ಮರೂರು: ಮತ್ತೆ ಮುಂದುವರೆದ "ಸಲಗ ದಾಳಿ": ಬೈಕ್, ಮರ, ಮನೆ ಗೇಟ್ ಧ್ವಂಸ
ಚಾಮರಾಜನಗರ, ಜೂನ್, 16: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮರೂರು ಗ್ರಾಮಕ್ಕೆ ಆನೆಯೊಂದು ನುಗ್ಗಿ ದಾಂಧಲೆ ಎಬ್ಬಿಸಿದೆ. ಈ ಹಿನ್ನೆಲೆ ಇಲ್ಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗ್ರಾಮ ಇದಾಗಿದ್ದು, ಒಂಟಿ ಸಲಗವೊಂದು ರಾತ್ರೋರಾತ್ರಿ ಗ್ರಾಮಕ್ಕೆ ಲಗ್ಗೆ ಇಟ್ಟು ನಾಗಣ್ಣ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಗೇಟ್ ಅನ್ನು ತುಳಿದು ಹಾನಿ ಮಾಡಿದೆ. ಇನ್ನು, ಹಲಸಿನ ಮರವನ್ನು ಮುರಿದು ಹಾಕಿದ್ದು, ಫಸಲು ಕೂಡ ಹಾನಿಯಾಗಿದೆ.

ಆನೆಯ ದಾಳಿ ಶಬ್ಧ ಕೇಳುತ್ತಿದ್ದಂತೆ ಜಾಗೃತರಾಗುವ ಗ್ರಾಮಸ್ಥರು ನಿತ್ಯ ರಾತ್ರಿ ಕಾಡಿನತ್ತ ಓಡಿಸುತ್ತಿದ್ದಾರೆ. ಹಾಗೆಯೇ ನಿತ್ಯವೂ ಇಲ್ಲಿದೆ ಗ್ರಾಮಸ್ಥರು ಆನೆಯ ಆತಂಕದಲ್ಲೇ ಬದುಕು ಸಾಗಿಸುವಂತಾಗಿದೆ. ಅರಣ್ಯ ಇಲಾಖೆಗೆ ಮನವಿ ಎಷ್ಟೇ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ಇಲ್ಲಿನ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಎರಡನೇ ಪುಂಡಾನೆ ಸೆರೆ
ಜಿಲ್ಲೆಯಲ್ಲಿ ರೈತರ ಜಮೀನುಗಳ ಮೇಲೆ ನಿರಂತರವಾಗಿ ದಾಳಿ ಮಾಡಿ ಉಪಟಳ ನೀಡುತ್ತಿದ್ದ ಒಂದು ಪುಂಡಾನೆಯನ್ನು ಇತ್ತೀಚೆಗಷ್ಟೇ ಸೆರೆಹಿಡಿಯಲಾಗಿತ್ತು. ಹಾಗೆಯೇ ಇದೀಗ ಮತ್ತೆ ನಿನ್ನೆ ಎರಡನೇ ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಚನ್ನಪಟ್ಟಣ ತಾಲೂಕಿನ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗವನ್ನು ಅಭಿಮನ್ಯು ನೇತೃತ್ವದ 5 ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆಯಿಡಿದು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಇದೀಗ ಪುಂಡಾನೆ ಸೆರೆ ಕಾರ್ಯಾಚರಣೆ 11ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಆರು ದಿನಗಳಿಂದ ಸತಾಯಿಸುತ್ತಿದ್ದ ಕಾಡನೆ ಇಂದು ಅರಣ್ಯ ಇಲಾಖೆ ಖೆಡ್ಡಾಗೆ ಕೆಡವಿದೆ.
ಎರಡನೇ ಪುಂಡಾನೆಯನ್ನು ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ ಅರವಳಿಕೆ ನೀಡಿ ಸೆರೆಹಿಡಿದ್ದಿದ್ದಾರೆ. ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲಿ ನಾಗರಹೊಳೆ ಅರಣ್ಯ ವಲಯದ 5 ಸಾಕಾನೆಗಳು, ನುರಿತ ವೈದ್ಯರು ಹಾಗೂ ಸ್ಥಳೀಯ ಅರಣ್ಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಇದೇ ತಿಂಗಳು ಒಂದೇ ವಾರದ ಅವದಿಯಲ್ಲಿ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದ ಬಳಿ ಕಾಳಯ್ಯ ಹಾಗೂ ತೆಂಗಿನ ಕಲ್ಲು ಅರಣ್ಯ ವ್ಯಾಪ್ತಿಯ ವಿರುಪಸಂದ್ರ ಗ್ರಾಮದ ಬಳಿ ವೀರಭದ್ರ ಎಂಬುವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಆರಣ್ಯ ಇಲಾಖೆ ಪುಂಡಾನೆ ಸೆರೆ ಕಾರ್ಯಚರಣೆಯನ್ನು ಜೂನ್ 5 ರಂದು ಪ್ರಾರಂಭಿಸಿತ್ತು.
ರೈತರು ಹಾಗೂ ಅರಣ್ಯ ಇಲಾಖೆಗೆ ತಲೆನೋವಾಗಿದ್ದ ಒಂದು ಪುಂಡಾನೆಯನ್ನು ಜೂನ್ 8ರಂದು ತೆಂಗಿನಕಲ್ಲು ಆರಣ್ಯ ವ್ಯಾಪ್ತಿಯ ಅರಳಾಳುಸಂದ್ರ ಗ್ರಾಮದ ಬಳಿ ಸೆರೆಯಿಡಿದು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರ ಮಾಡಿದ್ದರು. ನಂತರ ಏಳು ದಿನಗಳ ಅಂತರದಲ್ಲಿ ಮತ್ತೊಂದು ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಇನ್ನೂ ಹಲವು ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಚರಣೆ ಮುಂದುವರೆಯಲಿದೆ. ನಾಗರಹೊಳೆ ಮತ್ತಿಗೂಡು ಆನೆ ಶಿಬಿರದ ಭೀಮ, ಅರ್ಜುನ, ಮಹೇಂದ್ರ, ಶ್ರೀಕಂಠ, ಅಭಿಮನ್ಯು ಸಾಕಾನೆಗಳು ಸೇರಿದಂತೆ ಮಾವುತರು, ಕಾವಡಿಗಳು ಹಾಗೂ ನುರಿತ ವೈದ್ಯರ ತಂಡ ಪುಂಡಾನೆ ಸೆರೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪುಂಡಾನೆ ಸೆರೆ ಆಪರೇಷನ್
ಇತ್ತೀಚೆಗಷ್ಟೇ ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದಲ್ಲಿ ಮಾವಿನ ತೋಟದ ಕಾವಲುಗಾರನನ್ನು ಪುಂಡಾನೆ ತುಳಿದು ಸಾಯಿಸಿದ್ದು, ಈ ಹಿನ್ನೆಲೆ ಅರಣ್ಯ ಇಲಾಖೆ ಎರಡನೇ ಬಾರಿಗೆ ಪುಂಡಾನೆ ಸೆರೆಯಿಡಿಯಲು ಜೂನ್ 04ರಂದು 5 ಸಾಕನೆಗಳನ್ನು ಬಳಸಿಕೊಂಡು "ಆಪರೇಷನ್ ಪುಂಡಾನೆ ಸೆರೆ" ಕಾರ್ಯಚರಣೆ ಪ್ರಾರಂಭಿಸಿತ್ತು. ಇದೀಗ ಅರಳಾಳುಸಂದ್ರ ಗ್ರಾಮದ ಬಳಿ ಪುಂಡಾನೆಯನ್ನು ಸೆರೆಹಿಡಿಯುವ ಮೂಲಕ ಕಾರ್ಯಾಚರಣೆಯನ್ನು ಯಶ್ವಸಿಗೊಳಿಸಿದ್ದರು.
ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಳಿಯ ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾನೆಯನ್ನು ಸೆರೆಹಿಡಿದಿದೆ. ಅರವಳಿಕೆ ಮದ್ದು ನೀಡಿ ಕಾಡಾನೆಯನ್ನು ಸೆರೆಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿದ್ದು, ಇಂದು ಕೊನೆಗೂ ಅಭಿಮನ್ಯು ಸೇರಿ 4 ಆನೆಗಳನ್ನು ಬಳಸಿಕೊಂಡು ಪುಂಡಾನೆಯನ್ನು ಸೆರೆಹಿಡಿಯಲಾಗಿತ್ತು.
ಇನ್ನು ಪುಂಡಾನೆ ದಾಳಿಗೆ ಇತ್ತೀಚೆಗಷ್ಟೇ ಇಬ್ಬರು ಅಮಾಯಕರು ಬಲಿಯಾಗಿದ್ದರು. ಆಗಿಂದ ಇಲ್ಲಿನ ಜನರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರು. ಬಳಿಕ ಎಚ್ಚೆತ್ತ ಇಲಾಖೆ ಪುಂಡಾನೆಯನ್ನು ಬಲೆಗೆ ಕಡವಿದೆ. ಈ ಹಿನ್ನೆಲೆ ಅಲ್ಲಿನ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೆಯೇ ಇನ್ನೂ ಉಳಿದಿರುವ 4-5 ಪುಂಡಾನೆಗಳನ್ನು ಅರಣ್ಯ ಇಲಾಖೆ ಸೆರೆಹಿಡಿಯಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಇತ್ತೀಚೆಗಷ್ಟೇ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದ ದೇವರಾಜು ಎಂಬುವವರಿಗೆ ಸೇರಿದ ಮಾವಿನತೋಟದ ಕಾವಲುಗಾರನಾಗಿ ಕೆಲಸ ಮಾಡುತಗತಿದ್ದ ಮುತ್ತರಾಯನಪುರ ಮೂಲದ ವೀರಭದ್ರಯ್ಯ ಎಂಬುವವರನ್ನು ಪುಂಡಾನೆ ದಾಳಿ ಮಾಡಿ ತುಳಿದು ಸಾಯಿಸಿತ್ತು. ಪುಂಡಾನೆ ದಾಳಿಗೆ ರೈತ ಬಲಿಯಾದ ಹಿನ್ನೆಲೆಯಲ್ಲಿ ರೈತರು ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಪುಂಡಾನೆ ಸೆರೆಗೆ ಮುಂದಾಗಿತ್ತು.












Click it and Unblock the Notifications