ಪಂಜಾಬ್ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಸಮೀಕ್ಷೆಯಲ್ಲಿ ಚನ್ನಿ ಮುನ್ನಡೆ?
ಚಂಡೀಗಢ, ಫೆಬ್ರವರಿ 04: ಪಂಜಾಬ್‌ನಲ್ಲಿ ಇನ್ನು ಕೆಲವೇ ವಾರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿದೆ. ಈಗಾಗಲೇ ಎಎಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಈ ನಡುವೆ ಆಡಳಿತಾರೂಢ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಕೂಗು ಕೇಳಿ ಬಂದಿದೆ.
ಈ ಹಿನ್ನೆಲೆ ಪಂಜಾಬ್ ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬ ವಿಚಾರದಲ್ಲಿ ಸಮೀಕ್ಷೆಯನ್ನು ನಡೆಸುತ್ತಿದೆ. ಈ ಸಮೀಕ್ಷೆಯಲ್ಲಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಯಾಗಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮುಂದುವರಿದಿದೆ. ಈ ನಡುವೆ ಸಮೀಕ್ಷೆ ಆಧಾರದಲ್ಲಿ ಮುಂಬರುವ ಚುನಾವಣೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿರನ್ನು ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮೂಲಗಳ ಪ್ರಕಾರ, ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಪಕ್ಷವು ನಡೆಸುತ್ತಿರುವ ಸಮೀಕ್ಷೆಯಲ್ಲಿ ಚನ್ನಿ ಮುನ್ನಡೆಯಲ್ಲಿದ್ದಾರೆ.

ಚರಣ್‌ಜೀತ್ ಸಿಂಗ್ ಚನ್ನಿ ಕಾಂಗ್ರೆಸ್‌ನ ಮುಖ್ಯಮಂತ್ರಿ?
"ಕಾಂಗ್ರೆಸ್ ಸಮೀಕ್ಷೆಯನ್ನು ಚನ್ನಿ ಮುನ್ನಡೆಸುತ್ತಿದ್ದಾರೆ ಮತ್ತು ಸಿಧುಗಿಂತ ಮುಂದಿದ್ದಾರೆ," ಎಂದು ಕಾಂಗ್ರೆಸ್ ಮೂಲಗಳು ಹೇಳಿದೆ. ಈ ನಡುವೆ, ಪಕ್ಷವು ಸಿಎಂ ಅಭ್ಯರ್ಥಿಯ ಆಯ್ಕೆಗಾಗಿ ಮೊಬೈಲ್ ಸಂಪರ್ಕ ಹೊಂದಿರುವ ಸುಮಾರು 1.5 ಕೋಟಿ ಮತದಾರರಿಗೆ ಐವಿಆರ್‌ಎಸ್ ಸಂದೇಶವನ್ನು ಕಳುಹಿಸುತ್ತಿದೆ. ಮುಂದಿನ 3 ರಿಂದ 4 ದಿನಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಎಂದು ಕೂಡಾ ಮೂಲಗಳು ತಿಳಿಸಿದೆ. ಇದಲ್ಲದೇ, ಪಕ್ಷದ ಸಮನ್ವಯಾಧಿಕಾರಿಗಳು ಬ್ಲಾಕ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಮತ್ತು ಎಲ್ಲಾ ಅಭ್ಯರ್ಥಿಗಳನ್ನು ಸ್ವಯಂ ಆಗಿ ತಲುಪಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. "ಪಕ್ಷವು ಈ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಏಕೆಂದರೆ ಇಡೀ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು ಮತ್ತು ಸಮೀಕ್ಷೆಯಲ್ಲಿ ಸೋತವರು ಯಾವುದೇ ರೀತಿಯಲ್ಲಿ ಫಲಿತಾಂಶವನ್ನು ವಿರೋಧಿಸಬಾರದು," ಎಂದು ಪಕ್ಷದ ಹಿರಿಯ ಸದಸ್ಯರೊಬ್ಬರು ಎಎನ್‌ಐಗೆ ತಿಳಿಸಿದರು.

ರಾಹುಲ್ ಒಪ್ಪಿದ ಮೇಲೆ ಚನ್ನಿ, ಸಿಧು ಒಪ್ಪಲೇಬೇಕು
"ರಾಹುಲ್ ಗಾಂಧಿಯವರ ಮುಂದೆ ಸಮೀಕ್ಷೆಯ ನಿರ್ಧಾರವನ್ನು ಒಪ್ಪಿಕೊಂಡಿರುವ ಕಾರಣ ಚನ್ನಿ ಮತ್ತು ಸಿಧು ಇಬ್ಬರೂ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ," ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಇದಲ್ಲದೆ, ದೊಡ್ಡ ಸಮಾರಂಭ ನಡೆಸಿ ಮುಖ್ಯಮಂತ್ರಿ ಯಾರು ಎಂದು ಬಹಿರಂಗಪಡಿಸುವ ಯೋಜನೆಯಲ್ಲಿ ಕಾಂಗ್ರೆಸ್ ಇದೆ ಎಂದು ನಾಯಕರು ಮಾಹಿತಿ ನೀಡಿದ್ದಾರೆ. ರಾಜ್ಯದ ಪ್ರಮುಖ ನಾಯಕರ ನಡುವಿನ ಆಂತರಿಕ ಕಲಹ ಹೊಸ ಹಂತಕ್ಕೆ ಬಂದ ಬೆನ್ನಲ್ಲೇ ಈ ಸಮೀಕ್ಷೆ ನಡೆದಿದೆ. ಇನ್ನು ಈ ನಡುವೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಫೆಬ್ರವರಿ 6ರಂದು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಪ್ರಕಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಂದುವರಿದ ಪಂಜಾಬ್ ಕಾಂಗ್ರೆಸ್ ಆಂತರಿಕ ಸಂಘರ್ಷ
ಪಂಜಾಬ್ ಕಾಂಗ್ರೆಸ್ ಆಂತರಿಕ ವಿವಾದವು ತೀರಾ ಹದಗೆಟ್ಟಾಗ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರ ನಂತರ, ಪಂಜಾಬ್ ಮಾಜಿ ಸಿಎಂ ಸಿಧು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ಚನ್ನಿ ಅವರ ಅಧಿಕಾರವನ್ನು ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. "ಪಕ್ಷದ ವ್ಯವಹಾರ ನಡೆಸುವುದು ಸಿದ್ದು ಕೆಲಸ, ಸರ್ಕಾರ ನಡೆಸುವುದು ಚನ್ನಿ ಕೆಲಸ," ಎಂದಿದ್ದಾರೆ. ಪಕ್ಷದ ಹೈಕಮಾಂಡ್ ಶಾಂತಿ ಪ್ರಯತ್ನಗಳ ಹೊರತಾಗಿಯೂ ಚನ್ನಿ ಮತ್ತು ಸಿಧು ನಡುವೆ ಭಿನ್ನಾಭಿಪ್ರಾಯ ಬೆಳೆಯುತ್ತಿದೆ. ಪಂಜಾಬ್‌ಗೆ ಪಕ್ಷದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಈ ಹಿಂದೆ ಏಳು-ಹತ್ತು ದಿನಗಳ ಕಾಲಾವಕಾಶ ನೀಡಲಾಗಿತ್ತು. ಹಾಲಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ನವಜೋತ್ ಸಿಂಗ್ ಸಿಧು ನಡುವೆ ಈ ಸಮೀಕ್ಷೆ ನಡೆಯುತ್ತಿದೆ.

ಕಾಂಗ್ರೆಸ್ ಸಮೀಕ್ಷೆ ಹೇಗೆ ನಡೆಯುತ್ತದೆ?
ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್‌ಎಸ್) ಮೂಲಕ ಈ ಸಮೀಕ್ಷೆಯು ನಡೆಯುತ್ತದೆ. ಮೊಬೈಲ್ ಸಂಪರ್ಕ ಹೊಂದಿರುವ ಸುಮಾರು 1.5 ಕೋಟಿ ಮತದಾರರಿಗೆ ಐವಿಆರ್‌ಎಸ್ ಸಂದೇಶವನ್ನು ಕಳುಹಿಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಮತದಾರರಿಗೆ ಮೂರು ಆಯ್ಕೆಗಳನ್ನು ನೀಡಲಾಗಿದೆ. ಒಂದನೇ ಆಯ್ಕೆ ನವಜೋತ್ ಸಿಂಗ್ ಸಿಧು, ಎರಡನೇ ಆಯ್ಕೆ ಚರಣ್‌ಜೀತ್ ಸಿಂಗ್ ಚನ್ನಿ ಹಾಗೂ ಮೂರನೇ ಆಯ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಬೇಡ ಎಂಬುವುದಾಗಿದೆ. ಇನ್ನು ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು, ಎಐಸಿಸಿ ಮುಖಂಡರು ಹಾಗೂ ಸಮೀಕ್ಷಾ ತಂಡಗಳ ಮೂಲಕವೂ ಪ್ರತಿಕ್ರಿಯೆ ಕೇಳಲಾಗುತ್ತಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿ ಮತ್ತು ಪಂಜಾಬ್‌ನ ಚುನಾವಣಾ ನಿಯಂತ್ರಣ ಕೊಠಡಿಯ ಉಸ್ತುವಾರಿ ಗೋಕುಲ್ ಬುಟೇಲ್, "ಐವಿಆರ್‌ಎಸ್ ವ್ಯವಸ್ಥೆಯ ಮೂಲಕ ಪ್ರತಿಕ್ರಿಯೆಯನ್ನು ಪಡೆಯಲಾಗುತ್ತಿದೆ," ಎಂದು ಹೇಳಿದ್ದಾರೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ 117 ಸದಸ್ಯರ ವಿಧಾನಸಭೆ ಕ್ಷೇತ್ರದ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications