ಕೊರೊನಾ ಭೀತಿ: ರಾಮೇಶ್ವರಂನಿಂದ ಚೀನಾ ಪ್ರವಾಸಿ ವಾಪಸ್
ರಾಮೇಶ್ವರಂ, ಫೆಬ್ರವರಿ 11: ಚೀನಾದಿಂದ ಬಂದಿದ್ದ 25 ವರ್ಷದ ಪ್ರವಾಸಿಗನನ್ನು ಕೊರೊನಾ ವೈರಸ್ ಭೀತಿಯಿಂದಾಗಿ ಮರಳಿ ಆತನ ದೇಶಕ್ಕೆ ಕಳುಹಿಸಲಾಗಿದೆ.
ಚೀನಾದ ಅನ್ಹುಯಿ ಪ್ರಾಂತ್ಯದ ನಿವಾಸಿ ಸೆಂಘ್ ಶನಿವಾರ ತಮಿಳುನಾಡಿನ ರಾಮೇಶ್ವರಂಗೆ ಬಂದಿದ್ದರು. ಅವರ ಹಾಜರಾತಿ ಸ್ಥಳೀಯರಲ್ಲಿ ತೀವ್ರ ಕಳವಳ ಮೂಡಿಸಿತ್ತು. ಅವರಲ್ಲಿ ಕೊರೊನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಾರದೆ ಇದ್ದರೂ ಅವರಿಂದ ಸೋಂಕು ಹರಡಬಹುದು ಎಂಬ ಭಯ ಮೂಡಿತ್ತು.
ಸೆಂಘ್ ಅವರ ಊರು, ಕೊರೊನಾ ವೈರಸ್‌ನ ಮೂಲ ಕೇಂದ್ರವಾದ ವುಹಾನ್ ನಗರದಿಂದ 450 ಕಿ.ಮೀ. ಗೂ ಹೆಚ್ಚು ದೂರದಲ್ಲಿದೆ. ಅವರು ಪ್ರವಾಸಿ ವೀಸಾ ಮೂಲಕ ಜ. 24ರಂದು ಭಾರತಕ್ಕೆ ಬಂದಿದ್ದರು. ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ರಾಮೇಶ್ವರಂಗೆ ಬಂದು ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.

ಸೆಂಘ್ ಅವರದು ಚೀನಾ ಎನ್ನುವುದು ತಿಳಿಯುತ್ತಿದ್ದಂತೆಯೇ ಹೋಟೆಲ್ ಸಿಬ್ಬಂದಿ ಭಯಗೊಂಡು ಪೊಲೀಸರಿಗೆ ಕರೆ ಮಾಡಿದ್ದರು. ಬಳಿಕ ಕಂದಾಯ ಮತ್ತು ಆರೋಗ್ಯ ಅಧಿಕಾರಿಗಳೂ ಆಗಮಿಸಿದರು. ಹೋಟೆಲ್‌ನಲ್ಲಿಯೇ ಅವರ ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಲಾಯಿತು.
'ಅವರಲ್ಲಿ ಕೊರೊನಾ ವೈರಸ್‌ನ ಯಾವುದೇ ಗುಣಲಕ್ಷಣಗಳು ಕಾಣಿಸಲಿಲ್ಲ. ಅವರು ಆರೋಗ್ಯವಾಗಿಯೇ ಇದ್ದರು. ಆದರೆ ಈ ರೀತಿ ಆತಂಕದ ವಾತಾವರಣದಲ್ಲಿ ಇರಬಾರದು ಎಂಬ ಉದ್ದೇಶದಿಂದ ಅವರಿಗೆ ನಿಯಮಾವಳಿಗಳ ಪ್ರಕಾರ 14 ದಿನ ಪ್ರತ್ಯೇಕವಾಗಿ ಇರುವಂತೆ ಅಥವಾ ದೇಶ ಬಿಟ್ಟು ಹೋಗುವಂತೆ ಕೇಳಿದೆವು. ಅವರು ಹಿಂಜರಿಕೆಯಿಂದಲೇ ಚೀನಾಕ್ಕೆ ಹಿಂದಿರುಗಲು ಒಪ್ಪಿಕೊಂಡರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಂಘ್ ಅವರಿಗಾಗಿ ಮದುರೆಯಿಂದ ಚೆನ್ನೈಗೆ ವಿಮಾನ ಟಿಕೆಟ್ ಒದಗಿಸಲಾಯಿತು. ರಾಮೇಶ್ವರಂನಿಂದ ಪ್ರತ್ಯೇಕ ಟ್ಯಾಕ್ಸಿಯಲ್ಲಿ ಅವರು ತೆರಳಿದರು. ಅವರೊಂದಿಗೆ ವೈದ್ಯಕೀಯ ತಂಡ ಕೂಡ ಟ್ಯಾಕ್ಸಿಯಲ್ಲಿ ತೆರಳಿತು. ನಂತರ ಚೆನ್ನೈನ ವಲಸೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಮದುರೆಯಿಂದ ವಿಮಾನದಲ್ಲಿ ಕಳುಹಿಸಲಾಯಿತು.












Click it and Unblock the Notifications