ಮೊದಲ ಉಗ್ರ ಹಿಂದು: ಸತ್ಯವನ್ನೇ ಹೇಳಿದ್ದೇನೆ ಎಂದ ಕಮಲ್ ಹಾಸನ್
ಮಧುರೈ, ಮೇ 16: "ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಾನು ಐತಿಹಾಸಿಕ ಸತ್ಯವನ್ನೇ ಹೇಳಿದ್ದೇನೆ" ಎಂದು ತಮಿಳುನಾಡಿನ ನಟ-ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮೇ 13 ರಂದು ತಮಿಳುನಾಡಿನ ಅರವಕುರಿಚಿಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, "ನಾನೊಬ್ಬ ಹೆಮ್ಮೆಯ ಭಾರತೀಯ. ಆದರೆ ನಾನೊಂದು ಮಾತು ಹೇಳುತ್ತೇನೆ. ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು" ಎಂದಿದ್ದರು.
ಅವರ ಹೇಳಿಕೆಯನ್ನು ವಿರೋಧಿಸಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ, ಕಮಲ್ ಹಾಸನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ, ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಆದರೆ ತಾವು ಯಾವುದೇ ಕಾರಣಕ್ಕು ತಪ್ಪು ಮಾತನಾಡಿಲ್ಲ. ಐತಿಹಾಸಿಕ ಸತ್ಯವನ್ನೇ ಹೇಳಿದ್ದೇನೆ ಎಂದು ಆವರು ಹೇಳಿದ್ದಾರೆ.

ಮೌನಮುರಿದ ಕಮಲ್ ಹಾಸನ್
ತಮ್ಮ ವಿವಾದಾತ್ಮಕ ಹೇಳಿಕೆಯ ನಂತರ ಮೊದಲ ಬಾರಿಗೆ ಮೌನ ಮುರಿದ ಕಮಲ್ ಹಾಸನ್, "ಕೆಲವರು ನನ್ನ ಮೇಲೆ ಕೋಪಗೊಂಡಿದ್ದಾರೆ. ನಾನು ಅರವಕುರಿಚಿಯಲ್ಲಿ ಮಾತನಾಡಿದ್ದು ಅವರಿಗೆ ಇಷ್ಟವಾಗಿಲ್ಲ ಅನ್ನಿಸುತ್ತೆ. ಆದರೆ ನಾನು ಅಂದು ಏನು ಮಾತನಾಡಿದ್ದೇನೋ ಅದು ಐತಿಹಾಸಿಕ ಸತ್ಯ. ನಾನು ಯಾರನ್ನೂ ಪ್ರಚೋದಿಸಲು ಈ ಮಾತು ಹೇಳಿಲ್ಲ" ಎಂದರು.

ಜಾತಿ-ಮತದ ಬಗ್ಗೆ ಮಾತನಾಡಿಲ್ಲ
"ನಾನು ಸತ್ಯವನ್ನೇ ಹೇಳಿದ್ದೇನೆ. ಸತ್ಯ ಎಂದಿಗೂ ಗೆಲ್ಲುತ್ತದೆ. ಯಾವುದೇ ಜಾತಿ-ಮತವನ್ನು ಗುರಿಯಾಗಿಸಿ ನಾನು ಹೇಳಿಲ್ಲ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಆಥ ನಾಥೂರಾಮ್ ಗೋಡ್ಸೆ ಎಂದು ನಾನು ಹೇಳಿದ್ದೆ. ಮಹಾತ್ಮಾ ಗಾಂಧಿಯವರನ್ನು ಕೊಂದ ಗೋಡ್ಸೆಯನ್ನು ಉಗ್ರ ಎನ್ನದೆ ಏನೆನ್ನಬೇಕು?" ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.

ನಾಲಿಗೆ ಕತ್ತರಿಸಬೇಕು ಎಂದಿದ್ದ ಸಚಿವ
ಕಮಲ್ ಹಾಸನ್ ಅವರ ಈ ಹೇಳಿಕೆಯನ್ನು ವಿರೋಧಿಸಿದ್ದ ಎಐಎಡಿಎಂಕೆ ಸಚಿವ ರಾಜೇಂದ್ರ ಬಾಲಾಜಿ, ಕಮಲ್ ಹಾಸನ್ ನಾಲಿಗೆಯನ್ನು ಕತ್ತರಿಸಬೇಕು. ಅವರು ಏನು ಮಾತನಾಡುತ್ತಾರೆ ಎಂಬುದೇ ಅವರಿಗೆ ಗೊತ್ತಿಲ್ಲ. ಅವರು ಏನು ಮಾತನಾಡಿದರೂ ಅದು ವಿವಾದವಾಗುವಂತೆಯೇ ಮಾತನಾಡುತ್ತಾರೆ. ಹಿಂದುಗಳು ಕಡಿಮೆ ಇರುವ ಪ್ರದೇಶಕ್ಕೆ ತೆರಳಿ ಮೊದಲ ಉಗ್ರ ಹಿಂದು ಎಂಬ ಹೇಳಿಕೆ ನೀಡಿದ್ದಾರೆ, ಆದರೆ ಅವರಿಗೆ ಗೊತ್ತಿರಲಿ, ಭಯೋತ್ಪಾದನೆಗೆ ಧರ್ಮವಿಲ್ಲ" ಎಂದು ಬಾಲಾಜಿ ಹೇಳಿದ್ದರು. ಎಂಎನ್ ಎಂ ಪಕ್ಷ ಬಾಲಾಜಿ ವಿರುದ್ಧ ದೂರು ದಾಖಲಿಸಿತ್ತು!

ಸ್ಪಷ್ಟನೆ ನೀಡಿದ್ದ ಪಕ್ಷ
ಕಮಲ್ ಹಾಸನ್ ಅವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದ ಎಂಎನ್ ಎಂ ಉಪಾಧ್ಯಕ್ಷ ಆರ್ ಮಹೇಂದ್ರನ್ "ಆ ಹೇಳಿಕೆಯನ್ನು ಕಮಲ್ ಹಾಸನ್ ನೀಡಿದ ಸನ್ನಿವೇಶ ಹಾಗಿತ್ತು. ಅವರು ಯಾವುದೇ ಧರ್ಮದಲ್ಲಾಗಲೀ, ಭಯೋತ್ಪಾದನೆ ಒಳಿತಲ್ಲ. ಅದಕ್ಕೆ ಹಿಂದು, ಮುಸ್ಲಿಂ ಎಂಬ ಭೇದವಿಲ್ಲ ಎಂಬ ಅರ್ಥದಲ್ಲಿ ಹೇಳಿದ್ದರು. ಆ ಸಂದರ್ಭದಲ್ಲಿ ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದು. ಆತನ ಹೆಸರು ನಾಥೂರಾಮ್ ಗೋಡ್ಸೆ ಎಂದು ಹಾಸನ್ ಹೇಳಿದ್ದರು. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ" ಎಂದಿದ್ದರು.











Click it and Unblock the Notifications