ಕಾಂಗ್ರೆಸ್‌ಗೆ ನವಜೋತ್ ಸಿಧು ಹೊಸ ವಾರ್ನಿಂಗ್
ಚಂಡೀಗಢ, ಜನವರಿ 11: ಪಂಜಾಬ್ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಅಲ್ಲಿನ ಜನರೇ ನಿರ್ಧರಿಸುತ್ತಾರೆ ಹೊರತು ಪಕ್ಷದ ಹೈಕಮಾಂಡ್ ಅಲ್ಲ ಎಂದು ನವಜೋತ್ ಸಿಂಗ್ ಸಿಧು ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ. ಈ ಮೂಲಕ ಪಕ್ಷಕ್ಕೆ ಹೊಸ ವಾರ್ನಿಂಗ್ ಅನ್ನು ನೀಡಿದ್ದಾರೆ.
ಚುನಾವಣೆಗೂ ಒಂದು ತಿಂಗಳಿಗೂ ಮೊದಲು ನವಜೋತ್ ಸಿಂಗ್ ಸಿಧುರ ಈ ಹೊಸ ಹೇಳಿಕೆಯು ಕಾಂಗ್ರೆಸ್‌ನ ಪಂಜಾಬ್ ಘಟಕದಲ್ಲಿ ಮತ್ತು ಹಿರಿಯ ನಾಯಕರಲ್ಲಿ ಅಸಮಾಧಾನವನ್ನು ಉಂಟುಮಾಡುವ ಸಾಧ್ಯತೆಯಿದೆ. ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, "ಯಾರು ಮುಖ್ಯಮಂತ್ರಿಯಾಗಬೇಕೆಂದು ಪಂಜಾಬ್‌ನ ಜನರು ನಿರ್ಧರಿಸುತ್ತಾರೆ, ನಿಮಗೆ (ಕಾಂಗ್ರೆಸ್) ಹೈಕಮಾಂಡ್ ಸಿಎಂ ಮಾಡುತ್ತದೆ ಎಂದು ಯಾರು ಹೇಳಿದರು?," ಎಂದು ಪ್ರಶ್ನೆ ಮಾಡಿದ್ದಾರೆ.
"ನಿಮ್ಮ ಮನಸ್ಸಿನಲ್ಲಿ ಸುಳ್ಳು ಸುಳಿವು ಬೇಡ. ಪಂಜಾಬ್‌ನ ಜನರು ಶಾಸಕರನ್ನು ಆಯ್ಕೆ ಮಾಡುತ್ತಾರೆ ಮತ್ತು ಮುಖ್ಯಮಂತ್ರಿ ಯಾರು ಎಂದು ಅವರೇ ನಿರ್ಧರಿಸುತ್ತಾರೆ," ಎಂದು ತಿಳಿಸಿದರು. ಇನ್ನು ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮುಖ್ಯಮಂತ್ರಿ ಮುಖವನ್ನು ಘೋಷಿಸುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಸುನೀಲ್ ಜಾಖರ್ ಹೇಳಿದ ಕೆಲವು ದಿನಗಳ ನಂತರ ಸಿಧು ಈ ಹೊಸ ಬಾಂಬ್ ಹಾಕಿದ್ದಾರೆ. ಪಕ್ಷವು "ಜಂಟಿ ನಾಯಕತ್ವ" ದಲ್ಲಿ ಚುನಾವಣೆಯನ್ನು ಎದುರಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಸುನೀಲ್ ಜಾಖರ್ ಕೊನೆಯ ವಾರದಲ್ಲಿ ಹೇಳಿದ್ದರು.

ಪಕ್ಷದ ಸ್ಥಾನದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಪಂಜಾಬ್ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸಾರ್ವಜನಿಕವಾಗಿ ನೀಡುವ ಹೇಳಿಕೆಗಳು ಪಕ್ಷದಲ್ಲಿ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ವಿರೋಧ ಪಕ್ಷ ಎಎಪಿ ಕಾಂಗ್ರೆಸ್‌ನ ಒಳಜಗಳವನ್ನು ಕೂಡಾ ಚುನಾವಣಾ ಪ್ರಚಾರದಲ್ಲಿ ಮುಂದಿರಿಸಿಕೊಂಡಿದೆ.
"ಸಿಎಂ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ ನಾಯಕತ್ವಕ್ಕೆ ಬಿಟ್ಟದ್ದು"
ಮುಂದಿನ ತಿಂಗಳೇ ಚುನಾವಣೆ ನಡೆಯಲಿದೆ. ಈ ನಡುವೆ ಪಂಜಾಬ್‌ನ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಕುತೂಹಲ ಮೂಡಿದೆ. ಜನವರಿ 4 ರಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಿಧು, ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸುವುದು ಕಾಂಗ್ರೆಸ್ ನಾಯಕತ್ವಕ್ಕೆ ಬಿಟ್ಟದ್ದು ಎಂದು ಹೇಳಿದ್ದರು. ಅದೇ ಸಂದರ್ಶನದಲ್ಲಿ, ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಬಗ್ಗೆ ಮಾತನಾಡಿದ್ದರು. "ಚನ್ನಿ ಉದ್ದೇಶ ಒಳ್ಳೆಯದು. ಆದರೆ ಅವರು ಬಜೆಟ್ ಹಂಚಿಕೆ, ಸಂಶೋಧನೆ ಮತ್ತು ರಾಜ್ಯವನ್ನು ಉಳಿಸಲು ಸರಿಯಾದ ನೀತಿಯನ್ನು ಅನುಸರಿಸಬೇಕು," ಎಂದು ಅಭಿಪ್ರಾಯಿಸಿದ್ದರು.
ಪಂಜಾಬ್ ವಿಧಾನಸಭೆ ಚುನಾವಣೆ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. 2017ರಲ್ಲಿ 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿ 10 ವರ್ಷಗಳ ಆಡಳಿತ ನಡೆಸಿದ ಎಸ್‌ಎಡಿ-ಬಿಜೆಪಿ ಸರ್ಕಾರವನ್ನು ಕೆಡವಿತು. ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳನ್ನು ಪಡೆದುಕೊಂಡಿತ್ತು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications