ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡೀರಿ: ಸ್ವಪಕ್ಷೀಯರ ವಿರುದ್ಧ ಸೋಮಣ್ಣ ಕಿಡಿ
ಚಾಮರಾಜನಗರ, ಮೇ 17: ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಚಾಮರಾಜನಗರಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಆಗಮಿಸಿ ಕಾರ್ಯಕರ್ತರ ಕೃತಜ್ಞತಾ ಸಭೆ ನಡೆಸಿದರು.
ಭಾಷಣದ ವೇಳೆ ತಮ್ಮ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ ಎಂದು ಆರೋಪಿಸಿದ ಸೋಮಣ್ಣ, ನನಗೆ ಮಾಡಿದ ಪಾಪದ ಕೆಲಸ ಬೇರೆ ಯಾರಿಗೂ ಮಾಡುವುದು ಬೇಡ, ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡೀರಿ ಎಂದು ಕಿಡಿಕಾರಿದರು.

ಕೆಲ ಲೋಫರ್ ನನ್ ಮಕ್ಕಳು ಈ ಪಾಪದ ಕೆಲಸ ಮಾಡಿದ್ದಾರೆ. 7-8 ಮಂದಿಯಿಂದ ಈ ಸೋಲುಂಟಾಯಿತು, ನನ್ನ ಸಮಾಜದವರೇ ನನಗೆ ಕೈ ಕೊಟ್ಟರು. ಯಾರ್ಯಾರೋ ಬೋರ್ಡ್ ಅಧ್ಯಕ್ಷರು ಮಠಗಳಿಗೆ ದುಡ್ಡು ಕೊಟ್ಟು ಜನರ ದಿಕ್ಕು ತಪ್ಪಿಸಿದರು ಎಂದು ಬಿಜೆಪಿ ಮುಖಂಡರ ವಿರುದ್ಧ ಆರೋಪ ಮಾಡಿದರು.
ಈಗ ಅವರು ಒಳೇಟು ಕೊಟ್ಟರು, ಇವರು ಒಳೇಟು ಕೊಟ್ಟರು, ಕ್ರಮ ಕೈಗೊಳ್ಳಿ ಎನ್ನುತ್ತಿದ್ದೀರಿ, ಈ ಕೆಲಸವನ್ನು 6 ತಿಂಗಳ ಹಿಂದೆ ಮಾಡಬೇಕಿತ್ತು, ಆಗ ಮಾಡಲಿಲ್ಲ- ಈಗ ಮಾಡಿ ಎನ್ನುತ್ತಿದ್ದೀರಿ, ನಾನು ನಿಮ್ಮನ್ನು ನಂಬಿಕೊಂಡಿದ್ದೆ ತಪ್ಪಾಯಿತು. ಮಾದೇಶ್ವರನ ಅಣೆ, ನನ್ನ ಮಕ್ಕಳಾಣೆ ನಾನಾಗಿ ಇಲ್ಲಿಗೆ ಬರಲಿಲ್ಲ. ಹೈಕಮಾಂಡ್ ಹೇಳಿದ್ದರಿಂದ ಚಿನ್ನ ದಂತಹ ಗೋವಿಂದರಾಜ ನಗರ ಕ್ಷೇತ್ರ ಬಿಟ್ಟು ಇಲ್ಲಿಗೆ ಬಂದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಮಾತು ಮುಂದುವರಿಸಿದ ಅವರು, ಪಕ್ಷ ತಾಯಿಗೆ ಸಮಾನ ಪಕ್ಷ ದೊಳಗಿದ್ದು ದ್ರೋಹ ಬಗೆಯುವುದು ಎಷ್ಟರಮಟ್ಟಿಗೆ ಸರಿ ? ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್ ಅವರಿಗೆ ನೈತಿಕತೆ ಇದ್ದರೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಒದ್ದು ಓಡಿಸಿ ಎಂದು ಆಗ್ರಹಿಸಿದರು.
ಕೆಲವರು ಮನಸ್ಸು ಬಿಚ್ಚಿ ಮುಕ್ತ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ದೊಡ್ಡ ಸ್ಥಾನಕ್ಕೆ ಸೋಮಣ್ಣ ಹೋಗುತ್ತಾರೆ ಎಂದಿದ್ದೆ ಮುಳುವಾಯಿತು ಎಂದು ಪಕ್ಷದ ಕೆಲ ಮುಖಂಡರ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರಕ್ಕಿಂತಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ-ವಿ.ಸೋಮಣ್ಣ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿ.ಸೋಮಣ್ಣ ಚಾಮರಾಜನಗರ ಹಾಗೂ ವರಣಾ ಎರಡೂ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ನಾನು ಎಲ್ಲವನ್ನೂ ಅನುಭವಿಸಿದ್ದೇನೆ, ಇದು ಆಗ ಬಾರದಿತ್ತು, ಆಗಿದೆ. ಸೋಲನ್ನು ಸ್ವೀಕಾರ ಮಾಡಬೇಕು. ಅದನ್ನು ಸ್ವೀಕಾರ ಮಾಡದಿದ್ದರೆ ನನ್ನಂತ ಹುಚ್ಚ ಮತ್ತೊಬ್ಬರಿಲ್ಲ. ಆದರೆ ಒಂದು ವಿಚಾರವೆಂದರೆ ನನನ್ನು ನಿರುದ್ಯೋಗಿ ಮಾಡಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆ ಯಿಂದ ಕೆಲಸ ಆರಂಭಿಸುತ್ತಿದ್ದವನು ನಾನು ಎಂದು ಬೇಸರ ವ್ಯಕ್ತಪಡಿಸಿದ್ದರು.
ಪ್ರತಿಯೊಂದಕ್ಕೂ ಕಾಲ ಅಂತ ಇರುತ್ತದೆ. ನನ್ನ ಕ್ಷೇತ್ರ ಚಿನ್ನದಂತೆ ಇತ್ತು. ಹೈಕಮಾಂಡ್ ಹೇಳಿತೆಂದು ಹೋದೆ. ಇದೀಗ ಜನ ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು, ಪಕ್ಷದ ಮಾತು ಕೇಳಿದೆ ಅಷ್ಟೇ ಎಂದಿದ್ದರು.












Click it and Unblock the Notifications