ಜಯಾಗೆ ಬೇಲ್ ಸಿಗದಿದ್ದರೆ ಕನ್ನಡಿಗರ ದಿಗ್ಬಂಧನ?
ಬೆಂಗಳೂರು/ಚೆನ್ನೈ, ಅ. 7 : ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಜಯಲಲಿತಾ ಅವರಿಗೆ ಜಾಮೀನು ಸಿಗದಿದ್ದರೆ ತಮಿಳುನಾಡಿನಲ್ಲಿರುವ ಲಕ್ಷಾಂತರ ಕನ್ನಡಿಗರಿಗೆ ದಿಗ್ಬಂಧನ ಹಾಕಲಾಗುವುದು ಎಂದು ಎಐಎಡಿಎಂಕೆ ಪಕ್ಷಕ್ಕೆ ಸೇರಿದ ಬ್ಯಾನರ್ ಎಚ್ಚರಿಕೆ ನೀಡಿದೆ ಮತ್ತು ಕರ್ನಾಟಕದ ಜನತೆಗೆ ಸವಾಲು ಎಸೆದಿದೆ.
ಇದೀಗ ಬಂದ ಸುದ್ದಿ : ಜಯಲಲಿತಾ ಮತ್ತು ಇತರರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ತಮಿಳಿನಲ್ಲಿ ಬರೆಯಲಾಗಿರುವ ಹಲವಾರು ಬ್ಯಾನರುಗಳು, ಭಿತ್ತಿಪತ್ರಗಳು ನಗರದಾದ್ಯಂತ ರಾರಾಜಿಸುತ್ತಿವೆ. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷವಾಗಲಿ, ಪ್ರತಿಪಕ್ಷಗಳಾಗಲಿ ಕನ್ನಡಿಗರು ಮತ್ತು ತಮಿಳರು ಸಾಮರಸ್ಯದಿಂದಿರುವಂತೆ ಯಾವುದೇ ಹೇಳಿಕೆ ನೀಡಿಲ್ಲ.
ಜಯಲಲಿತಾ ಅವರಿಗೆ ಜಾಮೀನು ನೀಡುವುದು ಬಿಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಇದಕ್ಕೂ ಕನ್ನಡಿಗರಿಗೂ ಎಲ್ಲಿಂದೆಲ್ಲಿಯ ಸಂಬಂಧ? ಇದಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿರುವ ಕನ್ನಡಪರ ಹೋರಾಟಗಾರರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ನಿಜಕ್ಕೂ ಅಚ್ಚರಿಯ ಸಂಗತಿ. [ಜಯಾ ಬೇಲ್ ವಿಚಾರಣೆ ಲೈವ್]

ಪೋಸ್ಟರ್ ಕಿತ್ತುಬಿಸಾಡಿದ ಪೊಲೀಸ್ : ಕನ್ನಡಿಗರನ್ನು ಕೆಣಕುವಂತೆ ಮಾಡಿದ್ದ ಈ ಪೊಸ್ಟರನ್ನು ಅಂಟಿಸಿದ್ದು ವಿಜಯ್ ಕುಮಾರ್ ಎಂಬ ಜಯಲಲಿತಾ ಕಟ್ಟಾ ಬೆಂಬಲಿಗ. ಆದರೆ, ಈ ಪೋಸ್ಟರಿಗೂ ಎಐಎಡಿಎಂಕೆ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಕ್ಷ ಹೇಳಿಕೆ ನೀಡಿದೆ. ಈ ಕಾರಣ, ಪೊಲೀಸರು ವಿವಾದಾತ್ಮಕ ಬ್ಯಾನರನ್ನು ಕಿತ್ತುಬಿಸಾಡಿದ್ದಾರೆ.
ಹೈಕೋರ್ಟಲ್ಲಿ ವಾದ-ಪ್ರತಿವಾದ : ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ ಅವರಿದ್ದ ಏಕಸದಸ್ಯ ಪೀಠದ ಮುಂದೆ ಜಯಲಲಿತಾ ಪರವಾಗಿ ರಾಂ ಜೇಠ್ಮಲಾನಿ ಅವರು ಈಗಾಗಲೆ ವಾದ ಮಂಡಿಸಿದ್ದಾರೆ. ತಮಿಳುನಾಡಿನ ಪರವಾಗಿ ವಿಶೇಷ ಅಭಿಯೋಜಕ ಭವಾನಿ ಸಿಂಗ್ ಅವರು ಪ್ರತಿವಾದ ಮಂಡಿಸಿದ್ದಾರೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಜಾಮೀನು ಸಿಗುತ್ತೋ ಇಲ್ಲವೋ ಎಂದು ಅವರ ಲಕ್ಷಾಂತರ ಅಭಿಮಾನಿಗಳು ಬೆಂಗಳೂರಿನಲ್ಲಿ ಮತ್ತು ತಮಿಳುನಾಡಿನಲ್ಲಿ ಕುತೂಹಲದಿಂದ ಕಾಯುತ್ತಿದ್ದಾರೆ. ಹಲವೆಡೆ ಅಮ್ಮನ ಬಿಡುಗಡೆಗಾಗಿ ಪೂಜೆ-ಪುನಸ್ಕಾರಗಳು, ಹೋಮ-ಹವನಗಳು ನಡೆಯುತ್ತಿವೆ.
ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತಿರುವ ಬೆಂಗಳೂರಿನ ಪೊಲೀಸರು ಪರಪ್ಪನ ಅಗ್ರಹಾರ ಜೈಲು ಮತ್ತು ಕರ್ನಾಟಕ ಹೈಕೋರ್ಟ್ ಸುತ್ತ ಭಾರೀ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ. ಜಾಮೀನು ಸಿಗದಿದ್ದರೆ ಗಲಭೆಗಳಾಗುವ ಸಾಧ್ಯತೆಗಳಿರುವುದರಿಂದ ಎಲ್ಲೆಡೆ ಕಟ್ಟೆಚ್ಚರಿಕೆಯಿಂದ ಕಾಯಲಾಗುತ್ತಿದೆ.












Click it and Unblock the Notifications