138 ವರ್ಷದ 'ದಿ ಹಿಂದೂ' ಪತ್ರಿಕೆಗೆ ಹಿಂದೆಂದೂ ಹೀಗಾಗಿರಲಿಲ್ಲ!
ಚೆನ್ನೈ, ಡಿ 2: ತಮಿಳುನಾಡು ರಾಜಧಾನಿ ಚೆನ್ನೈ ಮಹಾನಗರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ, 138 ವರ್ಷಗಳಿಂದ ಸತತವಾಗಿ ಮುದ್ರಣಗೊಳ್ಳುತ್ತಿರುವ ಭಾರತದ ಹೆಸರಾಂತ ಆಂಗ್ಲ ದೈನಿಕ 'ದಿ ಹಿಂದೂ' ಪತ್ರಿಕೆಯ ಒಂದು ದಿನದ ಆವೃತ್ತಿ ಅಚ್ಚಾಗಲಿಲ್ಲ.
ಸಂಸ್ಥೆಯ ನೌಕರರು ಕಚೇರಿಗೆ ಬರಲಾಗದೇ ಇದ್ದದ್ದರಿಂದ, ದೇಶದ ಅತ್ಯಂತ ಹಳೆಯ ಪತ್ರಿಕೆಯಲ್ಲೊಂದಾದ ದಿ ಹಿಂದೂ ಪತ್ರಿಕೆಯ ಬುಧವಾರದ (ಡಿ 2) ಆವೃತ್ತಿ ಮುದ್ರಣಗೊಳ್ಳಲಿಲ್ಲ. (ಮಳೆಯಿಂದ ಜರ್ಝರಿತ ತಮಿಳುನಾಡಿನ ಇತ್ತೀಚಿನ ವರದಿಗಳು)

ಹಬ್ಬಹರಿದಿನಗಳಿಗೆ ನೀಡುವ ರಜೆಯನ್ನು ಹೊರತು ಪಡಿಸಿ 1878ರಿಂದ ಸತತವಾಗಿ ಮುದ್ರಣಗೊಳ್ಳುತ್ತಿರುವ ಹಿಂದೂ ಪತ್ರಿಕೆ ಇದೇ ಮೊದಲ ಬಾರಿಗೆ ಬುಧವಾರದಂದು ಅಚ್ಚಾಗಲಿಲ್ಲ. ಹಾಗಾಗಿ, ಚೆನ್ನೈ, ವೆಲ್ಲೂರು, ತಿರುಪತಿ ಮತ್ತು ಪಾಂಡಿಚೇರಿ ನಗರದಲ್ಲಿ ದಿ ಹಿಂದೂ ಪತ್ರಿಕೆ ಹಂಚಿಕೆಯಾಗಲಿಲ್ಲ.
ಪತ್ರಿಕೆಯ ಪ್ರಕಾಶಕರಾದ ಎನ್ ಮುರಳಿ ಈ ಬಗ್ಗೆ ಮಾತನಾಡುತ್ತಾ, ಪತ್ರಿಕೆಯ ಪ್ರಿಟಿಂಗ್ ಘಟಕ ನಗರದ ಹೊರ ಪ್ರದೇಶವಾದ ಮರೈಮಲಾನಗರ್ ಎನ್ನುವಲ್ಲಿದೆ. ಇದು ಚೆನ್ನೈ ಹೃದಯ ಭಾಗದಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿದೆ.
ಸತತವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ನೌಕರರು ಪ್ರಿಟಿಂಗ್ ಘಟಕಕ್ಕೆ ತಲುಪಲಾಗಲಿಲ್ಲ. ಹಿಂದೂ ಪತ್ರಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಾಗುತ್ತಿರುವುದು. ಒಂದು ವೇಳೆ ಪತ್ರಿಕೆ ಅಚ್ಚಾಗಿದ್ದರೂ, ಮನೆಮನೆಗೆ ತಲುಪಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ ಎಂದು ಮುರುಳಿ ಹೇಳಿದ್ದಾರೆ.
ಆದರೆ ಚೆನ್ನೈನಿಂದ ಮುದ್ರಣಗೊಳ್ಳುವ ಇಂಡಿಯನ್ ಎಕ್ಸ್ ಪ್ರೆಸ್, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್ ಮುಂತಾದ ಪತ್ರಿಕೆಯ ಬುಧವಾರದ ಮುದ್ರಣ ಅಭಾದಿತವಾಗಿತ್ತು.












Click it and Unblock the Notifications