ಚೆಟ್ಟಿನಾಡ್ ಸಮೂಹದ ಮೇಲೆ ತೆರಿಗೆ ಇಲಾಖೆ ದಾಳಿ
ಮುಂಬೈ, ಜೂ.10: ಚೆಟ್ಟಿನಾಡ್ ಸಮೂಹ ಸಂಸ್ಥೆ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಂಎಎಂ ರಾಮಸ್ವಾಮಿ ಒಡೆತನದ ಸಿಮೆಂಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನೇಕ ಸಂಸ್ಥೆ ಹೊಂದಿರುವ ಚೆಟ್ಟಿನಾಡ್ ಸಮೂಹಕ್ಕೆ ಆದಾಯ ತೆರಿಗೆ ಇಲಾಖೆ ಆಘಾತ ನೀಡಿದೆ.
ತಮಿಳುನಾಡಿನ 30 ಕಡೆಗಳಲ್ಲಿ ಆಂಧ್ರಪ್ರದೇಶ ಹಾಗೂ ಮುಂಬೈನಲ್ಲಿರುವ ಚೆಟ್ಟಿನಾಡ್ ಕಚೇರಿ ಮೇಲೆ ಬುಧವಾರ ಏಕಕಾಲಕ್ಕೆ ಐಟಿ ದಾಳಿ ನಡೆಸಲಾಗಿದೆ.

ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿದೆ. ಇದಕ್ಕೂ ಇತ್ತೀಚಿನ ಚೆಟ್ಟಿನಾಡ್ ಕುಟುಂಬದ ಕಲಹಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ.
ಸಮೂಹದ ಅಧ್ಯಕ್ಷ ಎಂಎಎಂ ರಾಮಸ್ವಾಮಿ(84) ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ದತ್ತು ಪುತ್ರ ಹಾಗೂ ಚೆಟ್ಟಿನಾಡ್ ಸಿಮೆಂಟ್ಸ್ನ ಮುಖ್ಯಸ್ಥ ಎಂಎಎಂಆರ್ ಮುತ್ತಯ್ಯ (ಅಯ್ಯಪ್ಪನ್) ಕೌಟುಂಬಿಕ ಆಸ್ತಿ ಜತೆಗೆ ಸಮೂಹದ ಹಲವಾರು ಕಂಪನಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಜತೆಗೆ ಎಲ್ಲಾ ವ್ಯಾಪಾರಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ತಾವು ಅವರ ದತ್ತಕವನ್ನು ರದ್ದುಗೊಳಿಸುವುದಾಗಿ ಘೊಷಿಸಿದ್ದರು. ಜತೆಗೆ ಚೆಟ್ಟಿನಾಡ್ ಸಿಮೆಂಟ್ಸ್ ಕಂಪನಿ ಹಲವಾರು ವರ್ಷಗಳಿಂದ ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿರುವುದಾಗಿ ದೂರಿದ್ದರು.
ನಾನು ದಾನ ಧರ್ಮ ಎಂದರೆ ಆತ ಪರಮ ಲೋಬಿ, ಜುಗ್ಗನಂತೆ ವರ್ತಿಸತೊಡಗಿದ್ದಾನೆ. ಕುದುರೆಗಳಿಗೂ ನೆಲೆ ಉಳಿಸಲಿಲ್ಲ ಎಂದರು.
ವಿಶ್ವದ ಅತ್ಯಂತ ಶ್ರೇಷ್ಠ ಕುದುರೆ ಲಾಯ, ರೇಸ್ ಕುದುರೆ ತಳಿಗಳನ್ನು ಹೊಂದಿರುವ ಚೆಟ್ಟಿನಾಡ್ ಕುಟುಂಬದ ಕಲಹದಿಂದಾಗಿ ಕುದುರೆಗಳ ನೆಲೆ 120 ಎಕರೆಯಿಂದ 30 ಎಕರೆಗೆ ಇಳಿದಿತ್ತು. ಅಯ್ಯಪ್ಪನ್ ನಿಂದಾಗಿ ತಲೆ ಎತ್ತಿದ್ದ ದೊಡ್ಡ ಗೋಡೆಗೆ ಒಂದು ಕುದುರೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದು ರಾಮಸ್ವಾಮಿ ಅವರಿಗೆ ತೀವ್ರ ದುಃಖ ತರಿಸಿತ್ತು.
ಚೆಟ್ಟಿನಾಡ್ ಸಿಮೆಂಟ್, ಹೆಲ್ತ್ ಸಿಟಿ, ಸೌಥ್ ಇಂಡಿಯಾ ಜವಳಿ ಉದ್ಯಮ, ಬಂದರು ಸರ್ವೀಸ್, ರಿಯಲ್ ಎಸ್ಟೇಟ್, ಲಿಗ್ನೇಟ್ ಸಾಗಣಿಕೆ, ಕಲ್ಲಿದ್ದಲು ಉದ್ಯಮ, ಕ್ವಾರ್ಟ್ಜ್, ಗಾಳಿಯಂತ್ರ, ಆರ್ಥಿಕ ಸಂಸ್ಥೆ ಹೀಗೆ ಅನೇಕ ಉದ್ಯಮಗಳಲ್ಲಿ ಚೆಟ್ಟಿನಾಡ್ ಸಮೂಹ ತನ್ನ ಛಾಪು ಮೂಡಿಸಿದೆ.












Click it and Unblock the Notifications