ತಮಿಳುನಾಡು: 5684 ಮಂದಿಗೆ ಸೋಂಕು, 6272 ಸೋಂಕಿತರು ಗುಣಮುಖ!
ಚೆನ್ನೈ, ಆಗಸ್ಟ್.06: ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಕರ್ನಾಟಕವಷ್ಟೇ ಅಲ್ಲದೇ ತಮಿಳುನಾಡಿನಲ್ಲೂ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮಿತಿ ಮೀರುತ್ತಿದೆ. ಪ್ರತಿನಿತ್ಯ ವರದಿಯಾಗುತ್ತಿರುವ ಸೋಂಕಿತ ಪ್ರಕರಣಗಳ ಸಂಖ್ಯೆ ಜನರನ್ನು ಆತಂಕಕ್ಕೆ ದೂಡುತ್ತಿದೆ.
ತಮಿಳುನಾಡಿನಲ್ಲೂ ಪ್ರತಿನಿತ್ಯ ಸಾವಿರಾರು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 5684 ಮಂದಿಗೆ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 279144ಕ್ಕೆ ಏರಿಕೆಯಾಗಿದೆ.
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದೆ. ರಾಜ್ಯದಲ್ಲಿ ವರದಿಯಾಗಿರುವ ಒಟ್ಟು 279144 ಕೊವಿಡ್-19 ಪ್ರಕರಣಗಳ ಪೈಕಿ 2,21,087 ಸೋಂಕಿತರು ಗುಣಮುಖರಾಗಿದ್ದಾರೆ.

24 ಗಂಟೆಗಳಲ್ಲೇ 6,272 ಸೋಂಕಿತರು ಗುಣಮುಖ:
ತಮಿಳುನಾಡಿನಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿಗಿಂತ ಗುಣಮುಖ ಪ್ರಕರಣಗಳ ಸಂಖ್ಯೆಯೇ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲೇ 6,272 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರ ಜೊತೆಗೆ ಮಹಾಮಾರಿಗೆ ರಾಜ್ಯದಲ್ಲಿ ಒಂದೇ ದಿನ 110 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 4,571ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 53,486 ಸಕ್ರಿಯ ಪ್ರಕರಣಗಳು ಇರುವುದು ಪತ್ತೆಯಾಗಿದೆ.












Click it and Unblock the Notifications