಸಂಪೂರ್ಣವಾಗಿ ಬಿಜೆಪಿ ಆಫರ್ ಗಳನ್ನು ತೊರೆದು ವಿಪಕ್ಷಗಳ ನಿಂತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಕಾರಣ ಇಷ್ಟೇ, ವಿಜಯ್ ಹೇಳಿ ಕೇಳಿ ಅಪ್ಪಟ ಕಾಂಗ್ರೆಸ್ ಕೂಸು. ಅಲ್ಪ ಸಂಖ್ಯಾತ ನಾಯಕನನ್ನಾಗಿ ವಿಜಯ್ ರನ್ನು ಬಳಸಿಕೊಳ್ಳಲು ಕಾಂಗ್ರೆಸ್ ಈ ಹಿಂದೆ ಯತ್ನಿಸಿದ್ದು ಸುಳ್ಳಲ್ಲ.

'ಮೆರ್ಸಲ್' ಚಿತ್ರದ ಬಗ್ಗೆ ಆರೋಪ
'ಮೆರ್ಸಲ್' ಚಿತ್ರದಲ್ಲಿ ಮೋದಿ ಸರ್ಕಾರದ ಜಿಎಸ್‌ಟಿ, ಡಿಜಿಟಲ್ ಇಂಡಿಯಾ ಕುರಿತಂತೆ ಅವಹೇಳನಕಾರಿ ಡೈಲಾಗ್ ಗಳಿವೆ. ಇಂಥ ದೃಶ್ಯಗಳಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಬಿಜೆಪಿ ಆರೋಪಿಸಿದೆ.
|
ವಿಜಯ್ ಚಿತ್ರದ ಬೆಂಬಲಕ್ಕೆ ನಿಂತ ರಜನಿ
ರಜನಿಕಾಂತ್ ಸಹ 'ಮೆರ್ಸಲ್' ಸಿನಿಮಾದ ಬೆಂಬಲಕ್ಕೆ ನಿಂತಿದ್ದಾರೆ. 'ಚಿತ್ರ ಪ್ರಮುಖ ವಿಷಯವನ್ನು ಪ್ರಸ್ತಾಪಿಸಿದೆ....ವೆಲ್ ಡನ್!! 'ಮೆರ್ಸಲ್' ಚಿತ್ರ ತಂಡಕ್ಕೆ ಅಭಿನಂದನೆಗಳು' ಎಂದು ರಜನಿ ಟ್ವೀಟ್ ಮಾಡಿದ್ದಾರೆ

ತಮಿಳು ಚಿತ್ರರಂಗದ ಗಣ್ಯರು
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರದ ಮಾಜಿ ವಿತ್ತ ಸಚಿವ ಚಿದಂಬರಂ, ಡಿಎಂಕೆ ನಾಯಕ ಸ್ಟಾಲಿನ್, ನಟ ಕಮಲ್ ಹಾಸನ್, ಕಬಾಲಿ ನಿರ್ದೇಶಕ ಪಾ ರಂಜಿತ್, ಪಿ.ಸಿ,ಶ್ರೀರಾಮ್, ಶ್ರೀ ವಿದ್ಯಾ ಸೇರಿದಂತೆ ಹಲವರು 'ಮೆರ್ಸಲ್'ಚಿತ್ರದ ಪರ ನಿಂತಿದ್ದಾರೆ. ಈಗ ರಜನಿ ಕೂಡಾ ಬೆಂಬಲ ವ್ಯಕ್ತಪಡಿಸಿರುವುದು ಬಿಜೆಪಿಗೆ ಹಿನ್ನಡೆಯಾಗಿದೆ.

ರಜನಿಕಾಂತ್ ರಾಜಕೀಯ ಪ್ರವೇಶ
ರಾಜಕೀಯ ಪ್ರವೇಶ ಬಯಸಿರುವ ನಟ ರಜನಿಕಾಂತ್ ಅವರು ಈ ಹಿಂದೆ ಅನೇಕ ಬಾರಿ ಬಿಜೆಪಿ ಪರ ಹೇಳಿಕೆ ನೀಡಿದ್ದರು. ಟ್ವೀಟ್ ಮಾಡಿದ್ದರು. ಬಿಜೆಪಿ ಕೂಡಾ ರಜನಿಯನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಇನ್ನಿಲ್ಲದ್ದಂತೆ ಪ್ರಯತ್ನಿಸಿ ವಿಫಲವಾಯಿತು. ರಜನಿ ಅವರು ರಾಜಕೀಯ ಪಕ್ಷ ಸ್ಥಾಪಿಸಿದರೂ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬ ಆಶಯ ಹೊಂದಲಾಗಿತ್ತು. ಆದರೆ, ಈಗ ರಜನಿ ತಟಸ್ಥರಾಗಿರುತ್ತಾರೋ ಅಥವಾ ಕಾಂಗ್ರೆಸ್ ಪರ ನಿಲ್ಲುತ್ತಾರೋ ಎಂಬ ಚರ್ಚೆ ಆರಂಭವಾಗಿದೆ.

ಚರ್ಚೆ ಅಗತ್ಯವೇ ಇಲ್ಲ
ಮರ್ಸೆಲ್ ಚಿತ್ರವಾಗಲಿ ಮತ್ತೊಂದು ಚಿತ್ರವಾಗಲಿ, ಸರ್ಕಾರದ ವಿರುದ್ಧ ದನಿ ಎತ್ತಿದ ಮಾತ್ರಕ್ಕೆ ಮಹಾಪರಾಧ ಎಂಬಂತೆ ಆಡಳಿತಾರೂಢ ಪಕ್ಷ ಪ್ರತಿಕ್ರಿಯಿಸುವುದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ. ಇನ್ನು ರಜನಿ ಅವರು ಚಿತ್ರವನ್ನು ಮೆಚ್ಚಿದ್ದಾರೆ ಹೊರತು ವಿಜಯ್ ಆಗಲಿ, ಕಾಂಗ್ರೆಸ್ ಪರವಾಗಲಿ ಹೇಳಿಕೆ ನೀಡಿಲ್ಲ ಹೀಗಾಗಿ ಇವೆಲ್ಲದರ ಚರ್ಚೆಯೆ ಅಗತ್ಯವಿಲ್ಲ ಎಂದು ಕಾಲಿವುಡ್ ನಲ್ಲಿ ಮಾತು ಕೇಳಿ ಬಂದಿವೆ.












Click it and Unblock the Notifications