ಖಲಿಸ್ತಾನಿಗಳಿಗೆ ಬೆಂಬಲ: ಕೇಜ್ರಿವಾಲ್ ವಿರುದ್ಧ ಕುಮಾರ್ ವಿಶ್ವಾಸ ಆರೋಪಕ್ಕೆ ಕಾರಣವೇನು?
ಚಂಡೀಗಢ, ಫೆಬ್ರವರಿ 19: ಪಂಜಾಬ್ ವಿಧಾನಸಭೆ ಚುನಾವಣಾ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಪ್ ಸಂಸ್ಥಾಪಕ ಸದಸ್ಯ ಕುಮಾರ್ ವಿಶ್ವಾಸ್ ಮಾಡಿರುವ ಆರೋಪ ಸಖತ್ ಸುದ್ದಿ ಆಗುತ್ತಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತ್ಯೇಕತಾವಾದಿಗಳ(ಖಲಿಸ್ತಾನಿಗಳು) ಬೆಂಬಲಕ್ಕೆ ನಿಂತಿದ್ದಾರೆ ಎಂದು ಕುಮಾರ್ ವಿಶ್ವಾಸ್ ಏಕೆ ಆರೋಪಿಸುತ್ತಿದ್ದಾರೆ ಎಂಬುದರ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಒಬ್ಬ ಚಳುವಳಿಗಾರ. ಆದರೆ ಅವರು ಹಾಗೆ ಕಾಣಿಸುವುದಿಲ್ಲ. ಕುಮಾರ್ ವಿಶ್ವಾಸ್ ಕೂಡ ಅವರದ್ದೇ ಪಕ್ಷದಲ್ಲಿ ಗುರುತಿಸಿಕೊಂಡವರು. ಕುಮಾರ್ ವಿಶ್ವಾಸ್ ಅವರಿಗೆ ರಾಜ್ಯಸಭೆ ಸದಸ್ಯ ಸ್ಥಾನ ನೀಡುವುದರ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಅವರಿಗೆ ರಾಜ್ಯಸಭೆ ಸ್ಥಾನದ ಸಿಗದ ಹಿನ್ನೆಲೆ ಈ ಆರೋಪಗಳನ್ನು ಮಾಡುತ್ತಿರಬಹುದು ಎಂದು ರಾಕೇಶ್ ಟಿಕಾಯತ್ ಶಂಕಿಸಿದ್ದಾರೆ.

ಕೇಜ್ರಿವಾಲ್ ವಿರುದ್ಧ ಕುಮಾರ್ ವಿಶ್ವಾಸ್ ಆರೋಪವೇನು?:
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬಿನಲ್ಲಿ ಖಲಿಸ್ತಾನಿಗಳ ಬೆಂಬಲಿಗರಾಗಿದ್ದಾರೆ ಎಂದು ಕುಮಾರ್ ವಿಶ್ವಾಸ್ ಆರೋಪಿಸಿದ್ದರು. "ಒಂದು ದಿನ ನನ್ನ ಬಳಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಅಥವಾ ಸ್ವತಂತ್ರ್ಯ ಖಲಿಸ್ತಾನ್ ರಾಷ್ಟ್ರದ ಮೊದಲ ಪ್ರಧಾನಮಂತ್ರಿ ಆಗುವ ಬಗ್ಗೆ ಹೇಳಿಕೊಂಡಿದ್ದರು. ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವುದರಲ್ಲಿ ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಪಂಜಾಬ್ ಎಂಬುದು ಒಂದು ರಾಜ್ಯವಲ್ಲ, ಅದು ಒಂದು ಭಾವನೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲಬೇಡಿ ಎಂದು ನಾನು ಒಮ್ಮೆ ಹೇಳಿದೆ. ಅದಕ್ಕೆ ಅದೆಲ್ಲ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿರುವುದಾಗಿ," ಕುಮಾರ್ ವಿಶ್ವಾಸ್ ಆರೋಪಿಸಿದ್ದರು.
ಖಲಿಸ್ತಾನಿ ಬೆಂಬಲದ ಕುರಿತು ತನಿಖೆಗೆ ಚನ್ನಿ ಒತ್ತಾಯ:
ಕುಮಾರ್ ವಿಶ್ವಾಸ್ ಆರೋಪದ ಕುರಿತು ತನಿಖೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮನವಿ ಮಾಡಿಕೊಂಡಿದ್ದಾರೆ. "ಪಂಜಾಬ್ ಸಿಎಂ ಆಗಿ ನಾನು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರನ್ನು ಡಾ.ಕುಮಾರ್ ವಿಶ್ವಾಸ್ ವೀಡಿಯೊ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವಂತೆ ವಿನಂತಿಸುತ್ತೇನೆ. ರಾಜಕೀಯವನ್ನು ಬದಿಗಿಟ್ಟು, ಪ್ರತ್ಯೇಕತಾವಾದದ ವಿರುದ್ಧ ಹೋರಾಡುವಾಗ ಪಂಜಾಬ್‌ನ ಜನರು ಭಾರಿ ಬೆಲೆ ತೆತ್ತಿದ್ದಾರೆ. ಗೌರವಾನ್ವಿತ ಪ್ರಧಾನಿಯವರು ಪ್ರತಿಯೊಬ್ಬ ಪಂಜಾಬಿಯ ಚಿಂತೆಯನ್ನು ಪರಿಹರಿಸಬೇಕಾಗಿದೆ," ಎಂದು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿಯ ಪತ್ರವನ್ನು ಹಂಚಿಕೊಂಡು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಎಎಪಿ ಮಾಜಿ ನಾಯಕರ ಈ ಹೇಳಿಕೆಯನ್ನು ಪ್ರಚಾರ ಮಾಡದಂತೆ ಮಾಧ್ಯಮಗಳಿಗೆ ಚುನಾವಣಾ ಅಧಿಕಾರಿ ಆದೇಶ ನೀಡಿ, ಬಳಿಕ ಆದೇಶವನ್ನು ಹಿಂಪಡೆದ ಬಳಿಕ ಚನ್ನಿ ಈ ಆರೋಪದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.
ಪಂಜಾಬಿನಲ್ಲಿ ಒಂದೇ ಹಂತದಲ್ಲಿ ಮತದಾನ:
ಪಂಜಾಬಿನ 117 ವಿಧಾನಸಭೆ ಕ್ಷೇತ್ರಗಳಿಗೆ ಒಂದು ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 20ರ ಭಾನುವಾರ ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.












Click it and Unblock the Notifications