ಅಪರೂಪಕ್ಕೆ ಗೋಪಾಲಸ್ವಾಮಿ ದೇಗುಲದ ಬಳಿ ಬಂದ "ಗಜರಾಜ"ನೊಟ್ಟಿಗೆ ಸೆಲ್ಫಿಗಾಗಿ ಮುಗಿಬಿದ್ದ ಪ್ರವಾಸಿಗರ ದಂಡು
ಚಾಮರಾಜನಗರ, ಜನವರಿ, 04: ಕರ್ನಾಟಕದ ಕಾಶ್ಮೀರ ಅಂತಲೇ ಕರೆಯುವ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ಇಂದು (ಜನವರಿ 04) ಕಾಡಾನೆ ಜೊತೆ ಪ್ರವಾಸಿಗರು ಸೆಲ್ಫಿಗೆ ಮುಗಿಬಿದ್ದ ಘಟನೆ ನಡೆದಿದೆ.
ಗೋಪಾಲಸ್ವಾಮಿ ಬೆಟ್ಟದ ದೇಗುಲ ಸಮೀಪ ಆಗಾಗ್ಗೆ ಕಾಡಾನೆಯೊಂದು ಎಂಟ್ರಿ ಕೊಡಲಿದ್ದು, ಇಂದು (ಜನವರಿ 04) ಅದೇ ರೀತಿ ಕಾಡಾನೆ ಎಂಟ್ರಿ ಕೊಟ್ಟಿದೆ. ಕಾಡಾನೆ ಕಂಡೊಡನೆ ರೋಮಾಂಚಿತರಾದ ಪ್ರವಾಸಿಗರು ಹುಚ್ಚಾಟ ಮೆರೆದಿದ್ದು, ಆನೆ ಸಮೀಪಕ್ಕೆ ತೆರಳಿ ಫೋಟೋ, ವೀಡಿಯೋ ಮಾಡಿದ್ದಾರೆ.

ಕೆಲವು ವರ್ಷಗಳಿಂದ ಕಾಡಾನೆಯೊಂದು ದೇವಾಲಯದ ಸಮೀಪ ಆಗಾಗ್ಗೆ ಕಾಣಿಸಿಕೊಳ್ಳಲಿದ್ದು, ಅದೃಷ್ಟವಶಾತ್ ಇಲ್ಲಿಯ ತನಕ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇನ್ನು ಬೆಂಗಳೂರಿನಿಂದ ಆಗಮಿಸಿದ್ದ ಮಹಾದೇವಸ್ವಾಮಿ ಎಂಬವರು ಈ ಬಗ್ಗೆ ಮಾತನಾಡಿ, ಎಷ್ಟೇ ಆದರೂ ಅದು ಕಾಡುಪ್ರಾಣಿ. ಕೆಲವರು ತೀರ ಸಮೀಪವೇ ಹೋಗಿ ಫೋಟೋ ಕ್ಲಿಕ್ಕಿಸಿಕೊಂಡರು. ಏನೇ ಆದರೂ ಸುರಕ್ಷತೆ ಮುಖ್ಯ, ಅವು ಸುರಕ್ಷಿತವಾಗಿರಬೇಕು, ನಾವು ಸುರಕ್ಷಿತವಾಗಿರಬೇಕು ಎಂದು ಹೇಳಿದರು.
ಕಾವೇರಿಯಲ್ಲಿ ಮಿಂದೆದ್ದ ಗಜಗ್ಯಾಂಗ್
ಹಾಗೆಯೇ ಭೋರ್ಗರೆದು ಹರಿಯುವ ಕಾವೇರಿ ನದಿಯನ್ನು ಬರೋಬ್ಬರಿ 19ಕ್ಕೂ ಅಧಿಕ ಆನೆಗಳು ದಾಟಿರುವ ವೀಡಿಯೋಯೊಂದನ್ನು ಯುವಕ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹನೂರು ತಾಲೂಕಿನ ಗಡಿಯಲ್ಲಿರುವ ಹೊಗೆನಕಲ್ ಜಲಪಾತದಲ್ಲಿ ಈ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
3 ಮರಿಗಳು ಸೇರಿದಂತೆ 19ಕ್ಕೂ ಹೆಚ್ಚು ಆನೆಗಳು ಕಾವೇರಿ ದಂಡೆಯನ್ನು ದಾಟಿ ಅಲ್ಲೇ ಓಡಾಡಿ ದಣಿವು ತಣಿಸಿಕೊಳ್ಳುತ್ತಾ ಮೇಯುತ್ತಾ ರಿಲಾಕ್ಸ್‌ನಲ್ಲಿರುವ ವೀಡಿಯೋವನ್ನು ಗೋಪಿನಾಥಂ ಎಂಬ ಯುವಕ ಸೆರೆ ಹಿಡಿದಿದ್ದಾನೆ.
ಅರಣ್ಯ ಪ್ರದೇಶದ ಭಾಗದಲ್ಲಿ ನೀರಿನ ಕೊರತೆ ಇರುವುದರಿಂದ ಒಂದು ನದಿ ಭಾಗದಲ್ಲಿ ಬಂದು ಬೀಡು ಬಿಡಲಿದ್ದು, ಸದ್ಯ 19ಕ್ಕೂ ಅಧಿಕ ಆನೆಗಳ ಗುಂಪು ಕಾವೇರಿ ದಂಡೆಯಲ್ಲಿ ವಿಹರಿಸುತ್ತಿವೆ.
ನಾಡಿನತ್ತ ಬಂದ ಕಾಡಾನೆ
ಇನ್ನು ಇತ್ತೀಚೆಗಷ್ಟೇ ನೀರಿನ ಅಭಾವ ಕೇವಲ ನಾಡಲ್ಲಿ ಮಾತ್ರವಲ್ಲದೇ ಕಾಡಲ್ಲೂ ಕಾಣಿಸಿಕೊಂಡಿದೆ ಎಂಬುದಕ್ಕೆ ರಸ್ತೆಬದಿ ನಿಂತಿದ್ದ ನೀರು ಕುಡಿದ ಈ ಆನೆಯೇ ಸಾಕ್ಷಿ. ಹನೂರು ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆ ಜಮೀನಿನಲ್ಲಿ ಹಾಕಿರುವ ಫೈರುಗಳು ಒಣಗಿರುವುದು ಒಂದೆಡೆಯಾದರೆ, ಅರಣ್ಯದಲ್ಲಿ ಕೆರೆಕಟ್ಟೆಗಳು ಖಾಲಿಯಾಗಿರುವುದರಿಂದ ವನ್ಯ ಪ್ರಾಣಿಗಳು ನಾಡಿನತ್ತ ಬರಲು ಪ್ರಾರಂಭಿಸಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್ ಕಡೆಗೆ ತೆರಳುವ ರಸ್ತೆಯಲ್ಲಿ ಕಾಡಿನಿಂದ ಹೊರಬಂದ ಆನೆಯೊಂದು ರಸ್ತೆಬದಿ ನಿಂತಿದ್ದ ಹಳ್ಳದ ನೀರನ್ನು ಕುಡಿದು ದಣಿವಾರಿಸಿಕೊಂಡಿತ್ತು. ಇನ್ನು ಆನೆ ನೀರು ಕುಡಿಯುವುದನ್ನು ವಾಹನ ಸವಾರರೋರ್ವ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿತ್ತು.












Click it and Unblock the Notifications