ಪಂಜಾಬ್ ಚುನಾವಣೆ: ಕೇಜ್ರಿವಾಲ್ 'ನಕಲಿ ಭರವಸೆಗಳನ್ನು ನೀಡುವ ಸುಳ್ಳುಗಾರ': ಸಿಧು ವಾಗ್ದಾಳಿ
ಚಂಡೀಗಢ, ಡಿಸೆಂಬರ್ 20: ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ಸರ್ಕಾರವನ್ನು ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ಪಂಜಾಬ್‌ಗೂ ಪ್ರವಾಸ ಹೋಗುತ್ತಿದ್ದಾರೆ. ಈ ಬೆನ್ನಲ್ಲೇ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಅರವಿಂದ್ ಕೇಜ್ರಿವಾಲ್ ರಾಜಕೀಯ ಪ್ರವಾಸಿ ಹಾಗೂ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ನಕಲಿ ಭರವಸೆಗಳನ್ನು ನೀಡುವ ಸುಳ್ಳುಗಾರ," ಎಂದು ಟೀಕೆ ಮಾಡಿದ್ದಾರೆ.
ಸುಲ್ತಾನ್‌ಪುರ ಲೋಧಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನವಜೋತ್ ಸಿಧು, "ದೆಹಲಿ ಮುಖ್ಯಮಂತ್ರಿಗೆ ಉದ್ಯೋಗದ ವಿಷಯದ ಬಗ್ಗೆ ಚರ್ಚೆಗೆ ಬನ್ನಿ," ಎಂದು ಆಹ್ವಾನಿಸಿದರು. ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಎಂಟು ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ 440 ಮಾತ್ರ ಉದ್ಯೋಗ ನೀಡಿದ್ದಾರೆ ಎಂದು ನವಜೋತ್ ಸಿಧು ಹೇಳಿದ್ದಾರೆ.
"ಪಂಜಾಬ್‌ನಲ್ಲಿ ಎಲ್ಲೇ ಇದ್ದರೂ ನನ್ನೊಂದಿಗೆ ಕುಳಿತು ಚರ್ಚೆ ನಡೆಸಿ, ನನ್ನನ್ನು ದೆಹಲಿಗೆ ಕೂಡ ಕರೆಯಿರಿ. ನಿಮ್ಮ ಮನೆಯಲ್ಲೇ ಕುಳಿತು ಟಿವಿ ಚಾನೆಲ್ ಮನೆಗೆ ಬಂದಂತೆ ಸ್ಥಿತಿ ನಿರ್ಮಾಣ ಮಾಡುತ್ತೇನೆ. ಸಿಧು ಸೋತರೆ ರಾಜಕೀಯವನ್ನು ತೊರೆಯುತ್ತೇನೆ," ಎಂದು ನವಜೋತ್ ಸಿಧು, ಕೇಜ್ರಿವಾಲ್‌ಗೆ ಸವಾಲು ಎಸೆದಿದ್ದಾರೆ.

ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ನೀಡುವ ಕೇಜ್ರಿವಾಲ್ ಭರವಸೆ
ಇನ್ನು ಈ ಸಂದರ್ಭದಲ್ಲೇ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ನೀಡುವ ಅರವಿಂದ್ ಕೇಜ್ರಿವಾಲ್ ಭರವಸೆಗಳನ್ನು ಕೂಡಾ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಟೀಕೆ ಮಾಡಿದ್ದಾರೆ. "ದೆಹಲಿಯಲ್ಲಿ ಕೇಜ್ರಿವಾಲ್ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡುತ್ತಿದ್ದಾರೆಯೇ?," ಎಂದು ಪ್ರಶ್ನೆ ಮಾಡಿದ್ದಾರೆ.
"ಪಂಜಾಬ್‌ನಲ್ಲಿ ಅಂದಾಜು 20,000 ಕೋಟಿ ರೂಪಾಯಿಗಳ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ," ಎಂದು ಅರವಿಂದ್ ಕೇಜ್ರಿವಾಲ್ ಈ ತಿಂಗಳ ಆರಂಭದಲ್ಲಿ ಆರೋಪ ಮಾಡಿದ್ದಾರೆ. ಹಾಗೆಯೇ ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷ ದಾಟಿದ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ನೀಡಲಾಗುವುದು ಎಂದು ಕೇಜ್ರಿವಾಲ್ ಭರವಸೆ ನೀಡಿದ್ದರು.
ಅಕ್ರಮ ಮರಳುಗಾರಿಕೆ ಬಗ್ಗೆ ಸಿಧು ಏನಂತಾರೆ?
ಅಕ್ರಮ ಮರಳುಗಾರಿಕೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ನವಜೋತ್ ಸಿಧು, "ಪಂಜಾಬ್‌ನ ಮರಳು ಗಣಿಗಾರಿಕೆ ಕ್ಷೇತ್ರದಿಂದ 20,000 ಕೋಟಿ ರೂಪಾಯಿ ಬರಲಿದೆ. ಎಂದು ಅವರು ಹೇಳುತ್ತಾರೆ. ಕಳೆದ ಸರಕಾರ (ಅಕಾಲಿ-ಬಿಜೆಪಿ) ಪ್ರತಿ ವರ್ಷ 40 ಕೋಟಿ ರೂ. ಡೆಪಾಸಿಟ್ ಮಾಡಿದೆ. ನಾವು (ಕಾಂಗ್ರೆಸ್ ಸರ್ಕಾರ) 300 ಕೋಟಿ ರೂಪಾಯಿ ಡೆಪಾಸಿಟ್ ಮಾಡುತ್ತಿದ್ದೇವೆ. ನೀವು (ಕೇಜ್ರಿವಾಲ್) 20,000 ಕೋಟಿ ರೂ.ಗಳನ್ನು ಹೇಗೆ ಪಡೆಯುತ್ತೀರಿ?," ಎಂದು ಪ್ರಶ್ನಿಸಿದ್ದಾರೆ. "ಮರಳು ಗಣಿಗಾರಿಕೆಯಿಂದ 3,000 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಗಳಿಸುವ ಯಾವುದೇ ರಾಜ್ಯವನ್ನು ನನಗೆ ತೋರಿಸಿ," ಎಂದು ಕೂಡಾ ಸವಾಲೆಸೆದಿದ್ದಾರೆ.
ಇನ್ನು ಕೇಜ್ರಿವಾಲ್ ವಿರುದ್ಧ ದಾಳಿಯನ್ನು ಮುಂದುವರಿಸಿದ ಮಾಡಿದ ಸಿಧು, "ನಾನು ನಿಮಗೆ ಹೇಳುತ್ತೇನೆ, ಕೇಜ್ರಿವಾಲ್! ನಿಮಗೆ ಪಂಜಾಬ್ ಬಗ್ಗೆ ಏನೂ ತಿಳಿದಿಲ್ಲ. ನೀವು ರಾಜಕೀಯ ಪ್ರವಾಸಿ ಮತ್ತು ನಕಲಿ ಭರವಸೆಗಳೊಂದಿಗೆ ನಾಲ್ಕೂವರೆ ವರ್ಷಗಳ ನಂತರ ಇಲ್ಲಿಗೆ ಬರುವ ಸುಳ್ಳುಗಾರ. ಕಳೆದ ನಾಲ್ಕೂವರೆ ವರ್ಷಗಳಿಂದ ನೀವೇಕೆ ಇಲ್ಲಿಗೆ ಬರಲಿಲ್ಲ," ಎಂದು ಕೇಳಿದ್ದಾರೆ.
"ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಮದ್ಯವನ್ನು ಖಾಸಗೀಕರಣಗೊಳಿಸುತ್ತಿದ್ದಾರೆ," ಎಂದು ಕೂಡಾ ಈ ಸಂದರ್ಭದಲ್ಲೇ ಸಿಧು ಆರೋಪ ಮಾಡಿದ್ದಾರೆ. "ಕೇಜ್ರಿವಾಲ್ ದೆಹಲಿಯಲ್ಲಿ ಮದ್ಯ ಖಾಸಗೀಕರಣ ಮಾಡುತ್ತಿದ್ದಾರೆ. ಆದರೆ ಅವರು ಪಂಜಾಬ್‌ನಲ್ಲಿನ ಮದ್ಯದ ವ್ಯವಹಾರದಿಂದ 30,000 ಕೋಟಿ ರೂಪಾಯಿಗಳ ಹಣವನ್ನು, ಮರಳು ಗಣಿಗಾರಿಕೆಯಿಂದ ಮತ್ತು ಕೇಬಲ್ ಮತ್ತು ಇತರ ಕ್ಷೇತ್ರಗಳಿಂದ 2,000-3000 ಕೋಟಿ ರೂಪಾಯಿಗಳನ್ನು ಉತ್ಪಾದಿಸಬಹುದು," ಎಂದಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications