• search
  • Live TV
ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಂಡೀಪುರ ರಾತ್ರಿ ವಾಹನ ಸಂಚಾರ ನಿಷೇಧ ಖಾಯಂ ಆಗುತ್ತಾ?

By ಚಾಮರಾಜನಗರ ಪ್ರತಿನಿಧಿ
|

ಚಾಮರಾಜನಗರ, ಆಗಸ್ಟ್ 8: ಕರ್ನಾಟಕ ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ರಾತ್ರಿ ವಾಹನ ಸಂಚಾರವನ್ನು ಕಳೆದೊಂದು ದಶಕದಿಂದ ನಿಷೇಧಿಸಲಾಗಿದೆ. ಈ ನಿಷೇಧ ಆದೇಶವನ್ನು ತೆರವುಗೊಳಿಸಲು ಕೇರಳ ಸರ್ಕಾರ ಒಂದಲ್ಲ ಒಂದು ರೀತಿಯಲ್ಲಿ ಸರ್ಕಸ್ ಮಾಡುತ್ತಲೇ ಬರುತ್ತಿದೆ.

ಹುಲಿ ಸಂರಕ್ಷಿತ ಪ್ರದೇಶವಾಗಿರುವುದರಿಂದ ಮತ್ತು ವನ್ಯ ಪ್ರಾಣಿಗಳು ರಾತ್ರಿ ವೇಳೆ ಸಂಚಾರ ಮಾಡುವುದರಿಂದ ಅವುಗಳ ಜೀವನ ಕ್ರಮಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ 2009ರಲ್ಲಿ ಆಗಿನ ಚಾಮರಾಜನಗರ ಜಿಲ್ಲಾಧಿಕಾರಿಗಳಾಗಿದ್ದ ಮನೋಜ್‌ಕುಮಾರ್ ಮೀನಾ ಅವರು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಸಂಚಾರವನ್ನು ನಿಷೇಧಿಸಿದ್ದರು. ಇದರಿಂದ ರಾತ್ರಿ ವೇಳೆಯ ಕಳ್ಳಸಾಗಾಣಿಕೆ, ವನ್ಯಪ್ರಾಣಿಗಳ ಬೇಟೆ, ಅಷ್ಟೇ ಅಲ್ಲದೆ ವಾಹನಗಳಿಗೆ ಸಿಲುಕಿ ವನ್ಯ ಪ್ರಾಣಿಗಳು ಸಾವನ್ನಪ್ಪುವ ಸಂಖ್ಯೆ ಇಳಿಮುಖ ಕಂಡಿತ್ತು.

ಬಂಡೀಪುರ ರಾತ್ರಿ ಸಂಚಾರದ ಮೇಲೆ ಮತ್ತೆ ರಾಹುಲ್ ಗಾಂಧಿ ಕಣ್ಣು

ಆದರೆ ಈ ಆದೇಶದಿಂದ ಕೇರಳದ ಕೆಲವು ಮಾಫಿಯಾಗಳಿಗೆ ಭಾರೀ ಹೊಡೆತ ಬಿದ್ದಿತ್ತು. ಹೀಗಾಗಿ ಈ ಆದೇಶವನ್ನು ತೆರವುಗೊಳಿಸುವಂತೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗಿತ್ತು. ಅಷ್ಟೇ ಅಲ್ಲದೆ ತೆರವುಗೊಳಿಸುವಂತೆ ಹಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಜಿಲ್ಲಾಡಳಿತದ ಆದೇಶವನ್ನು ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯವು ಎತ್ತಿ ಹಿಡಿದಿತ್ತು.

ಈ ನಡುವೆ ಕೇರಳ ಸರ್ಕಾರಕ್ಕೆ ರಾತ್ರಿ ವಾಹನ ಸಂಚಾರ ನಿಷೇಧದಿಂದ ಭಾರೀ ನಷ್ಟವಾಗುತ್ತಿದ್ದು, ಇದನ್ನು ತೆರವುಗೊಳಿಸು ವಂತೆ ಕೇಂದ್ರದ ಮೇಲೆ ಒತ್ತಡವನ್ನು ಹೇರುತ್ತಾ ಬರಲಾಗುತ್ತಿತ್ತು. ಆದರೆ ಅದ್ಯಾವುದೂ ನಿರೀಕ್ಷಿತ ಫಲಿತಾಂಶ ತಂದುಕೊಡಲಿಲ್ಲ. ಇದೆಲ್ಲದರ ನಡುವೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಮಾರ್ಗವಾಗಿ ಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನು ಕೇರಳ ಸರ್ಕಾರ ಕೇಂದ್ರದ ಮುಂದಿಟ್ಟಿತ್ತು. ಕೇರಳಕ್ಕೆ ಅಧಿಕ ಸಂಖ್ಯೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದು, ಅವುಗಳಿಗೆ ಅನುಕೂಲವಾಗುವ ಹಾಗೆ ರಾತ್ರಿ ವೇಳೆ ವಾಹನ ಸಂಚಾರ ತೆರವಿಗೆ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಮನವಿಯನ್ನು ತಿಳಿಸಲಾಗಿತ್ತು.

ಮೇಲ್ಸೇತುವೆ ನಿರ್ಮಾಣದ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಹಲವು ಸಂಘ ಸಂಸ್ಥೆಗಳು ಪ್ರಬಲವಾಗಿ ವಿರೋಧಿಸಿದ್ದವು. ಕೇರಳ ಸರ್ಕಾರದ ಈ ಮನವಿಯ ಹಿಂದೆ ಕೆಲವು ಮಾಫಿಯಾಗಳ ಕೈವಾಡವಿದೆ ಎಂಬ ಆರೋಪವೂ ಕೇಳಿಬಂದಿತ್ತು ಆದರೆ ಕೇಂದ್ರ ಸರ್ಕಾರ ಇದನ್ನು ತಳ್ಳಿಹಾಕಿತ್ತು.

Infographics: ಹುಲಿಗಳ ಲೆಕ್ಕದಲ್ಲಿ ಮಧ್ಯಪ್ರದೇಶ ನಂ.1, ಕರ್ನಾಟಕ ನಂ.2

ಈ ಬಾರಿ ರಾಹುಲ್ ಗಾಂಧಿ ಕೇರಳದ ವೈನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದು, ಅವರ ಮೂಲಕ ಕೇಂದ್ರದ ಮೇಲೆ ಒತ್ತಡ ತಂದು ರಾತ್ರಿ ಸಂಚಾರ ತೆರವುಗೊಳಿಸುವ ಪ್ರಯತ್ನ ಮಾಡಲಾಗಿತ್ತು. ಹೀಗಾಗಿ ಲೋಕಸಭೆಯಲ್ಲಿ ರಾಹುಲ್ ಗಾಂಧಿ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ಕುರಿತು ಪ್ರಶ್ನೆ ಕೇಳಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರವನ್ನು ನಿಷೇಧ ಮಾಡಿರುವುದರಿಂದ ಉತ್ತರ ಮಲಬಾರ್ ಭಾಗದ ಜನರು ತೊಂದರೆಗೆ ಒಳಗಾಗಿದ್ದಾರೆ ಎಂದು ಸಮರ್ಥನೆ ನೀಡಿದ್ದರು.

ಇದಕ್ಕೆ ಉತ್ತರಿಸಿದ ಕೇಂದ್ರ ಅರಣ್ಯ ಸಚಿವ ಡಾ.ಮಹೇಶ್ ಶರ್ಮರವರು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ಅಲ್ಲಿನ ಜಿಲ್ಲಾಡಳಿತ ಈಗಾಗಲೇ ನಿಷೇಧ ಹೇರಿ ಆದೇಶ ಹೊರಡಿಸಿದ್ದು, ವನ್ಯ ಪ್ರಾಣಿಗಳನ್ನು ಕಾಪಾಡುವ ಮತ್ತು ಅವುಗಳ ಸಂತತಿ ಉಳಿಸುವ ಸಲುವಾಗಿ ಈ ಕ್ರಮವಾಗಿದೆ ಎಂದು ಉತ್ತರ ನೀಡಿದ್ದರು.

ರಾತ್ರಿ ಸಂಚಾರ ನಿಷೇಧ ವಿಚಾರದಲ್ಲಿ ಕಳೆದೊಂದು ದಶಕದಿಂದ ಜಟಾಪಟಿ ನಡೆಯುತ್ತಲೇ ಬಂದಿರುವುದರಿಂದ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಮುಂದಾಗಿದೆ. ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಮುಟ್ಟದಂತೆ ಪರ್ಯಾಯ ವ್ಯವಸ್ಥೆಗೆ ಕೇಂದ್ರಕ್ಕೆ ಸೂಚನೆ ನೀಡಿದೆ. ಜತೆಗೆ ರಾಷ್ಟ್ರೀಯ ಉದ್ಯಾನದೊಳಗೆ ರಾತ್ರಿ ವಾಹನ ಸಂಚಾರ ಒಳ್ಳೆಯದಲ್ಲ ಎಂಬ ತೀರ್ಮಾನಕ್ಕೆ ಸುಪ್ರೀಂಕೋರ್ಟ್ ನ್ಯಾಯಪೀಠ ಬಂದಿದೆ. ಹೀಗಾಗಿ ಬಂಡೀಪುರ ರಾತ್ರಿ ಸಂಚಾರ ನಿಷೇಧ ಕಾಯಂ ಆಗುವ ಸಾಧ್ಯತೆ ದಟ್ಟವಾಗಿದೆ.

English summary
Night traffic has been banned for over a decade on Bandipur National Park and Tiger Reserve in Chamarajanagar district, which connects Karnataka and Kerala. Now the supreme court instructed the Center not to touch the Bandipur Tiger Reserve issue. The Supreme Court has also suggested that overnight traffic inside the national park is not good.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X