ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶ
ಚಂಡೀಗಢ, ಫೆಬ್ರವರಿ 19: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಆಮ್ ಆದ್ಮಿ ಪಕ್ಷ ಅಥವಾ ಎಎಪಿ ವಿರುದ್ಧ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ಎಫ್‌ಐಆರ್ ದಾಖಲು ಮಾಡುವಂತೆ ಪಂಜಾಬ್ ಚುನಾವಣಾ ಆಯೋಗವು ಪೊಲೀಸರಿಗೆ ಆದೇಶ ನೀಡಿದೆ.
ವೀಡಿಯೋ ಒಂದರಲ್ಲಿ "ಇತರ ಪಕ್ಷಗಳ ವಿರುದ್ಧ ಸುಳ್ಳು ಮತ್ತು ಕ್ಷುಲ್ಲಕ ಆರೋಪಗಳನ್ನು" ಮಾಡುತ್ತದೆ ಮತ್ತು ಪಂಜಾಬ್‌ನಲ್ಲಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ. ಪಂಜಾಬ್‌ನಲ್ಲಿ ನಾಳೆ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಈ ಬೆಳವಣಿಗೆ ಕಂಡು ಬಂದಿದೆ.
"ಪಂಜಾಬ್ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಈ ನೀತಿ ಸಂಹಿತೆಯ ಪ್ರಕಾರ ಯಾವುದೇ ಪಕ್ಷವು ಅಂತರ್ಜಾಲದಲ್ಲಿ ಯಾವುದೇ ಪ್ರಚಲಿತ ಹ್ಯಾಂಡಲ್‌ಗಳ ನಿರ್ದಿಷ್ಟ ನಾಯಕನನ್ನು ಗುರಿಯಾಗಿಸಿಕೊಂಡು ಯಾವುದೇ ಆಕ್ಷೇಪಾರ್ಹ ವೀಡಿಯೊಗಳನ್ನು ಹಾಕುವಂತಿಲ್ಲ," ಎಂದು ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿ ಹೇಳಿದ್ದಾರೆ.

ರಾಜ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ದೆಹಲಿ ಮುಖ್ಯಮಂತ್ರಿ ವಿರುದ್ಧ ಅಕಾಲಿದಳದ ಉಪಾಧ್ಯಕ್ಷ ಅರ್ಷದೀಪ್ ಸಿಂಗ್ ಅವರು ದೂರನ್ನು ನೀಡಿದ್ದಾರೆ. ಈ ವೀಡಿಯೋಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಈ ವೀಡಿಯೊ "ಶಿರೋಮಣಿ ಅಕಾಲಿದಳ ಮತ್ತು ಇತರ ರಾಜಕೀಯ ಪಕ್ಷಗಳ ಇಮೇಜ್ ಅನ್ನು ಸಾಮಾನ್ಯ ಜನರ ದೃಷ್ಟಿಯಲ್ಲಿ ಕೆಡಿಸುವ ಉದ್ದೇಶವನ್ನು ಹೊಂದಿದೆ ಎಂದು ಅಕಾಳಿದಳ ಪಕ್ಷವು ಆರೋಪ ಮಾಡಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಇಕ್ಕಟ್ಟಿನಲ್ಲಿ
ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅರವಿಂದ್ ಕೇಜ್ರಿವಾಲ್ ಹಲವಾರು ತೊಂದರೆಗೆ ಒಳಗಾಗುತ್ತಲೇ ಇದ್ದಾರೆ. ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕ ಹಾಗೂ ಕವಿ ಕುಮಾರ್ ವಿಶ್ವಾಸ್ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. "ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಾಲಿಸ್ತಾನ್ ಪ್ರತ್ಯೇಕತಾವಾದಿ ಚಳುವಳಿಯನ್ನು ಬೆಂಬಲಿಸುತ್ತಿದ್ದಾರೆ," ಎಂದು ಎಎಪಿ ಮಾಜಿ ನಾಯಕ ಹಾಗೂ ಕವಿ ಕುಮಾರ್ ವಿಶ್ವಾಸ್ ದೂರಿದ್ದಾರೆ. "ಒಂದು ದಿನ, ಅರವಿಂದ್ ಕೇಜ್ರಿವಾಲ್ ಅವರು ಸಿಎಂ (ಪಂಜಾಬ್) ಅಥವಾ ಸ್ವತಂತ್ರ ರಾಷ್ಟ್ರದ (ಖಾಲಿಸ್ತಾನ್) ಮೊದಲ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದರು," ಎಂದು ವಿಶ್ವಾಸ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
"ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಗಾದರೂ ಕೂಡಾ ಅಧಿಕಾರವನ್ನು ಮಾತ್ರ ಬಯಸುತ್ತಾರೆ," ಎಂದು ಕೂಡಾ ಆರೋಪ ಮಾಡಿರುವ ಕವಿ ಕುಮಾರ್ ವಿಶ್ವಾಸ್, ಎಎಪಿ ನಾಯಕರ ವಿರುದ್ಧ ಭಾರಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಪ೦ಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತನಿಖೆ ನಡೆಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಉತ್ತರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. "ಆಪ್ ಪ್ರತ್ಯೇಕತಾವಾದಿಗಳ ಪರವಾಗಿರುವ ಆರೋಪವನ್ನು ಕೇಂದ್ರವು ಗಂಭೀರವಾಗಿ ಪರಿಗಣಿಸಿದೆ ಮತ್ತು ಈ ಬಗ್ಗೆ ನಾನು ವೈಯಕ್ತಿಕವಾಗಿ ವಿಚಾರಣೆ ನಡೆಸುತ್ತೇನೆ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಫೆಬ್ರವರಿ 20ರಂದು ಅಂದರೆ ನಾಳೆ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆರೋಪಗಳು ಕೇಳಿಬಂದಿದೆ. ಈ ಆರೋಪಗಳು ವಿಧಾನಸಭೆ ಚುನಾವಣೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಪ್ರಕಟವಾಗಿರುವ ಹಲವಾರು ಚುನಾವಣಾ ಸಮೀಕ್ಷೆಗಳು ಪಂಜಾಬ್‌ನಲ್ಲಿ ಎಎಪಿ ಗದ್ದುಗೆ ಹಿಡಿಯುವ ಸಾಧ್ಯತೆಯ ಬಗ್ಗೆ ಅಥವಾ ನಿರ್ಣಾಯಕ ಪಾತ್ರವನ್ನು ವಹಿಸುವ ಬಗ್ಗೆ ಉಲ್ಲೇಖ ಮಾಡಿದೆ. ಆದರೆ ಕೇಜ್ರಿವಾಲ್ ವಿರುದ್ಧದ ಆರೋಪವು ಚುನಾವಣೆಯಲ್ಲಿ ಪರಿಣಾಮ ಬೀರಬಹುದೇ ಎಂದು ಮಾರ್ಚ್ 15ರವೆಗೆ ಕಾದು ನೋಡಬೇಕಾಗಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications