ಚುನಾವಣಾ ಪ್ರಚಾರದಲ್ಲೂ ವಿಭಿನ್ನತೆ: ಹಣ್ಣು ಮಾರಿ ಮತಯಾಚನೆ ಮಾಡಿದ ವಾಟಾಳ್ ನಾಗರಾಜ್
ಚಾಮರಾಜನಗರ, ಮೇ 1: ವಿಭಿನ್ನ ಚಳವಳಿ ಮೂಲಕ ಗಮನ ಸೆಳೆಯುವ ವಾಟಾಳ್ ನಾಗರಾಜ್ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆಯನ್ನೂ ವಿಭಿನ್ನವಾಗಿಯೇ ಮಾಡುತ್ತಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಮಾಜಿ ಶಾಸಕ ವಾಟಾಳ್ ನಾಗರಾಜ್, ಚಾಮರಾಜನಗರದ ಮಾರಿಗುಡಿ ಬೀದಿಯಲ್ಲಿನ ಹಣ್ಣು ಮಾರಾಟಗಳ ಗಾಡಿಗಳಲ್ಲಿ ಕುಳಿತು ಮಾವು, ಸೇಬು, ಬಾಳೆ ಮಾರಾಟ ಮಾಡಿ ಮತಯಾಚನೆ ಮಾಡಿದರು.

ಅರ್ಧ ಕೆಜಿ ಸೇಬಿಗೆ 100 ರೂ. ವಾಟಾಳ್ ನಾಗರಾಜ್‌ಗೆ ಒಂದು ಓಟ್, ಅರ್ಧ ಕೆಜಿ ಮಾವಿನ ಹಣ್ಣಿಗೆ 60 ರೂ ನಿಮ್ಮ ವಾಟಾಳ್‌ಗೆ ಒಂದು ಮತ ಎಂದು ಹಣ್ಣುಗಳನ್ನು ಮಾರಾಟ ಮಾಡುವ ಜೊತೆ ಜೊತೆಗೆ ತನಗೊಂದು ಮತ ಕೊಡುವಂತೆ ಮನವಿ ಮಾಡಿದರು. ಗಲ್ಲಾದ ಮೇಲೆ ವಾಟಾಳ್ ಕುಳಿತಿದ್ದರಿಂದ ಜನರು ಭರ್ಜರಿಯಾಗಿಯೇ ವ್ಯಾಪಾರವನ್ನು ಮಾಡಿದರು. ಜೊತೆಗೆ ಮತದಾರರು ಮತ ಹಾಕುವ ಭರವಸೆಯನ್ನು ನೀಡಿದ್ದಾರೆ.
ಜಿಲ್ಲೆ ಮಾಡಿದ್ದು ನಾನು, ರಾಹುಲ್ ಗಾಂಧಿ ಅಲ್ಲ
ಚಾಮರಾಜನಗರಕ್ಕೆ ರಾಹುಲ್ ಗಾಂಧಿ ಭೇಟಿ ನೀಡುವ ಕುರಿತು ವಾಟಾಳ್ ನಾಗರಾಜ್ ಮಾತನಾಡಿ, 'ಚಾಮರಾಜನಗರ ಜಿಲ್ಲೆ ಮಾಡಿದ್ದು ನಾನು- ರಾಹುಲ್ ಗಾಂಧಿ ಅಲ್ಲ, ರಸ್ತೆ ಮಾಡಿದ್ದು ನಾನು, ಕುಡಿಯುವ ನೀರು ಕೊಟ್ಟಿದ್ದು ನಾನು, ಬಿಜೆಪಿ-ಕಾಂಗ್ರೆಸ್ ನವರಲ್ಲ, ನೀರು ಕುಡಿಯುವ ಋಣಕ್ಕಾದರೂ ಜನರು ನನಗೊಂದು ಮತ ಕೊಡಬೇಕು, ನನ್ನನ್ನು ಸೋಲಿಸಿದರೇ ನನ್ನ ಹಾಗೂ ಚಾಮರಾಜನಗರ ಬಾಂಧವ್ಯ ಕೊನೆಯಾಗಲಿದೆ ಎಂದರು.

ಮತ ಎಂಬುದು ಖರೀದಿ ಮಾಡಲು ಹಣ್ಣು, ತರಕಾರಿ ಅಲ್ಲ, ಜನರು ತಮ್ಮ ಮತವನ್ನು ಹಣಕ್ಕೆ, ಜಾತಿಗೆ ಮಾರಿಕೊಳ್ಳಬಾರದು, ಚಾಮರಾಜನಗರದಲ್ಲಿ ಬಿಜೆಪಿ, ಕಾಂಗ್ರೆಸ್ ಸೋಲಬೇಕು, ವಾಟಾಳ್ ನಾಗರಾಜ್ ಗೆಲ್ಲಬೇಕು, ಕಳೆದ 15 ವರ್ಷಗಳಿಂದ ಆಯ್ಕೆಯಾಗುತ್ತಿರುವ ಕೈ ಶಾಸಕ ಶಾಸನ ಸಭೆಯಲ್ಲಿ ಏನು ಮಾತನಾಡಿದ್ದಾರೆಂದು ಕಿಡಿಕಾರಿದರು.












Click it and Unblock the Notifications