ಹರ್ಯಾಣದಲ್ಲಿ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರ: ಭಾನುವಾರ ಪ್ರಮಾಣವಚನ
ಚಂಡೀಗಡ, ಅಕ್ಟೋಬರ್ 26: ಹರಿಯಾಣದಲ್ಲಿ ಮತ್ತೊಮ್ಮೆ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಕಳೆದ ಬಾರಿ ಬಹುಮತದೊಂದಿಗೆ ಅಧಿಕಾರ ಪಡೆದಿದ್ದ ಬಿಜೆಪಿ, ಈ ಬಾರಿ ಜನನಾಯಕ ಜನತಾ ಪಕ್ಷದ (ಜೆಜೆಪಿ) ಬೆಂಬಲದೊಂದಿಗೆ ಸರ್ಕಾರ ರಚಿಸಲಿದೆ.
ಜೆಜೆಪಿ ನಾಯಕ ದುಷ್ಯಂತ್ ಸಿಂಗ್ ಚೌಟಾಲಾ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ಒಪ್ಪಿಕೊಂಡಿರುವ ಬಿಜೆಪಿ, ಮತ್ತೆ ಅಧಿಕಾರಕ್ಕೆ ಏರಲಿದೆ.
ಹರಿಯಾಣದಲ್ಲಿ ಸರ್ಕಾರ ರಚಿಸಲು ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿದ್ದೇವೆ. ನಮ್ಮ ಪ್ರಸ್ತಾಪವನ್ನು ಒಪ್ಪಿರುವ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ನಾನು ಈ ಮೊದಲು ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದೆ. ನಾಳೆ (ಅ.27) ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ದುಷ್ಯಂತ್ ಚೌಟಾಲಾ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮನೋಹರ್ ಲಾಲ್ ಖಟ್ಟರ್ ಶನಿವಾರ ತಿಳಿಸಿದರು.

ಸರ್ಕಾರ ರಚಿಸಲು ಬೆಂಬಲ ನೀಡುವುದಾಗಿ ಬಿಜೆಪಿ ಜತೆಗೂಡಿ ಜೆಜೆಪಿ ಹಕ್ಕು ಮಂಡಿಸಿತ್ತು. ಇದನ್ನು ಹರಿಯಾಣ ರಾಜ್ಯಪಾಲ ಸತ್ಯದೇವೊ ನಾರಾಯಣ ಆರ್ಯ ಅನುಮೋದಿಸಿದ್ದಾರೆ. ಭಾನುವಾರ ಮಧ್ಯಾಹ್ನ 2.15ಕ್ಕೆ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಹೆಸರನ್ನು ಭಾನುವಾರ ಪ್ರಕಟಿಸಲಾಗುತ್ತದೆ ಎಂದು ಖಟ್ಟರ್ ಹೇಳಿದರು.












Click it and Unblock the Notifications