ಚಾಮರಾಜನಗರ: ಬಂಗಾರದ ಅಂಗಡಿಗಳ ಸಿಸಿಟಿವಿ ತೆಗೆಸುವಂತೆ ಮಾಲೀಕರಿಗೆ ಬೆದರಿಕೆ ಪತ್ರ, ಭಾರೀ ವೈರಲ್
ಚಾಮರಾಜನಗರ, ಅಕ್ಟೋಬರ್, 03: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದೀಗ ತಮ್ಮ ಅಂಗಡಿಗಳಲ್ಲಿ ಅಳವಡಿಕೆ ಮಾಡಿರುವ ಸಿಸಿಟಿವಿ ಕ್ಯಾಮೆರಾವನ್ನು ತೆಗೆದು ಹಾಕುವಂತೆ ಚಿನ್ನದಂಗಡಿ ಹಾಗೂ ಬಟ್ಟೆ ಅಂಗಡಿ ಮಾಲೀಕರಿಗೆ ಅಪರಿಚಿತರು ಬೆದರಿಕೆ ಪತ್ರ ಅಂಟಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಎಂ.ಕೆ.ಸುಬ್ರಮಣ್ಯ, ಎಂ.ಕೆ.ಶ್ರೀನಿವಾಸ ಹಾಗೂ ವಾಸುಕಿ ಎಂಬುವವರಿಗೆ ಬೆದರಿಕೆ ಪತ್ರ ಬರೆದು ಅಂಚೆ ಮೂಲಕ ಕಳುಹಿಸಲಾಗಿದೆ.

ನಿಮ್ಮ ಅಂಗಡಿಗಳ ಮುಂದೆ ಇರುವ ಸಿಸಿ ಕ್ಯಾಮೆರಾ ತೆಗೆಸಿ, ಇಲ್ಲದಿದ್ದರೇ ತಕ್ಕ ಪಾಠ ಕಲಿಸುತ್ತೇವೆ ಎಂದು ಡೇಂಜರ್ ಸಿಂಬಲ್ ಬರೆದು ಕಳುಹಿಸಿದ್ದಾರೆ. ಮೂರು ಅಂಗಡಿ ಮಾಲೀಕರ ಹೆಸರು ಬರೆದು ಬೆದರಿಕೆ ಹಾಕಿರುವ ಆಸಾಮಿಗಳ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ಕೊಡಲಾಗಿದೆ. ಇದರ ಬೆನ್ನಲೆ ನಿನ್ನೆ (ಅಕ್ಟೋಬರ್ 02) ರಾತ್ರಿ ಮೂರು ಅಂಗಡಿಗಳಲ್ಲಿ ಕಳ್ಳತನ ಆಗಿದ್ದು, ವ್ಯಾಪಾರಿಗಳನ್ನು ಬೆಚ್ಚಿ ಬೀಳಿಸಿದೆ.
ಸರಣಿ ಕಳ್ಳತನ: ಚಾಮರಾಜನಗರದ ಹೃದಯಭಾಗದಲ್ಲೇ, ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತ ಆಸುಪಾಸಲ್ಲೇ ಸರಣಿ ಕಳ್ಳತನ ತಡರಾತ್ರಿ ನಡೆದಿದ್ದು ವ್ಯಾಪರಸ್ಥರು, ಉದ್ಯಮಿಗಳು ಇದರಿಂದ ದಿಗಿಲುಗೊಂಡಿದ್ದಾರೆ.
ಸ್ವಾಗತ್ ಟ್ರೇಡರ್ಸ್, ಪ್ರಭು ಎಲೆಕ್ಟ್ರಿಕಲ್, ವಿನಯ್ ಆಟೋಮೊಬೈಲ್‌ಗಳಲ್ಲಿ ಕಳ್ಳತನ ನಡೆದಿದ್ದು, ಸಿಸಿಟಿವಿಗಳನ್ನು ಜಖಂ ಮಾಡಿ, ಏಣಿಗಳನ್ನು ಬಳಸಿ ಕಳ್ಳರು ಕೃತ್ಯ ಎಸಗಿದ್ದಾರೆ. ಅಂಗಡಿಗಳ ಗ್ಲಾಸ್ ಕೂಡ ಒಡೆದು ಹಾಕಿರುವ ಖದೀಮರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು, ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಹನೂರು ತಾಲ್ಲೂಕಿನಲ್ಲಿ ಹಾಡಹಗಲೇ ವೃದ್ಧನ ಕೈ-ಕಾಲು ಕಟ್ಟಿ ಹಣ ದೋಚಿದ್ದರು. ಇದಕ್ಕೂ ಮುನ್ನ, ಹನೂರಲ್ಲೇ ಮದುವೆಗೆ ಕೂಡಿಟ್ಟಿದ್ದ ಹಣವನ್ನು ದೋಚಿದ್ದರು.
ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ಅಂಗಡಿಗಳ ಸರಣಿ ಕಳ್ಳತನ ನಡೆಸಿದ್ದರು. ಈಗ ಚಾಮರಾಜನಗರದ ಹೃದಯಭಾಗದಲ್ಲೇ ಕಳ್ಳರು ಕೃತ್ಯ ಎಸಗಿದ್ದು ವ್ಯಾಪಾರಿಗಳು ಪತರಗುಟ್ಟಿದ್ದಾರೆ. ನಗರದ ಸರಣಿ ಕಳ್ಳತನ ಸ್ಥಳಗಳಿಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಚಿನ್ನ ಎಗರಿಸಿದ ಖದೀಮರು: ವೃದ್ಧನ ಕೈ-ಕಾಲು ಕಟ್ಟಿ ಮನೆಯಲ್ಲಿ ಚಿನ್ನ, ಹಣವನ್ನು ಹಾಡಹಗಲೇ ದೋಚಿರುವ ಘಟನೆ ಚಾಮರಾಜನಗರ ಜಿಲ್ಲೆ, ಹನೂರು ತಾಲೂಕಿನ ಹೊಸದೊಡ್ಡಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಹಾಗಾದರೆ ಕಳುವಾದ ಚಿನ್ನ ಹಾಗೂ ಹಣ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜಗದೀಶ(70) ಎಂಬುವರ ಮನೆಯಲ್ಲಿ ಕಳವಾಗಿದ್ದು, ಇವರ ಪತ್ನಿ ರುಕ್ಮಿಣಿ ಹೊರಗಡೆ ಹೋಗಿದ್ದು. ಆಗ ಅಪರಿಚಿತರು ಬಂದು ಜಗದೀಶ್ ಅವರ ಕೈ, ಕಾಲ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ 168 ಗ್ರಾಂ ಚಿನ್ನ ಹಾಗೂ 41,000 ರೂಪಾಯಿ ಹಣವನ್ನು ಕಳವು ಮಾಡಿದ್ದಾರೆ.
ಸದ್ಯ ರಾಮಾಪುರ ಠಾಣಾ ವ್ಯಾಪ್ತಿಯಲ್ಲಿ ಈ ಕಳವು ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications