ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ: ಅಭಿಮಾನಿಗಳಲ್ಲಿ ಹರ್ಷ
ಚೆನ್ನೈ, ಜುಲೈ 31: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಚೆನ್ನೈನ ಕಾವೇರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಡಿಎಂಕೆ ಮುಖಂಡ, 94 ವರ್ಷ ವಯಸ್ಸಿನ ಕರುಣಾನಿಧಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂಬ ಸುದ್ದಿ ಕೇಳುತ್ತಿದ್ದಂತೆಯೇ ಆಸ್ಪತ್ರೆ ಎದುರು ಜಮಾಯಿಸಿರುವ ಸಾವಿರಾರು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಜ್ವರ ಮತ್ತು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ಅವರನ್ನು ಜು.28 ರ ಬೆಳಿಗ್ಗೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡು ಮುಖ್ಯಮಂತ್ರಿ ಪಳನೀಸ್ವಾಮಿ ಸೇರಿದಂತೆ ಗಣ್ಯರು ಭೇಟಿ ಮಾಡಿದ್ದರು.
"ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ವದಂತಿಗಳಗೆ ಕಿವಿಗೊಡಬೇಡಿ. ದಯವಿಟ್ಟು ಶಾಂತಿ ಕಾಪಾಡಿ. ಎಲ್ಲರೂ ಮನೆಗೆ ತೆರಳಿ" ಎಂದು ಕರುಣಾನಿಧಿ ಅವರ ಅಭಿಮಾನಿಗಳಲ್ಲಿ ಅವರ ಪುತ್ರ ಎಂ.ಕೆ.ಸ್ಟಾಲಿನ್ ಮನವಿ ಮಾಡಿಕೊಂಡರೂ ಜನರು ಕೇಳುತ್ತಿಲ್ಲ. ಎಲ್ಲರೂ ಮೂರ್ನಾಲ್ಕು ದಿನಗಳಿಂದ ಆಸ್ಪತ್ರೆ ಎದುರು ಜಮಾಯಿಸಿದ್ದಾರೆ.












Click it and Unblock the Notifications