ನ್ಯಾ.ಆರುಮುಗಸ್ವಾಮಿ ನೇತೃತ್ವದಲ್ಲಿ ಜಯಲಲಿತಾ ಸಾವಿನ ತನಿಖೆ
ಚೆನ್ನೈ, ಸೆಪ್ಟೆಂಬರ್ 25 : ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸುವ ವಿಚಾರಣಾ ಆಯೋಗಕ್ಕೆ ನಿವೃತ್ತ ನ್ಯಾಯಮೂರ್ತಿ ಆರುಮುಗಸ್ವಾಮಿ ಅವರನ್ನು ಮುಖ್ಯಸ್ಥರಾಗಿ ನೇಮಿಸಲಾಗಿದೆ. 2016ರ ಡಿಸೆಂಬರ್ 5ರಂದು ಜಯಲಲಿತಾ ಸಾವನ್ನಪ್ಪಿದ್ದರು.
ತಮಿಳುನಾಡು ಸರ್ಕಾರ ಸೋಮವಾರ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರುಮುಗಸ್ವಾಮಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ಘೋಷಣೆ ಮಾಡಿದ್ದರು.

ಎರಡು ಹೋಳಾಗಿದ್ದ ಎಐಎಡಿಎಂಕೆ ಪಕ್ಷ ವಿಲೀನವಾಗಬೇಕಾದರೆ ಜಯಲಲಿತಾ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಬಣ ಬೇಡಿಕೆ ಇಟ್ಟಿತ್ತು. ಮುಖ್ಯಮಂತ್ರಿ ಪಳನಿಸ್ವಾಮಿ ಸಹ ಇದಕ್ಕೆ ಒಪ್ಪಿಗೆ ನೀಡಿದ್ದರು.
75 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಜೆ.ಜಯಲಲಿತಾ ಅವರು 2016ರ ಡಿಸೆಂಬರ್ 5ರಂದು ಮೃತಪಟ್ಟಿದ್ದರು. ಅವರ ಸಾವಿನ ಬಳಿಕ ಸಾವಿನ ಕಾರಣದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಸಾವಿನ ಕುರಿತು ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಪಳನಿಸ್ವಾಮಿ ಅವರು ಪನ್ನೀರ್ ಸೆಲ್ವಂ ಬಣದ ಬೇಡಿಕೆಗೆ ಒಪ್ಪಿದ ಬಳಿಕವೇ ಎಐಎಡಿಎಂಕೆ ಪಕ್ಷ ಒಂದಾಗಿದ್ದವು.











Click it and Unblock the Notifications