ಜಯಲಲಿತಾ ಅನಾರೋಗ್ಯ: ವದಂತಿ, ಪೂಜೆ, ಕೇಸುಗಳು...

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಅಕ್ಟೋಬರ್ 18: ವದಂತಿಗಳು, ಪೂಜೆ-ಪುನಸ್ಕಾರ, ಪೊಲೀಸರ ಕೇಸುಗಳು ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಆರೋಗ್ಯವಾಗಿದ್ದಾರೆ ಎಂಬ ಸುದ್ದಿ ಕೇಳಲು ಕಾತರಿಸುತ್ತಿರುವ ಜನ..ಇದು ತಮಿಳುನಾಡಿನ ಬಗ್ಗೆ ಸದ್ಯದ ಮಾಹಿತಿ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿ ಮೂರು ವಾರಗಳೇ ಕಳೆದುಹೋದವು.

ಕಳೆದ ಏಳು ದಿನಗಳಿಂದ ಅಪೋಲೋ ಆಸ್ಪತ್ರೆಯಿಂದ 'ಅಮ್ಮ' ಆರೋಗ್ಯ ಸ್ಥಿತಿ ಬಗ್ಗೆ ವರದಿ ಯಾವುದೂ ಇಲ್ಲ. ಅತ್ಯುತ್ತಮ ವೈದ್ಯರೇ ಜಯಲಲಿತಾ ಆರೋಗ್ಯದ ಸ್ಥಿತಿ ಗಮನಿಸುತ್ತಿದ್ದರೂ ಆಸ್ಪತ್ರೆ ಹೊರಗಿನ ಸ್ಥಿತಿ ಉದ್ವಿಗ್ನವಾಗಿಯೇ ಇದೆ. ಜಯಲಲಿತಾ ಬೆಂಬಲಿಗರು ರಸ್ತೆರಸ್ತೆಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ನಾನಾ ಬಗೆಯಲ್ಲಿ ಪೂಜೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.[ಜಯಲಲಿತಾ ನಿಸ್ತೇಜ, ಆರೋಗ್ಯ ವರದಿ ನಿಶ್ಯಬ್ದ]

Jayalalithaa

ಇನ್ನು ಆಸ್ಪತ್ರೆ ಹೊರಗಡೆ ಕೆಲ ವ್ಯಾಪಾರಿಗಳು ತಕ್ಷಣದ ಸನ್ನಿವೇಶವನ್ನು ತಮ್ಮ ಲಾಭಕ್ಕೆ ಬಳಸಿಕೊಂಡು, ಹಣ ಮಾಡುತ್ತಿದ್ದಾರೆ. ಪೊಲೀಸರಂತೂ ಕೇಸು ಹಾಕುವುದರಲ್ಲೇ ಬಿಡುವಿಲ್ಲದಷ್ಟು ತಲ್ಲೀನರಾಗಿದ್ದಾರೆ. ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದರೆ ಕೇಸು. ಅದು ಖಾಸಗಿಯಾಗಿ ಆದರೂ ಸರಿ. ಒಟ್ಟಿನಲ್ಲಿ ಅಮ್ಮ ಆರೋಗ್ಯದ ಬಗ್ಗೆ ಯಾರೂ ಕೆಮ್ಮಂಗಿಲ್ಲ.

ಕಳೆದ ವಾರವೆಲ್ಲ ಟಿವಿಯಲ್ಲಿ ಕಂಡ ದೃಶ್ಯಗಳನ್ನೆಲ್ಲ ಮರೆಯುವಂತೆಯೇ ಇಲ್ಲ. ಅಮ್ಮನ ಆರೋಗ್ಯ ಸುಧಾರಿಸಲಿ ಎಂಬ ಕಾರಣಕ್ಕೆ ಬೆನ್ನಿಗೆ ಕಬ್ಬಿಣದ ತಂತಿ ಸಿಕ್ಕಿಸಿಕೊಂಡು, ಅದಕ್ಕೆ ಹಗ್ಗ ಕಟ್ಟಿ ನೇತಾಡುತ್ತಾ ಪ್ರಾರ್ಥನೆ ಸಲ್ಲಿಸಿದ ಆ ದೃಶ್ಯವಂತೂ ಮರೆಯಲು ಸಾಧ್ಯವೇ ಇಲ್ಲ. ಮತ್ತೊಬ್ಬ ವ್ಯಕ್ತಿ ಮುಳ್ಳಿನ ಹಾಸಿಗೆ ಮೇಲೆ ಇಪ್ಪತ್ನಾಲ್ಕು ಗಂಟೆ ಮಲಗಿ ಅಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾನೆ.[ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ ರಜನಿಕಾಂತ್]

ಇನ್ನು ಜಯಲಲಿತಾ ಪ್ರತಿನಿಧಿಸುವ ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರದಲ್ಲಂತೂ ಮತ್ತೂ ವಿಚಿತ್ರ ಆಚರಣೆ. ಸಣ್ಣ ಸಣ್ಣ ಮಕ್ಕಳೂ ಬಾಯಿಗೆ ಕಬ್ಬಿಣದ ತಂತಿ ಸಿಕ್ಕಿಸಿಕೊಂಡು, ಜಯಲಲಿತಾ ಆರೋಗ್ಯ ಸುಧಾರಿಸಲಿ ಎಂದು ಬೇಡಿಕೊಂಡಿದ್ದಾರೆ. ಇಂಥ ಮಕ್ಕಳು ಮೆರವಣಿಗೆಯಲ್ಲಿ ಸಾಗಿದ್ದಾರೆ. ಪಿಎಂಕೆ ನಾಯಕ ಎಸ್.ರಾಮದಾಸ್ ಈ ಘಟನೆಯನ್ನು, ಮಾನವ ಹಕ್ಕುಗಳ ಉಲ್ಲಂಘನೆ ಎಂದಿದ್ದಾರೆ.

Jayalalithaa prayer

ನೂರಾರು ಮಂದಿ ಪಾಲ್ಗೊಂಡಿದ್ದ ಆ ಮೆರವಣಿಗೆಯಲ್ಲಿ ಐದರಿಂದ ಹನ್ನೆರಡು ವರ್ಷದ ಮಕ್ಕಳು ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ಆರೋಪಿಸಿದ್ದಾರೆ. ಇದು ಒಂದು ಕಡೆಯಾಯಿತು. ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವದಂತಿ ಹಬ್ಬಿಸುವವರ ವಿರುದ್ಧ ಇಪ್ಪತ್ತಕ್ಕು ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ ಪೊಲೀಸರು.[ಅಪೋಲೋ ಆಸ್ಪತ್ರೆ ಹೊರಗೆ ವ್ಯಾಪಾರಿಗಳಿಗೆ ಭರ್ತಿ ಕಮಾಯಿ]

ವಿಚಿತ್ರ ಅಂದರೆ, ಇಬ್ಬರು ತಮ್ಮಷ್ಟಕ್ಕೆ ಈ ವಿಚಾರ ಮಾತನಾಡುತ್ತಿದ್ದರೆ ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರು ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಲ್ಲ, ಸುದ್ದಿ ಹಬ್ಬಿಸಿಲ್ಲ. ಆದರೂ ಪ್ರಕರಣ ದಾಖಲಿಸಲಾಗಿದೆ ಎಂದು ಅರೋಪಿಸಲಾಗಿದೆ.

ಈ ಮಧ್ಯೆ ಅಪೋಲೋ ಆಸ್ಪತ್ರೆ ಹೊರಭಾಗದಲ್ಲಿ ಪೂಜೆ-ಪ್ರಾರ್ಥನೆ ಮುಂದುವರಿದಿದೆ. ಜಯಲಲಿತಾ ಅವರ ಚಿತ್ರವಿರುವ ಪೆನ್, ಹೆಡ್ ಬ್ಯಾಂಡ್, ವ್ಯಾಲೆಟ್, ಕೀ ಚೈನ್ ಭರ್ಜರಿಯಾಗಿ ಮಾರಾಟವಾಗುತ್ತಿದೆ. ವ್ಯಾಪಾರಿಗಳೇ ಹೇಳೋ ಹಾಗೆ ದಿನಕ್ಕೆ ಎರಡು ಸಾವಿರಕ್ಕೆ ಮೋಸವಿಲ್ಲ. ಅಮ್ಮ ಆರೋಗ್ಯ ಹೇಗಿದೆ ಎಂದು ಆಸ್ಪತ್ರೆಗೆ ಬರುವವರು ಏನಾದರೂ ಒಂದನ್ನು ಖರೀದಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
It has been over three weeks since the Tamil Nadu chief minister as admitted to the Appolo Hospital. Seven days have passed since a medical bulletin has been issued. In the past couple of days one has witnessed unique rituals being performed.
Please Wait while comments are loading...