ಪಂಜಾಬ್ ಚುನಾವಣೆಗೂ ಮುನ್ನ ಚನ್ನಿ ಸೋದರಳಿಯನ ಬಂಧನ
ಚಂಡೀಗಢ, ಫೆಬ್ರವರಿ 04: ಅಕ್ರಮ ಮರಳು ದಂಧೆ ಪ್ರಕರಣದಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಸೋದರಳಿಯ ಭೂಪೇಂದ್ರ ಸಿಂಗ್ ಹನಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ತನಿಖಾ ಸಂಸ್ಥೆ ಹನಿಯನ್ನು ನಿನ್ನೆ ಸಂಜೆ ಕಸ್ಟಡಿಗೆ ತೆಗೆದುಕೊಂಡಿದ್ದು, ಇಂದು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ನಿಬಂಧನೆಗಳ ಅಡಿಯಲ್ಲಿ ತಡರಾತ್ರಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಸೋದರಳಿಯ ಭೂಪೇಂದ್ರ ಸಿಂಗ್ ಹನಿಯನ್ನು ಬಂಧನ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಮತದಾನಕ್ಕೆ ಕೆಲವೇ ದಿನಗಳಿರುವಾಗ ಈ ಬಂಧನ ನಡೆದಿದೆ. ಫೆಬ್ರವರಿ 20 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ. ಈ ನಡುವೆ ಈ ಬಂಧನವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

8 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದ ಇಡಿ
ಕಳೆದ ತಿಂಗಳು ಹನಿಗೆ ಸೇರಿದ ಜಾಗದಲ್ಲಿ ಇಡಿ ದಾಳಿ ನಡೆಸಿ 8 ಕೋಟಿ ರೂಪಾಯಿ ವಶಪಡಿಸಿಕೊಂಡಿತ್ತು. ಪಂಜಾಬ್‌ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. 'ಅಕ್ರಮ' ಮರಳು ಗಣಿಗಾರಿಕೆ ಮತ್ತು ಆಸ್ತಿ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ಮೊಬೈಲ್ ಫೋನ್‌ಗಳು, ಸುಮಾರು 21 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಮತ್ತು 12 ಲಕ್ಷ ರೂಪಾಯಿ ಮೌಲ್ಯದ ರೋಲೆಕ್ಸ್ ವಾಚ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಚರಣ್‌ಜೀತ್ ಸಿಂಗ್ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರ ಮೊಹಾಲಿಯಲ್ಲಿರುವ ಮನೆ ಹಾಗೂ ಇತರೆ ಆರೋಪಿಗಳ ಮನೆ, ಕಚೇರಿ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಾರು 10 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಹಣ ವರ್ಗಾವಣೆ ಅಕ್ರಮ ಕಂಡು ಬಂದಿದ್ದರಿಂದ ಜಾರಿ ನಿರ್ದೇಶನಾಲಯ ಕೇಸ್ ಕೈಗೆತ್ತಿಕೊಂಡಿದೆ. ''ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರು ಪಂಜಾಬ್ ರಿಯಲ್ಟರ್ಸ್ ಎಂಬ ಕಂಪನಿಯನ್ನು ರಚಿಸಿದ್ದಾರೆ ಮತ್ತು ನವಾಶಹರ್‌ನಲ್ಲಿರುವ ಮಲಿಕ್‌ಪುರ ಕ್ವಾರಿಯನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ, ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ ಎಂದಿದ್ದಾರೆ.
ಶಾಸಕರುಗಳು ಮರಳುಗಾರಿಕೆಯಲ್ಲಿ ಭಾಗಿ: ಅಮರಿಂದರ್ ಆರೋಪ
ಇದಕ್ಕೂ ಮುನ್ನ, ರಾಜ್ಯದ ಎಲ್ಲಾ ಕಾಂಗ್ರೆಸ್ ಶಾಸಕರು ಮರಳು ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆರೋಪಿಸಿದ್ದರು. ಆದರೆ, ಶಾಸಕರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, "ಯಾರು ಭಾಗಿಯಾಗಿಲ್ಲ ಎಂದು ನನ್ನನ್ನು ಕೇಳಿ. ನಾನು ಹೆಸರುಗಳನ್ನು ಹೇಳಲು ಪ್ರಾರಂಭಿಸಿದರೆ, ನಾನು ಮೇಲಿನಿಂದ ಪ್ರಾರಂಭಿಸಬೇಕಾಗುತ್ತದೆ,'' ಎಂದಿದ್ದರು. ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿದ ಮಾಜಿ ಕಾಂಗ್ರೆಸ್ ನಾಯಕ ಈಗ ತನ್ನದೇ ಆದ ಹೊಸ ಪಕ್ಷವನ್ನು ಸ್ಥಾಪನೆ ಮಾಡಿ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.
ಇನ್ನು ಸಂಬಂಧಿಕರ ಮೇಲೆ ಇಡಿ ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯೆ ನೀಡಿದ್ದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ, ಇದು ರಾಜಕೀಯ ಸೇಡು ಎಂದು ಹೇಳಿದ್ದರು. ಪಂಜಾಬ್ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ನವಜ್ಯೋತ್ ಸಿಂಗ್ ಸಿಧು ಈ ಬಗ್ಗೆ ಮಾತನಾಡಿ, 'ಈ ದಾಳಿಯು ಯಾರೊಬ್ಬರೂ ತಪ್ಪಿತಸ್ಥರು ಎಂದು ಅರ್ಥವಲ್ಲ,' ಎಂದು ಸಮರ್ಥಿಸಿಕೊಂಡಿದ್ದಾರೆ. "ಈ ಇಡಿ ದಾಳಿಯು ನನ್ನ ವಿರುದ್ಧದ ರಾಜಕೀಯ ಸೇಡಿನ ಹೊರತು ಬೇರೇನೂ ಅಲ್ಲ. ಪಶ್ಚಿಮ ಬಂಗಾಳದ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲೆ ಅದೇ ಮಾದರಿಯ ದಾಳಿ ನಡೆದಿದೆ," ಎಂದು ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಹೇಳಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications