ಪ್ರಧಾನಿ ಮೋದಿ ಮೆಚ್ಚಿದ್ದ ಕೊಳ್ಳೇಗಾಲ ಕವಿಗೆ ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಆಹ್ವಾನ
ಚಾಮರಾಜನಗರ, ಜನವರಿ, 19: ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದ ಜೋಗುಳ ಪದ ರಚಿಸಿದ್ದ ಕೊಳ್ಳೇಗಾಲ ನಿವಾಸಿ, ಕವಿ ಮಂಜುನಾಥ್ ಅವರಿಗೆ ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಲವದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ.
ಮಂಜುನಾಥ್ ಅವರು ವೖತ್ತಿಯಲ್ಲಿ ಎಲ್‌ಐ ಸಿ ವಿಮಾ ಪಾಲಿಸಿದಾರರಾಗಿ ಪ್ರವೃತ್ತಿಯಲ್ಲಿ ಕವಿಯಾಗಿ ಗುರುತಿಸಿಕೊಂಡಿದ್ದರು. ಕೊರೊನಾ ವೇಳೆ "ಮಲಗು ಕಂದ ಮಲಗು ಕೂಸೆ, ಮಲಗು ನನ್ನ ಜಾಣ ಮರಿಯೇ.. ಎಂಬ ಜೋಗುಳ ಪದ ರಚಿಸಿದ್ದರು. ಕೇಂದ್ರ ಸರ್ಕಾರದ 75ನೇ ಸ್ವಾತಂತ್ಯೋತ್ಸವದ ಹಿನ್ನೆಲೆ ಆನ್‌ಲೈನ್ ರಂಗೋಲಿ, ದೇಶಭಕ್ತಿ ಗೀತೆ, ಲಾಲಿಹಾಡು ಸ್ಪರ್ಧೆಗಳನ್ನು ಯೋಜಿಸಲಾಗಿತ್ತು. ಇದನ್ನು ಮನಗಂಡ ಮಂಜುನಾಥ್ ಅವರು ತಮ್ಮ ಪುತ್ರನ ಒತ್ತಾಸೆಗೆ ಮಣಿದು ಜೋಗುಳದ ಹಾಡು ರಚಿಸಿ ಕಳುಹಿಸಿದ್ದರು.

550ಕ್ಕೂ ಅಧಿಕ ಜಿಲ್ಲೆಗಳಿಂದ ಯುವ ಕವಿಗಳು, ಬರಹಗಾರರು ತಮ್ಮ ಕವನ ಕಳುಹಿಸುವ ಮೂಲಕಸ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.ಆದರೆ, ಮಂಜುನಾಥ್ ಜೋಗುಳದ ಹಾಡು ಮಾತ್ರ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿತ್ತು.
6 ಲಕ್ಷ ರೂಪಾಯಿ ನಗದು ಬಹುಮಾನದ ಮನ್ನಣೆಯೂ ದೊರೆತಿತ್ತು. ಇದನ್ನು ಕುರಿತು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಕನ್ನಡದ ಕವಿ ಬರೆದಿರುವ ಲೋರಿ ಹಾಡು(ಲಾಲಿ ಹಾಡು) ನನ್ನ ಗಮನ ಸೆಳೆದಿದೆ. ನಾನು ಸಹ ಈಹಾಡು ಕೇಳಿದ್ದೆನೆ, ನೀವು ಕೇಳಿ ಎಂದು ಪ್ರಸ್ತಾಪಿಸಿದ್ದ ವೇಳೆ ಈ ರಚನೆಗೆ ಮನ್ ಕಿ ಬಾತ್‌ನಲ್ಲಿ ಯುವ ಹಾಡುಗಾರರು ಧ್ವನಿ ನೀಡಿದ್ದು, ಆಗ ಈ ಹಾಡು ಮತ್ತಷ್ಟು ಪ್ರಖ್ಯಾತಗೊಂಡಿತ್ತು.
ಇನ್ನು ಇದೇ ಜನವರಿ 26ರಂದು ನವದೆಹಲಿಯಲ್ಲಿ ವಿಜೃಂಭಣೆಯಿಂದ ಜರುಗುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇಂದ್ರ ಸರ್ಕಾರ ಆಹ್ವಾನ ನೀಡಿದ್ದು, ಜನವರಿ 24ರಂದು ವಿಮಾನದಲ್ಲಿ ದಂಪತಿ ಸಮೇತ ಆಗಮಿಸುವಂತೆ ಟಿಕೆಟ್ ನ್ನು ಕೇಂದ್ರಸರ್ಕಾರವೇ ಬುಕ್ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
75ನೇ ಸ್ವಾತಂತ್ಯೋತ್ಸವದ ಹಿನ್ನೆಲೆ ನಾನು ಕೇಂದ್ರ ಸರ್ಕಾರ ಅಯೋಜಿಸಿದ್ದ ಲೋರಿ ಹಾಡು(ಲಾಲಿ ಹಾಡು) ಸ್ಪರ್ಧೆಯಲ್ಲಿ ನನ್ನ ಪುತ್ರನ ಒತ್ತಾಸೆಗೆ ಮಣಿದು ಕವನ ರಚಿಸಿದ್ದೆ. ನನ್ನ ಪುತ್ರನೇ ಅದನ್ನು ಆನ್‌ಲೈನ್ ಮೂಲಕ ಕಳುಹಿಸಿದ್ದ. ನನ್ನ ರಚನೆಯ ಲಾಲಿ ಹಾಡಿಗೆ 6ಲಕ್ಷ ಕೇಂದ್ರದಿಂದ ನಗದು ಬಹುಮಾನ ಬಂದಿರುವುದು ಕೇಳಿ ಅಚ್ಚರಿ ಜೊತೆ ಸಂತಸವೂ ಆಗಿತ್ತು.
ಅದಾದ ಕೆಲವು ದಿನಗಳ ಬಳಿಕ ಪ್ರಧಾನಿಗಳೇ ಮನ್ ಕಿ ಬಾತ್‌ನಲ್ಲಿ ನಮ್ಮ ಚಾಮರಾಜನಗರ ಜಿಲ್ಲೆಯ ಕವಿ ಮಂಜುನಾಥ್ ಅವರ ಲಾಲಿ ಹಾಡು ಚೆನ್ನಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದು, ಇದನ್ನು ಕೇಳಿ ಪುಳಕಿತಗೊಂಡಿದ್ದೆ. ಈಗ ಕೇಂದ್ರ ಸರ್ಕಾರವು ನನಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದೆ. ಈ ಹಿನ್ನೆಲೆ ಪತ್ನಿ ಸಮೇತ ಜನವರಿ 24ರ ಬೆಳಗ್ಗೆ ತೆರಳಿ, ಜನವರಿ 29ರಂದು ವಾಪಸ್ಸಾಗುತ್ತೆನೆ.
ಕೇಂದ್ರ ಸರ್ಕಾರವೇ ನನಗೆ ಆಹ್ವಾನ ನೀಡಿ ವಿಮಾನದ ಟಿಕೆಟ್ ಕಾಯ್ದಿರಿಸಿದ್ದು, ಈ ಪ್ರೀತಿ ಪೂರ್ವಕ ಕರೆ ನನಗೆ ಸಂತಸವನ್ನು ಉಂಟುಮಾಡಿದೆ ಎಂದು ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications