ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಾಡೆಮ್ಮೆ ಕಿತ್ತು ತಿಂದ ವ್ಯಾಘ್ರ: ಬೆಚ್ಚಿಬಿದ್ದ ಭಕ್ತರು
ಚಾಮರಾಜನಗರ, ಜುಲೈ 27: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹುಲಿ ಘರ್ಜನೆ ಜೋರಾಗಿದೆ. ಬೆಟ್ಟದ ಹುಲಿ ಕಾಡೆಮ್ಮೆಯ ಮಾಂಸವನ್ನು ಕಿತ್ತು ತಿಂದ ದೃಶ್ಯ ಕಂಡ ಭಕ್ತರು ಬೆಚ್ಚಿಬಿದ್ದಿದ್ದು, ಇನ್ನು ಕೆಲ ಪ್ರವಾಸಿಗರು ಈ ದೃಶ್ಯ ಕಂಡು ರೋಮಾಂಚಿತರಾಗಿದ್ದಾರೆ.
ಗೋಪಾಲಸ್ವಾಮಿ ಬೆಟ್ಟದಿಂದ ಹಿಂತಿರುಗುವಾಗ ಗುಡ್ಡವೊಂದರಲ್ಲಿ ಕಾಡೆಮ್ಮೆಯ ತಲೆ ಭಾಗವನ್ನು ಕಿತ್ತು ಹುಲಿ ಎಳೆದೊಯ್ದ ದೃಶ್ಯ ಸೆರೆಯಾಗಿದೆ. ಬಸ್ಸಿನಲ್ಲಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವಾಗ ಈ ಹುಲಿ ಆಗಾಗ ಭಕ್ತರಿಗೆ ಕಾಣಿಸಿಕೊಳ್ಳುತ್ತಿದ್ದು, ಬೆಟ್ಟದ ಹುಲಿ ಎಂದೇ ಫೇಮಸ್ ಆಗಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಸದಾ ಹಿಮದಿಂದ ಆವೃತವಾಗಿರಲಿದ್ದು, ಕರ್ನಾಟಕದ ಕಾಶ್ಮೀರದಂತೆ ಭಾಸವಾಗಲಿದೆ. ಪ್ರಕೃತಿ ಸೌಂದರ್ಯದ ಜೊತೆಗೆ ಹುಲಿ ದರ್ಶನವೂ ಆಗಿರುವುದು ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಡಬಲ್ ಧಮಾಕಾ ಸಿಕ್ಕಂತಾಗಿದೆ.
ಬಂಡೀಪುರ: ಸುರಿಯುವ ಮಳೆ ನೀರು ಕುಡಿದು ದಣಿವಾರಿಸಿಕೊಂಡ ವ್ಯಾಘ್ರ
ಚಾಮರಾಜನಗರ: ಚಾಮರಾಜನಗರ ಜಿಲ್ಲಾಯಲ್ಲಿ ಕಳೆದ ಕೆಲ ದಿನಗಳಿಂದ ತುಂತುರು ಮಳೆಯಾಗುತ್ತಿದ್ದು, ಬಂಡೀಪುರ ಅರಣ್ಯ ಪ್ರದೇಶದಲ್ಲೂ ಬಿರುಸಿನ ಮಳೆಯಾಗಿದೆ. ಧೋ ಎಂದು ಸುರಿಯುವ ಮಳೆ ನೀರನ್ನು ಕುಡಿದು ಹುಲಿಯೊಂದು ದಣಿವಾರಿಸಿಕೊಂಡ ದೃಶ್ಯ ಬಂಡೀಪುರ ಸಫಾರಿಗೆ ತೆರಳಿದ್ದ ವೇಳೆ ಸೆರೆಯಾಗಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಡೀಪುರ ಸಫಾರಿಗೆ ತೆರಳಿದ್ದವರು ರಸ್ತೆ ಸಮೀಪದಲ್ಲೇ ಹುಲಿಯನ್ನು ಕಂಡು ರೋಮಾಂಚಿತಗೊಂಡಿದ್ದಾರೆ. ವೈರಲ್ ಆಗುತ್ತಿರುವ ಹುಲಿಯ ವಿಡಿಯೋ ಬಂಡೀಪುರ ಸಫಾರಿಯಲ್ಲಿ ತೆಗೆದಿರುವುದಾಗಿ ಸಿಎಫ್ಒ ರಮೇಶ್ ಕುಮಾರ್ ದೃಢಪಡಿಸಿದ್ದಾರೆ.

ಚಾಮರಾಜನಗರ: ಯಳಂದೂರಲ್ಲಿ ಬಾಲಕನ ಮೇಲೆ ಚಿರತೆ ದಾಳಿ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಮಲ್ಲಿಗೆಹಳ್ಳಿ ಗ್ರಾಮದ ಹರ್ಷಿತ್(09) ದಾಳಿಗೊಳಗಾದ ಬಾಲಕ. ಗ್ರಾಮದ ಪ್ರಾಥಮಿಕ ಶಾಲೆ ಮುಂಭಾಗದಿಂದ ಮನೆಗೆ ತೆರಳುವಾಗ ಅವಿತು ಕುಳಿತಿದ್ದ ಚಿರತೆ ಬಾಲಕನ ಮೇಲೆ ದಾಳಿ ಮಾಡಿದೆ.
ಬಾಲಕನನ್ನು ಚಿರತೆಯಿಂದ ತಪ್ಪಿಸಲು ಸ್ಥಳದಲ್ಲಿದ್ದ ಜನರು ಕಿರುಚಾಡಿದ್ದಾರೆ. ಜನರ ಕಿರುಚಾಟಕ್ಕೆ ಬೆದರಿದ ಚಿರತೆ ಬಾಲಕನ್ನು ಬಿಟ್ಟು ಗದ್ದೆಗಳತ್ತ ಓಡಿದೆ. ಘಟನೆಯಲ್ಲಿ ಹರ್ಷಿತ್‌ನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಗಾಯಗಳಾಗಿದ್ದು, ಯಳಂದೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.












Click it and Unblock the Notifications