ರಾಜ್ಯಪಾಲರನ್ನು ಭೇಟಿಯಾದ ಭಗವಂತ್: ಭಗತ್ ಸಿಂಗ್ ಗ್ರಾಮದಲ್ಲಿ ಪ್ರಮಾಣವಚನ
ಚಂಡೀಗಢ, ಮಾರ್ಚ್ 12: ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಭಗವಂತ್ ಮಾನ್ ಶನಿವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿದರು. ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡನೆಯನ್ನು ಮಾಡಿದ್ದಾರೆ.
ಮಾರ್ಚ್ 16 ರಂದು ಮಧ್ಯಾಹ್ನ 12.30 ಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸ್ವಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು 48 ವರ್ಷದ ಹಾಸ್ಯನಟ ರಾಜಕಾರಣಿ ರಾಜಭವನದ ಹೊರಗೆ ತಿಳಿಸಿದ್ದಾರೆ.
"ಪಂಜಾಬ್‌ನ ಎಲ್ಲಾ ಮನೆಗಳಿಂದ ಜನರು ಈ ಪ್ರಮಾಣವಚನ ಸಮಾರಂಭಕ್ಕೆ ಬರುತ್ತಾರೆ. ಅವರು ಭಗತ್ ಸಿಂಗ್‌ಗೆ ಗೌರವ ಸಲ್ಲಿಸುತ್ತಾರೆ. ಈ ಹಿಂದೆಯೇ ನಾನು ತಿಳಿಸಿದಂತೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಸ್ವಗ್ರಾಮದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಪುನರುಚ್ಛರಿಸಿದರು.

"ನಮ್ಮಲ್ಲಿ ಉತ್ತಮ ಸಂಸತ್ತು ಇದೆ. ನಾವು ಹಿಂದೆಂದೂ ಮಾಡದ, ಐತಿಹಾಸಿಕ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಅದಕ್ಕಾಗಿ ನೀವು ಕಾಯಬೇಕಾಗಿದೆ," ಎಂದು ಭಗವಂತ್ ಮಾನ್ ಎಎನ್‌ಐಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಎಪಿ ನಾಯಕ ಬೆಳಗ್ಗೆ 10:30ರ ಸುಮಾರಿಗೆ ರಾಜಭವನ ತಲುಪಿದರು.
ಶಾಸಕರಿಗೆ ಕೆಲವು ನಿರ್ದೇಶನಗಳನ್ನು ನೀಡಿದ ಭಗವಂತ್ ಮಾನ್
ಶುಕ್ರವಾರ ಮೊಹಾಲಿಯಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಧುರಿ ಕ್ಷೇತ್ರದಿಂದ 58,000 ಮತಗಳ ಅಂತರದಲ್ಲಿ ಗೆದ್ದಿರುವ ಭಗವಂತ್ ಮಾನ್ ಅವರನ್ನು ಎಎಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಆಮ್ ಆದ್ಮಿ ಪಕ್ಷದ ಹೊಸ ಶಾಸಕರಿಗೆ ತಮ್ಮ ಮೊದಲ ನಿರ್ದೇಶನದಲ್ಲಿ, ಭಗವಂತ್ ಮಾನ್, ಎಲ್ಲಾ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲೇ ಹೆಚ್ಚು ಸಮಯವನ್ನು ಕಳೆಯಬೇಕು. ಅಲ್ಲಿಯ ಕಾರ್ಯ ವೈಖರಿಯತ್ತ ಗಮನ ಹರಿಸಬೇಕು. ರಾಜಧಾನಿ ಚಂಡೀಗಢದಲ್ಲಿ ಹೆಚ್ಚಾಗಿ ಇರುವುದು ಅಲ್ಲ. ಜನರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಿಳಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸಚಿವ ಸ್ಥಾನಗಾಗಿ ನೀವು ಹಾತೊರೆಯಬೇಡಿ ಎಂದು ಕೂಡಾ ತಿಳಿಸಿದ್ದಾರೆ.
"ನಾವು ಮತ ಕೇಳಲು ಹೋದ ಎಲ್ಲ ಸ್ಥಳಗಳಿಗೆ ನಾವು ಕೆಲಸ ಮಾಡಬೇಕು. ಎಲ್ಲಾ ಶಾಸಕರು ಚಂಡೀಗಢದಲ್ಲಿ ಉಳಿಯದೆ ಅವರು ಆಯ್ಕೆಯಾದ ಪ್ರದೇಶಗಳಲ್ಲಿ ಕೆಲಸ ಮಾಡಬೇಕು," ಎಎಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ ಭಗವಂತ್ ಮಾನ್ ತಿಳಿಸಿದ್ದಾರೆ. ಮಾರ್ಚ್ 16 ರಂದು ಪ್ರಮಾಣ ವಚನ ಸಮಾರಂಭವನ್ನು ನಿಗಧಿ ಮಾಡಲಾಗಿದೆ.
"ಮುಖ್ಯಮಂತ್ರಿ ಹೊರತುಪಡಿಸಿ 17 ಮಂದಿ ಕ್ಯಾಬಿನೆಟ್ ಮಂತ್ರಿಗಳನ್ನು ನಾವು ಹೊಂದಲು ಸಾಧ್ಯವಿದೆ. ಯಾರೂ ಕೂಡಾ ಅಸಮಾಧಾನಕ್ಕೆ ಒಳಗಾಗಬಾರದು. ನೀವೆಲ್ಲರೂ ಸಂಪುಟ ಸಚಿವರುಗಳು," ಎಂದು ಎಎಪಿಯ 92 ಶಾಸಕರ ಸಭೆಯಲ್ಲಿ ಭಗವಂತ್ ಮಾನ್ ತಿಳಿಸಿದರು. ಪಕ್ಷಕ್ಕೆ ಯಾರು ಮತ ಹಾಕಿಲ್ಲವೋ ಅವರ ಮೇಲೆ ದ್ವೇಷ ತೋರದಂತೆ ಜನರಿಗಾಗಿ ಕೆಲಸ ಮಾಡಿ, ದುರಹಂಕಾರಕ್ಕೆ ಒಳಗಾಗದೆ ಕೆಲಸ ಮಾಡಿ ಎಂದು ನೂತನ ಶಾಸಕರಿಗೆ ಮನವಿ ಮಾಡಿದರು. ದುರಹಂಕಾರ ಬೇಡ ಎಂದು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಮತ ಹಾಕದವರಿಗಾಗಿಯೂ ಕೆಲಸ ಮಾಡಿ. ನೀವು ಪಂಜಾಬಿಗಳ ಶಾಸಕರು. ಅವರು ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದರು.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆ ಕ್ಷೇತ್ರಗಳ ಪೈಕಿ ಎಎಪಿ 92 ಸ್ಥಾನಗಳನ್ನು ಗಳಿಸುವ ಮೂಲಕ ಚುನಾವಣೆಯಲ್ಲಿ ಭಾರಿ ಗೆಲುವು ದಾಖಲಿಸಿದೆ. ಹಾಲಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ, ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮತ್ತು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ವಿವಿಧ ಪಕ್ಷಗಳ ದೈತ್ಯರನ್ನು ಎಎಪಿಯು ಪರಾಭವಗೊಳಿಸಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications