ನಾನು ಸಿಎಂ ಆಗಲ್ಲ; "ಸಿಖ್ ನಾಯಕರಿಗೆ ಪಂಜಾಬಿನ ಮುಖ್ಯಮಂತ್ರಿ ಪಟ್ಟ"!
ಅಮೃತಸರ್, ಸೆಪ್ಟೆಂಬರ್ 19: ಪಂಜಾಬ್ ಮುಖ್ಯಮಂತ್ರಿ ಆಗುವಂತೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ನೀಡಿದ ಆಫರ್ ಅನ್ನು ಹಿರಿಯ ನಾಯಕಿ ಅಂಬಿಕಾ ಸೋನಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ಮುಖ್ಯಮಂತ್ರಿ ಸಿಖ್ ಸಮುದಾಯದ ನಾಯಕರೇ ಆಗಬೇಕು ಎನ್ನುವ ಬಗ್ಗೆ ಚರ್ಚೆ ಹೆಚ್ಚಾಗಿದೆ.
ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೇನು ಐದು ತಿಂಗಳು ಬಾಕಿ ಇರುವಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿರುವುದು ಪಕ್ಷದ ಮಟ್ಟಿಗೆ ಹೊಸ ಸವಾಲಾಗಿದೆ. ಸುದೀರ್ಘ ಅವಧಿವರೆಗೂ ಪಕ್ಷದಲ್ಲಿ ನಡೆಯುತ್ತಿದ್ದ ಆಂತರಿಕ ವೈಮನಸ್ಸು ಈ ರೀತಿಯಾಗಿ ಅಂತ್ಯವಾಗಿದೆ. ಇದರ ನಡುವೆ ರಾಜ್ಯದ ಗದ್ದುಗೆ ಏರುವುದು ಯಾರು ಎನ್ನುವ ಪ್ರಶ್ನೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಶನಿವಾರ ನಡೆದ ರಾಜಕೀಯ ಬೆಳವಣಿಗೆಯೊಂದರಲ್ಲಿ ಪಂಜಾಬ್ ಮುಂದಿನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸುವಂತೆ ಅಂಬಿಕಾ ಸೋನಿಯವರಿಗೆ ಆಫರ್ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ನೀಡಿದ ಆಫರ್ ಅನ್ನು ನಿರಾಕರಿಸಿದ್ದಾರೆ. ಸಿಖ್ ಸಮುದಾಯದ ನಾಯಕನಿಗೆ ಸಿಎಂ ಪಟ್ಟವನ್ನು ಕಟ್ಟದಿದ್ದರೆ ಅದು ಮುಂದಿನ ಚುನಾವಣೆಯಲ್ಲಿ ಅಡ್ಡಪರಿಣಾಮ ಬೀರುವ ಅಪಾಯವಿದೆ ಎಂದು ಅಂಬಿಕಾ ಸೋನಿ ಕೇಂದ್ರ ನಾಯಕರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಕಾಂಗ್ರೆಸ್ ಬಿಕ್ಕಟ್ಟು ನಿರ್ವಹಣೆ ಬಗ್ಗೆ ಬೇಸರ
ಪಂಜಾಬಿನಲ್ಲಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬೆಳವಣಿಗೆ ಹಿಂದೆ ಸುದೀರ್ಘ ಬಿಕ್ಕಟ್ಟು ಇರುವುದು ಗುಟ್ಟಾಗಿ ಉಳಿದಿಲ್ಲ. ಸುದೀರ್ಘ ಅವಧಿವರೆಗೂ ನಡೆಯುತ್ತಿದ್ದ ನಾಯಕರ ನಡುವಿನ ವೈಮನಸ್ಸು ಮತ್ತು ತಿಕ್ಕಾಟವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಹೈಕಮಾಂಡ್ ನಾಯಕರು ವಿಫಲವಾಗಿದ್ದಾರೆ ಎಂಬ ಅಸಮಾಧಾನ ಪಕ್ಷದಲ್ಲೇ ವ್ಯಕ್ತವಾಗಿದೆ. ಕಾಂಗ್ರೆಸ್ಸಿನ ಮೂವರು ವೀಕ್ಷಕರು ರಾಜ್ಯಕ್ಕೆ ಆಗಮಿಸಿದ್ದು, ಮುಂದಿನ ಸಿಎಂ ಯಾರಾಗಬೇಕು ಎನ್ನುವ ಬಗ್ಗೆ ಪ್ರತಿಯೊಬ್ಬ ಶಾಸಕರಿಂದಲೂ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ನಾಯಕರ ಚರ್ಚೆ
"ಪಂಜಾಬ್ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದರ ಬಗ್ಗೆ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದನ್ನು ಪಾಲಿಸುತ್ತೇವೆ," ಎಂದು ರಾಜ್ಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಈ ಮಧ್ಯೆ ರಾಜ್ಯ ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ಇಡುವುದಕ್ಕೆ ಹಾಗೂ ಮುಂದಿನ ತೀರ್ಮಾನಗಳ ಬಗ್ಗೆ ಚರ್ಚಿಸುವುದಕ್ಕೆ ಕಾಂಗ್ರೆಸ್ ನಾಯಕರ ದಂಡು ರಾಜ್ಯದಲ್ಲಿ ಬೀಡು ಬಿಟ್ಟಿದೆ. ಪಂಜಾಬ್ ಕಾಂಗ್ರೆಸ್ ಶಾಸಕರು ಶನಿವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹೊಸ ಸಿಎಲ್‌ಪಿ ನಾಯಕರನ್ನು ಆಯ್ಕೆ ಮಾಡಲು ಅಧಿಕಾರ ನೀಡಿದ್ದರು. ಈ ನಿಟ್ಟಿನಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್, ಕೇಂದ್ರ ವೀಕ್ಷಕರಾದ ಅಜಯ್ ಮಾಕೇನ್ ಪಂಜಾಬಿನಲ್ಲಿ ಉಳಿದುಕೊಂಡಿದ್ದಾರೆ.

ಮುಖ್ಯಮಂತ್ರಿ ಪಟ್ಟಿಯಲ್ಲಿ ಇರುವ ಹೆಸರುಗಳು?
ಸೆಪ್ಟೆಂಬರ್ 18ರ ಶನಿವಾರ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಲಿರುವ ಹೊಸ ಸಿಎಲ್‌ಪಿ ನಾಯಕನ ಹೆಸರಿನಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಕಾಂಗ್ರೆಸ್ಸಿನ ಮಾಜಿ ಮುಖ್ಯಸ್ಥ ಸುನೀಲ್ ಜಖರ್, ಹಾಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು, ರಾಜಿಂದರ್ ಸಿಂಗ್ ಬಜ್ವಾ ಮತ್ತು ಸುಖ್ಜಿಂದರ್ ಸಿಂಗ್ ರಂಧವಾ ಹೆಸರು ಮುಂಚೂಣಿಯಲ್ಲಿದೆ. ರಾಜ್ಯ ರಾಜಕಾರಣದ ಬೆಳವಣಿಗೆಗಳ ಮಧ್ಯೆ ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಮುಂದೂಡಲಾಗಿದೆ. ಹೊಸ ಸಿಎಲ್‌ಪಿ ನಾಯಕನ ಹೆಸರು ಇನ್ನೂ ಅಂತಿಮಗೊಳಿಸದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಏನಿದು ಪಂಜಾಬ್ ಕಾಂಗ್ರೆಸ್‌ನಲ್ಲಿನ ರಾಜಕೀಯ ಬಿಕ್ಕಟ್ಟು
ಪಂಜಾಬ್ ವಿಧಾನಸಭೆ ಚುನಾವಣೆಗೆ ಐದು ತಿಂಗಳಿಗಿಂತ ಕಡಿಮೆ ಅವಧಿ ಇರುವಾಗ ಮುಖ್ಯಮಂತ್ರಿ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಅಮರೀಂದರ್ ಸಿಂಗ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ ದೀರ್ಘಕಾಲಿಕ ಬಿಕ್ಕಟ್ಟು ನಿರ್ವಹಣೆಯಲ್ಲಿ ಹೈಕಮಾಂಡ್ ವಿಫಲವಾಗಿದೆ. ಆ ಮೂಲಕ ತಮ್ಮನ್ನು ಅವಮಾನಿಸಲಾಗಿದೆ ಎಂದು ಅಮರೀಂದರ್ ಸಿಂಗ್ ದೂಷಿಸಿದ್ದಾರೆ. ನವಜೋತ್ ಸಿಂಗ್ ಸಿಧು ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ ಅವರು, ಕ್ರಿಕೆಟಿಗರೊಬ್ಬರು ರಾಜಕಾರಣಿಯಾಗಿರುವುದು ದೊಡ್ಡ ದುರಂತ ಎಂದು ಕರೆದಿದ್ದಾರೆ.












Click it and Unblock the Notifications