ನ. 1ರಂದು ಗುಂಡ್ಲುಪೇಟೆ ಬಸ್ ಕಂಡಕ್ಟರ್ ಎಳೆಯಲಿದ್ದಾರೆ ಕನ್ನಡದ ತೇರು

By: ಬಿಎಂ ಲವಕುಮಾರ್
Subscribe to Oneindia Kannada

ಚಾಮರಾಜನಗರ, ಅಕ್ಟೋಬರ್ 31: ಕಳೆದ ಹದಿನೈದು ವರ್ಷಗಳಿಂದ ನವೆಂಬರ್ ತಿಂಗಳಲ್ಲಿ ತಾನು ಕಾರ್ಯ ನಿರ್ವಹಿಸುವ ಬಸ್ಸನ್ನೇ ಕನ್ನಡದ ತೇರನ್ನಾಗಿ ಮಾಡಿ ಕನ್ನಡಪ್ರೇಮ ಮೆರೆಯುತ್ತಾರೆ ಈ ಕಂಡಕ್ಟರ್. ಇವರ ಹೆಸರು ನಟರಾಜ್. ಗುಂಡ್ಲುಪೇಟೆ ಸಾರಿಗೆ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಟರಾಜ್ ಕನ್ನಡ ರಾಜ್ಯೋತ್ಸವಕ್ಕೆ ಬಸ್ಸನ್ನೇ ಕನ್ನಡದ ತೇರನ್ನಾಗಿ ಸಜ್ಜುಗೊಳಿಸಿದ್ದಾರೆ.

ಈಗಾಗಲೇ ಬಸ್ಸನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡದ ತೇರನ್ನಾಗಿ ಮಾಡಿರುವ ಅವರು 'ಕೈ ಮುಗಿದು ಏರು ಇದು ಕನ್ನಡದ ತೇರು' ಎಂದು ಕನ್ನಡಾಭಿಮಾನಿಗಳಿಗೆ ಮನವಿ ಮಾಡುತ್ತಿದ್ದಾರೆ.

ಬಸ್ಸಿನಲ್ಲಿ ಕನ್ನಡದ ಹಾಡು, ಕನ್ನಡ ಪುಸ್ತಕ ಓದು, ರಸಪ್ರಶ್ನೆ ಸ್ಪರ್ಧೆಗಳೊಂದಿಗೆ ಬಸ್ಸಿನ ತುಂಬಾ ಕನ್ನಡದ ಸಾಹಿತಿ, ಕವಿಗಳ ಚಿತ್ರ ಬರೆದು ಅವರ ಬಗ್ಗೆ ಮಾಹಿತಿಗಳು, ಜ್ಞಾನಪೀಠ ಪುರಸ್ಕೃತರ ಹೆಸರು ಹೀಗೆ ಕನ್ನಡದ ಸಾಧಕರನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಬಸ್ಸು ತುಂಬಾ ಕನ್ನಡವೋ ಕನ್ನಡ

ಬಸ್ಸು ತುಂಬಾ ಕನ್ನಡವೋ ಕನ್ನಡ

ಬಸ್ಸಿನ ಮುಂಭಾಗದಲ್ಲಿ ಕರ್ನಾಟಕ ಸಾರಿಗೆಯಲ್ಲಿ ಕನ್ನಡ ಅಕ್ಷರಗಳ ಸಂಚಾರ, ಹಿಂಭಾಗದಲ್ಲಿ ಸರ್ವಧರ್ಮಗಳ ಸಾರಿಗೆ ರಥ ಎಂದು ಬರೆದಿದ್ದಾರೆ. ಬಸ್‍ನ ಹೊರಭಾಗದೆಲ್ಲೆಡೆ ಕನ್ನಡದ ಬಾವುಟ, ಒಳಭಾಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ, ಮಹಾನ್ ಕವಿಗಳು, ಚಿತ್ರನಟರು, ಸಾಹಿತ್ಯದ ಪುಸ್ತಕಗಳು, ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಭಾವಚಿತ್ರವನ್ನು ಬಸ್‍ನ ಕಿಟಕಿಗಾಜುಗಳ ಮೇಲೆ ಅಂಟಿಸಿ ಸುಂದರವಾಗಿ ಕಾಣುವಂತೆ ಮಾಡಿದ್ದಾರೆ,

ಗುಂಡ್ಲುಪೇಟೆ ರಸ್ತೆಯಲ್ಲಿ ಕನ್ನಡದ ಕಂಪು

ಗುಂಡ್ಲುಪೇಟೆ ರಸ್ತೆಯಲ್ಲಿ ಕನ್ನಡದ ಕಂಪು

ರಾಜ್ಯದ ಪ್ರಮುಖ ಜಿಲ್ಲೆಗಳ ನಕ್ಷೆ ಮತ್ತು ಆ ಜಿಲ್ಲೆಗಳಲ್ಲಿ ನೋಡಬಹುದಾದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ವಿವರ ಹಾಗೂ ನದಿಗಳ ಹೆಸರನ್ನು ಪ್ರಕಟಿಸಿದ್ದಾರೆ. ಬಸ್ ಒಳಗಡೆ ಕನ್ನಡ ನಾಡು-ನುಡಿಯ ಕಂಪು ಹಾಗೂ ಕನ್ನಡ ಗೀತೆಗಳ ಸರಿಗಮ ಕೇಳಲಿದೆ. ಇದಕ್ಕಾಗಿ ವಿಶೇಷವಾಗಿ 675 ಭಾಷಾಭಿಮಾನ ಸಾರುವ ಗೀತೆಗಳನ್ನು ಸಂಗ್ರಹಿಸಿದ್ದು, ಬಸ್‍ನಲ್ಲಿನ ಪ್ರಯಾಣಿಕರು ಕೇಳಿ ಆನಂದಿಸಬಹುದಾಗಿದೆ.

ಈ ಮೂಲಕ ಹದಿನೈದು ದಿನಗಳಕಾಲ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ಗುಂಡ್ಲುಪೇಟೆ ಘಟಕದ ಎಲ್ಲ ಮಾರ್ಗಗಳಲ್ಲಿ ಸಾರಲಿದ್ದಾರೆ.

ಪ್ರಯಾಣಿಕರಿಗೊಂದು ಪ್ರಶ್ನೆ

ಪ್ರಯಾಣಿಕರಿಗೊಂದು ಪ್ರಶ್ನೆ

ಇನ್ನು ತಮ್ಮ ಬಸ್‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕನ್ನಡಕ್ಕೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳಲಿದ್ದು. ಸರಿಯಾಗಿ ಉತ್ತರಿಸಿದವರಿಗೆ ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಿದ್ದಾರೆ.

ಈ ಪರಿಪಾಠವನ್ನು ಬೆಳೆಸಿಕೊಂಡು ಅವರು ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಬಾರಿ 52 ಪ್ರಯಾಣಿಕರಿಗೂ ಕನ್ನಡದ ಒಂದೊಂದು ಅಕ್ಷರವನ್ನು ಮುದ್ರಿಸಿರುವ ಹಳದಿ ಮತ್ತು ಕೆಂಪು ಬಣ್ಣದ ಟೋಪಿಯನ್ನು ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ನಿಧನರಾದ ಸಹೋದರ ಹಾಗೂ ತನ್ನ ತಾಯಿಯ ನೆನಪಿಗಾಗಿ ಈ ಕನ್ನಡ ಸೇವೆಯನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ.

ನವೆಂಬರ್ 1ರಂದು ಕನ್ನಡ ರಥಕ್ಕೆ ಚಾಲನೆ

ನವೆಂಬರ್ 1ರಂದು ಕನ್ನಡ ರಥಕ್ಕೆ ಚಾಲನೆ

ನವೆಂಬರ್1ರ ಬೆಳಗ್ಗೆ 10ಕ್ಕೆ ಗುಂಡ್ಲುಪೇಟೆ ಡಿಪೋದಲ್ಲಿ ಕನ್ನಡಾಲಂಕೃತ ಬಸ್ಸಿಗೆ ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ಚಾಮರಾಜನಗರ ಜಿಲ್ಲಾ ಕಸಾಪ ಅಧ್ಯಕ್ಷ ವಿನಯ್ ಮತ್ತು ಗುಂಡ್ಲುಪೇಟೆ ತಾ. ಕಸಾಪ ಅಧ್ಯಕ್ಷ ಚಿದಾನಂದ, ಸಾರಿಗೆ ಘಟಕದ ವ್ಯವಸ್ಥಾಪಕರಾದ ಎಂ.ಜಿ.ಜಯಕುಮಾರ್ ಮೊದಲಾದವರ ಸಮ್ಮುಖದಲ್ಲಿ ಚಾಲನೆ ಸಿಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This conductor changes the transport bus into Kannada Chariot in November. His name is Nataraj. Working at the Gundlupet Transport Unit.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ