ಹರಿಯಾಣ ಸ್ಥಳೀಯ ಸಂಸ್ಥೆ ಚುನಾವಣೆ; ಬಿಜೆಪಿ ಮೇಲೆ ಪರಿಣಾಮ ಬೀರಿತೇ ರೈತರ ಪ್ರತಿಭಟನೆ?
ಚಂಡೀಗಢ, ಡಿಸೆಂಬರ್ 30: ಹರಿಯಾಣ ನಗರ ಸಭೆ ಚುನಾವಣೆಯ ಮತ ಎಣಿಕೆ ಬುಧವಾರ ನಡೆಯುತ್ತಿದ್ದು, ಬಿಜೆಪಿಗೆ ಈ ಚುನಾವಣೆಯಲ್ಲಿ ಹಿನ್ನಡೆ ಸಾಧ್ಯತೆ ಇರುವುದಾಗಿ ತಿಳಿದುಬಂದಿದೆ.
ಅಂಬಾಲದಲ್ಲಿ ಜನ್ ಚೇತನಾ ಪಕ್ಷ ಮುಂಚೂಣಿಯಲ್ಲಿದ್ದು, ಸೋನಿಪತ್ ನಲ್ಲಿ ಕಾಂಗ್ರೆಸ್ ಮುಂದಿದೆ. ಪಂಚ್ ಕುಲದಲ್ಲಿ ಮೇಯರ್ ಸ್ಥಾನದ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿರುವುದಾಗಿ ತಿಳಿದುಬಂದಿದೆ. ಚುನಾವಣೆಯಲ್ಲಿ ಬಿಜೆಪಿ- ಜೆಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಜಟಾಪಟಿ ಇದ್ದು, ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುವ ಸಂದರ್ಭವೇ ಚುನಾವಣೆ ಬಂದಿದ್ದು ತೊಡಕಾಗಿದೆ ಎನ್ನಲಾಗಿದೆ.
ರೇವಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು, ಸಂಪ್ಲಾ, ಉಕ್ಲಾನಾ, ಧಾರುಹೆರಾದಲ್ಲಿ ಬಿಜೆಪಿ ಸ್ಥಾನ ಕಳೆದುಕೊಂಡಿದೆ. ಮೂರು ಪುರಸಭೆ ನಿಗಮ ಸ್ಥಾನಗಳಲ್ಲಿ ಸ್ವತಂತ್ರ್ಯ ಅಭ್ಯರ್ಥಿಗಳು ಗೆದ್ದಿದ್ದಾರೆ.

ಅಂಬಾಲ, ಪಂಚಕುಲ ಮತ್ತು ಸೋನಿಪತ್ ಪುರಸಭೆಯ ಎಲ್ಲಾ ವಾರ್ಡ್ ಗಳ ಮೇಯರ್ ಹಾಗೂ ಸದಸ್ಯರ ನೇಮಕಕ್ಕೆ, ರೇವಾರಿ ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಕ್ಕೆ, ರೋಹ್ತಕ್, ಧಾರುಹೆರಾ ಮತ್ತು ಉಕ್ಲಾನಾ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿತ್ತು. ಒಟ್ಟು 1.8 ಲಕ್ಷ ಮತದಾರರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. 2013ರಲ್ಲಿ ನಡೆದ ಕೊನೆಯ ನಗರಸಭೆ ಚುನಾವಣೆಗೆ ಹೋಲಿಸಿದರೆ ಮತದಾನದಲ್ಲಿ ಇಳಿಕೆಯಾಗಿದ್ದು, ಈ ಬಾರಿ ಶೇ 64.01ರಷ್ಟು ಮತದಾನ ದಾಖಲಾಗಿದೆ.












Click it and Unblock the Notifications