ತಜೀಂದರ್ ಪಾಲ್ ಬಗ್ಗ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಿದ ಮೊಹಾಲಿ ಕೋರ್ಟ್
ಮೊಹಾಲಿ, ಮೇ 7: ನವದೆಹಲಿಯಲ್ಲಿ ನಡೆದಿರುವ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ಕಾರ್ಯಕರ್ತ ತಜೀಂದರ್ ಪಾಲ್ ಬಗ್ಗ ಅನ್ನು ಬಂಧಿಸಿ ನಂತರದಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಮಧ್ಯೆ ಆತನನ್ನು ಮತ್ತೊಮ್ಮೆ ಬಂಧಿಸಿ ಕೋರ್ಟಿಗೆ ಹಾಜರುಪಡಿಸುವಂತೆ ಮೊಹಲಿ ಕೋರ್ಟ್ ಶನಿವಾರ ಪಂಜಾಬ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು, ದ್ವೇಷವನ್ನು ಹುಟ್ಟು ಹಾಕುವುದು ಹಾಗೂ ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ ತಜೀಂದರ್ ಪಾಲ್ ಬಗ್ಗ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಕೋರ್ಟ್ ಸೂಚನೆ ನೀಡಿದ್ದು, ವಾರಂಟ್ ಜಾರಿಗೊಳಿಸಲಾಗಿದೆ.
ಶುಕ್ರವಾರ ಬೆಳಗ್ಗೆಯಷ್ಟೇ ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ನಿವಾಸದಲ್ಲಿ ತಜೀಂದರ್ ಪಾಲ್ ಬಗ್ಗಾ ಅನ್ನು ಪಂಜಾಬ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆದಾಗ್ಯೂ, ಆತನ ಬಂಧನವನ್ನು ದೆಹಲಿ ಪೊಲೀಸರು ತಡೆದರು. ಬಗ್ಗಾ ಅವರ ತಂದೆ ಸಲ್ಲಿಸಿದ ಅಪಹರಣ ದೂರಿನ ಆಧಾರದ ಮೇಲೆ ಸರ್ಚ್ ವಾರಂಟ್ ಪಡೆದಿದ್ದರು.

ಪಂಜಾಬಿಗೆ ಕರೆದೊಯ್ಯುತ್ತಿದ್ದ ಕಾರನ್ನು ತಡೆದ ಹರಿಯಾಣ ಪೊಲೀಸ್
ದೆಹಲಿ ಪೊಲೀಸರು ಪಡೆದ ಸರ್ಚ್ ವಾರಂಟ್ ಮಾಹಿತಿಯ ಹಿನ್ನೆಲೆಯಲ್ಲಿ ತಜೀಂದರ್ ಪಾಲ್ ಬಗ್ಗನನ್ನು ಪಂಜಾಬಿಗೆ ಕರೆದುಕೊಂಡು ಹೋಗುತ್ತಿದ್ದ ಕಾರನ್ನು ಹರಿಯಾಣ ಪೊಲೀಸರು ತಡೆದು ನಿಲ್ಲಿಸಿದ್ದರು. ದ್ವಾರಕಾ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಬಗ್ಗಾನನ್ನು ಹಾಜರುಪಡಿಸಲಾಗಿದ್ದು, ಅವನನ್ನು ಬಿಡುಗಡೆಗೊಳಿಸಿದ ಕೋರ್ಟ್ ಮನೆಗೆ ಹೋಗುವುದಕ್ಕೆ ಅನುಮತಿ ನೀಡಿತ್ತು. ತದನಂತರದಲ್ಲಿ ಆತ ಜನಕಪುರಿಯಲ್ಲಿರುವ ತಮ್ಮ ಮನೆಗೆ ತೆರಳಿದ್ದನು.

ಮೊಹಾಲಿ ಕೋರ್ಟ್ ಮೊರೆಗೆ ಪಂಜಾಬ್ ಪೊಲೀಸರು
ಬಿಜೆಪಿ-ಎಎಪಿ ಗದ್ದಲಕ್ಕೆ ಕಾರಣವಾದ ನಾಟಕೀಯ ಬೆಳವಣಿಗೆಗಳ ನಂತರದಲ್ಲಿ ಪಂಜಾಬ್ ಪೊಲೀಸರು ಶನಿವಾರ ಮೊಹಾಲಿ ನ್ಯಾಯಾಲಯದ ಮೊರೆ ಹೋಗಿದ್ದು, ತಜೀಂದರ್ ಪಾಲ್ ಬಗ್ಗ ಬಂಧನದ ವಾರಂಟ್ ಪಡೆದುಕೊಂಡಿದ್ದಾರೆ. ದೆಹಲಿ ಮತ್ತು ಪಂಜಾಬಿನಲ್ಲಿ ಆಮ್ ಆದ್ಮಿ ಸರ್ಕಾರ ಆಡಳಿತದಲ್ಲಿದ್ದು, ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಆದಾಗ್ಯೂ, ದೆಹಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆಯೇ ವಿನಃ ಆಪ್ ನೇತೃತ್ವದ ಸರ್ಕಾರದ ಅಡಿಯಲ್ಲಿ ಬರುವುದಿಲ್ಲ.

ಬಗ್ಗಾ ವಿರುದ್ಧದ ಎಫ್ಐಆರ್ ನಲ್ಲಿ ಯಾವ ಅಂಶಗಳು ಉಲ್ಲೇಖ?
ಕಳೆದ ಏಪ್ರಿಲ್ 1ರಂದು ತಜೀಂದರ್ ಪಾಲ್ ಬಗ್ಗ ವಿರುದ್ಧ ಮೊದಲ ಎಫ್ಐಆರ್ ಅನ್ನು ದಾಖಲಿಸಿಕೊಳ್ಳಲಾಗಿತ್ತು. ಈ ಎಫ್ಐಆರ್ ಕಾಪಿಯಲ್ಲಿ ಮಾರ್ಚ್ 30ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಹೊರಗೆ ಬಿಜೆಪಿ ಯುವ ಘಟಕದ ಪ್ರತಿಭಟನೆಯ ವೇಳೆಯಲ್ಲಿ ನೀಡಿದ ಪ್ರಚೋದನಕಾರಿ ಹೇಳಿಕೆಗಳ ಬಗ್ಗೆ ಉಲ್ಲೇಖಿಸಲಾಗಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 23ರಂದು ನಡೆಸಲಾಗುತ್ತದೆ.

ನಾನು 100 ಎಫ್ಐಆರ್ ದಾಖಲಿಸಿದರೂ ಹೆದರುವುದಿಲ್ಲ
ಶನಿವಾರ ಮುಂಜಾನೆ ತಜೀಂದರ್ ಪಾಲ್ ಬಗ್ಗ ಎಎಪಿ ಮತ್ತು ಅದರ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಧ್ವನಿ ಎತ್ತುವುದನ್ನು ಮುಂದುವರಿಸುವುದಾಗಿ ಹೇಳಿದರು. "ನನ್ನ ವಿರುದ್ಧ ಒಂದು ಅಥವಾ 100 ಎಫ್‌ಐಆರ್‌ಗಳು ದಾಖಲಾಗಿರಲಿ, ಗುರು ಗ್ರಂಥ ಸಾಹಿಬ್‌ನ ಅವಮಾನ ಮತ್ತು ಕಾಶ್ಮೀರಿ ಪಂಡಿತರಿಗೆ ಕೇಜ್ರಿವಾಲ್ ಮಾಡಿದ ಅವಮಾನದ ವಿಷಯಗಳನ್ನು ನಾನು ಎತ್ತುತ್ತಲೇ ಇರುತ್ತೇನೆ," ಎಂದು ಬಿಜೆಪಿ ನಾಯಕ ಹೇಳಿದರು.












Click it and Unblock the Notifications