ಎಐಎಡಿಎಂಕೆ ವಿಲೀನ ವಿಳಂಬವಾಗಿದ್ದು ಏಕೆ?
ಚೆನ್ನೈ, ಅ. 19 : ಜೆ.ಜಯಲಲಿತಾ ಸಾವಿನ ಬಳಿಕ ಇಬ್ಭಾಗವಾಗಿರುವ ಎಐಎಡಿಎಂಕೆ ವಿಲೀನ ವಿಳಂಬವಾಗಿದೆ. ಶುಕ್ರವಾರ ರಾತ್ರಿ ವಿಲೀನ ಪ್ರಕ್ರಿಯೆ ವೇಳೆ ಹೈಡ್ರಾಮ ನಡೆದ್ದಿದ್ದು, ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ ದೂರವಾಗಿಯೇ ಉಳಿದಿವೆ.
ವಿಲೀನ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಸಲು ಪನ್ನೀರ್ ಸೆಲ್ವಂ ಬಣ ಸಭೆ ನಡೆಸಿತು. ಆದರೆ, ಸಭೆಯಲ್ಲಿ ಒಮ್ಮತದ ತೀರ್ಮಾನ ಹೊರಬಂದಿಲ್ಲ. ಶಶಿಕಲಾ ಮತ್ತು ಅವರ ಕುಟುಂಬ ಸದಸ್ಯರನ್ನು ಪಕ್ಷದಿಂದ ಹೊರಗಿಡಬೇಕು ಎಂಬ ಷರತ್ತನ್ನು ಬಣ ವಿಧಿಸಿದ್ದು, ವಿಳಂಬಕ್ಕೆ ಕಾರಣವಾಗಿದೆ.

ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪಳನಿ ಸ್ವಾಮಿ ಬಣ ಜಯಲಲಿತಾ ಸಾವಿನ ಪ್ರಕರಣದ ತನಿಖೆಗೆ ಆದೇಶ ನೀಡಿರುವುದನ್ನು ಒಪ್ಪಿಕೊಳ್ಳಲಾಯಿತು. ಆದರೆ, ಶಶಿಕಲಾ ಕುಟುಂಬ ಸದಸ್ಯರನ್ನು ಪಕ್ಷದಿಂದ ಹೊರಗಿಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಪನ್ನೀರ್ ಸೆಲ್ವಂ ಬಣ ಪಟ್ಟು ಹಿಡಿಯಿತು.
ಅಧಿಕಾರ ಹಂಚಿಕೆ ವಿವಾದವೂ ಎರಡೂ ಬಣಗಳ ವಿಲೀನಕ್ಕೆ ಅಡ್ಡಿಯಾಗಿದೆ. ಪನ್ನೀರ್ ಸೆಲ್ವಂ ಅವರನ್ನು ಉಪ ಮುಖ್ಯಮಂತ್ರಿ ಮಾಡಿ, ಹಣಕಾಸು ಖಾತೆ ನೀಡಬೇಕು ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಪನ್ನೀರ್ ಸೆಲ್ವಂಗೆ ನೀಡಬೇಕು ಎಂಬ ಬೇಡಿಕೆಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
ಶುಕ್ರವಾರ ಸಂಜೆ ಎರಡೂ ಬಣಗಳ ವಿಲೀನಕ್ಕೆ ವೇದಿಕೆ ಸಿದ್ಧವಾಗಿತ್ತು. ಜೆ.ಜಯಲಲಿತಾ ಸಮಾಧಿ ಬಳಿಗೆ ಇಬ್ಬರೂ ನಾಯಕರು ಆಗಮಿಸಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕಿತ್ತು. ಆದರೆ, ಪನ್ನೀರ್ ಸೆಲ್ವಂ ಬಣ ದೂರ ಉಳಿದಿದ್ದು ತಿಳಿಯುತ್ತಿದ್ದಂತೆ ವಿಲೀನ ಪ್ರಕ್ರಿಯೆ ವಿಳಂಬವಾಗುವುದು ಖಚಿತವಾಯಿತು.











Click it and Unblock the Notifications