ಕಪ್ಪುಹಣ, ನಿರುದ್ಯೋಗದ ಬಗ್ಗೆ ಮೋದಿ ಮೌನ: ರಾಹುಲ್ ಗಾಂಧಿ ಸಿಡಿಮಿಡಿ
ಚಂಡೀಗಢ, ಫೆಬ್ರವರಿ 14; ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ಭಾಷಣಗಳಲ್ಲಿ ದೇಶದ ನಿರುದ್ಯೋಗ ಮತ್ತು ಕಪ್ಪುಹಣದ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪಂಜಾಬಿನ ಹೋಶಿಯಾರ್ಪುರ್ ದಲ್ಲಿ ನಡೆಸಿದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆಯ ಬಗ್ಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿ ಕಾರಿದರು. ನೋಟ್ ಬ್ಯಾನ್ ಮತ್ತು ಜಿಎಸ್ ಟಿ ಜಾರಿಯಿಂದ ಎರಡ್ಮೂರು ಬಿಲಿಯನೇರ್‌ಗಳು ಮಾತ್ರ ಲಾಭ ಪಡೆದುಕೊಂಡಿದ್ದಾರೆ ಎಂದು ದೂಷಿಸಿದರು.
"ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಬಡತನವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬಡವರು, ರೈತರು, ಸಣ್ಣ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳ ಪರ ಸರ್ಕಾರವನ್ನು ಚನ್ನಿ ಮುನ್ನೆಡೆಸುತ್ತಾರೆಯೇ ವಿನಃ ಕೋಟ್ಯಾಧಿಪತಿಗಳ ಸರ್ಕಾರವನ್ನಲ್ಲ," ಎಂದಿದ್ದಾರೆ.

ಹೊಸ ಸರ್ಕಾರ ಆಯ್ಕೆಯ ಸವಾಲು:
"ನಮ್ಮ ಮುಂದೆ ಪಂಜಾಬ್ ಚುನಾವಣೆಗಳಿವೆ. ಇದು ಸಾಮಾನ್ಯ ಚುನಾವಣೆಗಳಂತೆ ಅಲ್ಲ. ನೀವು ಹೊಸ ಸರ್ಕಾರವನ್ನು ಆಯ್ಕೆ ಮಾಡಬೇಕು. ಇಂದು ದೇಶದ ಪ್ರತಿ ರಾಜ್ಯದಲ್ಲೂ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನೋಟು ಅಮಾನ್ಯೀಕರಣದ ಸಮಯದಲ್ಲಿ ಕಪ್ಪುಹಣದ ವಿರುದ್ಧ ನಮ್ಮ ಹೋರಾಟ ಎಂದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಸಣ್ಣ ವ್ಯಾಪಾರಿಗಳು ಮತ್ತು ರೈತರ ಜೇಬಿನಿಂದ ಹಣವನ್ನು ಕಿತ್ತುಕೊಂಡಿತು. ರೈತರು ಮತ್ತು ಸಣ್ಣ ವ್ಯಾಪಾರಿಗಳಿಂದ ಪಡೆದ ಹಣವನ್ನು ಕೋಟ್ಯಾಧಿಪತಿಗಳಿಗೆ ನೀಡಿದ್ದಾರೆ. ಪ್ರಧಾನಿ ಮೋದಿ ಅಂದು, ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಣ, 2 ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಹೇಳುತ್ತಿದ್ದರು, ನಿಮಗೆ ಅದು ಸಿಕ್ಕಿದೆಯೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಕಪ್ಪುಹಣ ಮತ್ತು ಉದ್ಯೋಗದ ಬಗ್ಗೆ ಮಾತಾಡುವುದಿಲ್ಲ:
ದೇಶದಲ್ಲಿ ಈ ಮೊದಲು ಕಪ್ಪುಹಣ ಮತ್ತು ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಆ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಪ್ರಧಾನಿಯವರು ಈಗ ಏಕೆ ಉದ್ಯೋಗ ಮತ್ತು ಕಪ್ಪುಹಣದ ಬಗ್ಗೆ ಮಾತನಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಕಾಂಗ್ರೆಸ್ ರೈತಪರ ಸರ್ಕಾರ:
ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧವೂ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದರು. ಆಪ್ ನಿಂದ ಪಂಜಾಬ್ ಅನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ರಾಜ್ಯದ ಕುರಿತು ಕಾಳಜಿ ವಹಿಸುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಿಂದ ಮಾತ್ರ ಪಂಜಾಬ್ ಅನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ಕಾಳಜಿ ವಹಿಸುವುದಕ್ಕೆ ಸಾಧ್ಯವಾಗುತ್ತದೆ.
"ನಮ್ಮ ಕಾಂಗ್ರೆಸ್ ಸರ್ಕಾರವು ಕೇವಲ ಎರಡರಿಂದ ಮೂರು ಕೋಟಿ ಹಣವಂತರ ಪರವಾಗಿಲ್ಲ. ಒಂದು ವೇಳೆ ನಾವು ಎರಡ್ಮೂರು ಕೋಟಿ ಹಣವಂತರ ಪರವಾಗಿದಿದ್ದರೆ ನಾವು ಕೃಷಿ ಕಾಯ್ದೆ ವಿರುದ್ಧ ರೈತರಿಗೆ ಬೆಂಬಲ ಸೂಚಿಸುತ್ತಿರಲಿಲ್ಲ. ಪಂಜಾಬಿನಲ್ಲಿ ಕಾಂಗ್ರೆಸ್ ಸರ್ಕಾರವು ಸದಾ ರೈತಪರವಾಗಿದ್ದು, ರೈತರ ಹೋರಾಟಕ್ಕೆ ಜೊತೆಯಾಗಿ ನಿಲ್ಲುತ್ತದೆ," ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications