ಬಂಡೀಪುರ ಮೀಸಲು ಪ್ರದೇಶದಲ್ಲಿ ಹುಲಿ ಮೃತದೇಹ: ಅಸಹಜ ಸಾವು ಎಂದ ಅಧಿಕಾರಿಗಳು
ನೀರಿನ ಮೇಲೆ ತೇಲುತ್ತಿರುವ ಮೃತದೇಹವನ್ನು ಕಂಡು ನೀರು ಕುಡಿಯಲು ಬಂದಿದ್ದ ಹುಲಿ, ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಆರಂಭದಲ್ಲಿ ಶಂಕಿಸಲಾಗಿತ್ತು.
ಚಾಮರಾಜನಗರ, ಫೆಬ್ರವರಿ. 10: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕೆಬ್ಬೆಪುರ ಗ್ರಾಮದ ಮಲ್ಲಯ್ಯನ ಕಟ್ಟೆ ಕೆರೆಯಲ್ಲಿ ಹುಲಿಯ ಮೃತದೇಹ ಪತ್ತೆಯಾಗಿದು, ಇದು ಅಸಹಜ ಸಾವು ಬಂಡೀಪುರ ಅರಣ್ಯಾಧಿಕಾರಿಗಳು ಗುರುವಾರ ಖಚಿತಪಡಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯದಲ್ಲಿ ಮಂಗಳವಾರ ಹುಲಿಯ ಕಳೇಬರ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು, ಕೆರೆಯ ನೀರಿನ ಮೇಲೆ ತೇಲುತ್ತಿರುವ ಮೃತದೇಹವನ್ನು ಕಂಡು ನೀರು ಕುಡಿಯಲು ಬಂದಿದ್ದ ಹುಲಿ, ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ಆರಂಭದಲ್ಲಿ ಶಂಕಿಸಿದ್ದರು. ಆದರೆ, ಬುಧವಾರ ಮೃತದೇಹವನ್ನು ತೆಗೆಯುವಾಗ ಹುಲಿಯ ಕಾಲು ಮತ್ತು ಕುತ್ತಿಗೆಗೆ ಕಬ್ಬಿಣದ ಹಗ್ಗದಿಂದ ಕಲ್ಲು ಕಟ್ಟಿರುವುದು ಕಂಡುಬಂದಿದೆ.

ಹೀಗಾಗಿ ಕೆಬ್ಬೇಪುರದ ಕೆರೆಯಲ್ಲಿ ಸಿಕ್ಕ ಹುಲಿ ಕಳೇಬರ ಸುತ್ತ ಅನುಮಾನದ ಹುತ್ತ ಬೆಳೆದಿದೆ.
ಅರಣ್ಯಾಧಿಕಾರಿಗಳ ಪ್ರಕಾರ, ಹುಲಿಯನ್ನು ಸುಮಾರು ನಾಲ್ಕು ದಿನಗಳ ಹಿಂದೆ ಬೇರೊಂದು ಸ್ಥಳದಲ್ಲಿ ಕೊಲೆ ಮಾಡಿ ,ಇಲ್ಲಿನ ಕೆರೆಗೆ ತಂದು ಎಸೆಯಲಾಗಿದೆ. ಮೂರು ದಿನಗಳ ನಂತರ ಮೃತದೇಹ ನೀರಿನ ಮೇಲೆ ತೇಲಿದೆ ಎಂದಿದ್ದಾರೆ.
''ಹುಲಿ ಸುಮಾರು ಐದು ವರ್ಷ ವಯಸ್ಸಿನದಾಗಿದ್ದು, ನಾಲ್ಕು ದಿನಗಳ ಹಿಂದೆ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ದೇಹ ಕೊಳೆತಿರುವುದರಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ" ಎಂದು ಪಶು ವೈದ್ಯ ವಾಸಿಂ ಮಿರ್ಜಾ ತಿಳಿಸಿದ್ದಾರೆ.
ಅಂಗಾಂಗಗಳನ್ನು ಮೈಸೂರು ಮತ್ತು ಬೆಂಗಳೂರು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅವರು ಹೇಳಿದರು.
''ಯಾವುದೇ ಸುಳಿವು ಸಿಗದ ಕಾರಣ ಹುಲಿ ಉರುಳಿನಿಂದ ಸತ್ತಿದೆ ಎಂದು ಪಶುವೈದ್ಯರು ತಳ್ಳಿಹಾಕಿದ್ದಾರೆ. ಹುಲಿಯ ವಯಸ್ಸು ಐದು ವರ್ಷವಾಗಿದ್ದು, ಈ ವಯಸ್ಸಿನಲ್ಲಿ ಸಹಜ ಸಾವು ಅಸಾಧ್ಯ' ಎಂದು ತನಿಖಾಧಿಕಾರಿ ಹಾಗೂ ಬಂಡೀಪುರ ಎಸಿಎಫ್ ಜಿ.ರವೀಂದ್ರ ತಿಳಿಸಿದರು.
ಆರೋಪಿಗಳ ಪತ್ತೆಗಾಗಿ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ವಿಶೇಷ ತಂಡ ರಚಿಸಿ ತನಿಖೆಗೆ ಆದೇಶಿಸಿದೆ.
ಎಸಿಎಫ್ ರವೀಂದ್ರ ಮಾತನಾಡಿ, "ಕೆಬ್ಬೇಪುರ ಸುತ್ತಮುತ್ತ ಹುಲಿಗಳ ಹಾವಳಿಯ ಬಗ್ಗೆ ರೈತರು ದೂರು ನೀಡಿದ್ದು, ಹುಲಿ ಪತ್ತೆಗೆ ಸಿಸಿಟಿವಿ ಟ್ರ್ಯಾಪ್ ಕ್ಯಾಮೆರಾ ಅಳವಡಿಸಿದ್ದೇವೆ. ಹುಲಿಗೆ ವಿಷಕಾರಿ ಕೋಳಿಯನ್ನು ತಿನ್ನಿಸಲಾಗಿದೆಯೇ ಎಂಬ ಬಗ್ಗೆ ಅನುಮಾನ ಬಂದಿದ್ದು, ನಾವು ಆ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳು ಖಾಸಗಿ ಜಮೀನಿನಲ್ಲಿ ಹುಲಿಯನ್ನು ಕೊಂದು ಶವವನ್ನು ಕೆರೆಗೆ ಎಸೆದಿರಬಹುದು" ಎಂದು ಶಂಕಿಸಿದ್ದಾರೆ.












Click it and Unblock the Notifications