SC-STಮೀಸಲಾತಿ ಹೆಚ್ಚಿಸಿ, ಶೀಘ್ರ ಸಿಹಿಸುದ್ದಿ ಕೊಡುತ್ತೇವೆ: ಸಚಿವ ಶ್ರೀರಾಮುಲು ಭರವಸೆ
ಚಾಮರಾಜನಗರ, ಜುಲೈ 12: ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳ ಮೀಸಲಾತಿ ಹೆಚ್ಚಿಸುತ್ತೇವೆ, ಶೀಘ್ರದಲ್ಲೇ ಸಿಹಿ ಸುದ್ದಿ ಕೊಟ್ಟೇ ಕೊಡುತ್ತೇವೆ ಎಂದು ಸಚಿವ ಶ್ರೀರಾಮುಲು ಮಂಗಳವಾರ ಕೊಳ್ಳೇಗಾಲದಲ್ಲಿ ಹೇಳಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, "ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡು ಬದ್ಧತೆ ಪ್ರದರ್ಶಿಸುತ್ತದೆ. ಲೇಟ್ ಮಾಡಲ್ಲ, ಪರಿಶಿಷ್ಠ ಪಂಗಡಕ್ಕೆ ಶೆ.7.5 ರಷ್ಟು ಹಾಗೂ ಪರಿಶಿಷ್ಟ ಜಾತಿಗೆ ಎರಡು ಪರ್ಸೆಂಟ್ ಏರಿಕೆ ಮಾಡಿ ಶೇ 15ರಿಂದ ಶೇ.17 ರಷ್ಟು ಮೀಸಲಾತಿ ಕೊಡುವ ಕೆಲಸ ಆದಷ್ಟು ಶೀಘ್ರ ಆಗಲಿದೆ. ಮೀಸಲಾತಿ ವಿಷಯ ಆಗಿರುವ ಕಾರ ಸ್ವಲ್ಪ ಕಾನೂನಿನಲ್ಲಿ ತಡವಾಗಿದೆ," ಎಂದರು.
ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿ ಎಸ್ಸಿ-ಎಸ್ಟಿ ಸಮುದಾಯದವರನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಈಗ ನಮ್ಮ ಸರ್ಕಾರ ಇದೆ ಎಂದು ಹರಿಹಾಯುತ್ತಿದ್ದಾರೆ, ಕಾಂಗ್ರೆಸ್ ನವರು ಶಾಸಕರ ಕೊಠಡಿ ಮುಂದೆ ವಾಲ್ಮೀಕಿ ಪ್ರತಿಮೆ ಸ್ಥಾಪಿಸಿದ್ದು ಬಿಟ್ಟರೇ ಇನ್ಯಾವ ಕೆಲಸವೂ ಅವರು ಮಾಡಿಲ್ಲ. ಮೀಸಲಾತಿ ನೀಡಲು ನಮ್ಮ ಪಾಳಿ ಬಂದಿದೆ, ನಾವು ಕೊಡುತ್ತೇವೆ. ಈ ಹಿಂದೆ, ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಜಯಂತಿ ಮಾಡಲಾಯಿತು, ತಳವಾರ-ಪರಿವಾರವನ್ನು ಎಸ್ಟಿಗೆ ಸೇರಿಸಲಾಯಿತು, ವಾಲ್ಮೀಕಿ ಭವನ ನಿರ್ಮಾಣ ನಮ್ಮ ಕಾಲದಲಿ ಆಯಿತು ಇದನ್ನು ಯಾರೂ ಮರೆಯಬಾರದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಜನಪ್ರತಿನಿಧಿಗಳು, ಸ್ವಾಮೀಜಿಗಳಿಗೆ ಪ್ರತಿಭಟನೆ ಮಾಡಬೇಡಿ ನಾವು, ಮೀಸಲಾತಿ ಕೊಡಿಸುತ್ತೇವೆ ಎಂದು ಅವರು ಕೇಳುತ್ತಿಲ್ಲ. ಕಾಂಗ್ರೆಸ್ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಎಸ್‌ಸಿ ಎಸ್‌ಟಿಗೆ ಏನು ಮಾಡಿದ್ದಾರೆ. ಈಗ ಪ್ರತಿಭಟನೆ ಮಾಡಿಸಿ ರಾಜಕೀಯ ಲಾಭ ಪಡೆದುಕೊಳ್ಳಲು ಬಂದಿದ್ದಾರೆ. ಆದರೆ ಇದು ನಮ್ಮ ಅವಧಿ, ಶೀಘ್ರದಲ್ಲಿ ಮೀಸಲಾತಿ ಕೊಡಿಸುತ್ತೇವೆ. ನಾವು ಹೋರಾಟ ಮಾಡುತ್ತಿರುವವರು ಈಗ ಬೈಯ್ಯುತ್ತಿರುವವರೆಲ್ಲಾ ಕುಣಿದಾಡುವಂತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಸಿದ್ದರಾಮೋತ್ಸವದ ಬಗ್ಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯಗೆ ಉತ್ಸವಮೂರ್ತಿ ಪರಿಸ್ಥಿತಿ ಬರುತ್ತದೆ, ಅವರು ಸಿದ್ದರಾಮೋತ್ಸವದ ಬಳಿಕ ಕೇವಲ ಉತ್ಸವ ಮೂರ್ತಿಯಾಗಿ ಮಾತ್ರ ಉಳಿದುಕೊಳ್ಳಲಿದ್ದಾರೆ ಎಂದು ವ್ಯಂಗ್ಯವಾಡಿದರು. ಮಂಗಳವಾರ ಶ್ರೀರಾಮುಲು ಜಿಲ್ಲಾ ಪ್ರವಾಸದಲ್ಲಿದ್ದು ವಿವಿಧ ಶಾಲೆಗಳ ನೂತನ ಕಟ್ಟಡ ಉದ್ಘಾಟನೆ, ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.












Click it and Unblock the Notifications