ಟಿವಿಕೆ-ಕಾಂಗ್ರೆಸ್ ಮೈತ್ರಿಯಾದರೂ ವಿಜಯ್‌ಗೆ ತಪ್ಪದ ಬಹುಮತದ ಸಂಕಷ್ಟ; ಸರ್ಕಾರ ರಚನೆ ಸುಲಭವಲ್ಲ, ಏನಿದು ಲೆಕ್ಕಾಚಾರ?
ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ಟಿವಿಕೆಗೆ ತನ್ನ ಬೆಂಬಲವನ್ನು ಘೋಷಿಸಿದೆ. ಚುನಾವಣೆಯಲ್ಲಿ ಬಹುಮತದ ಗಡಿಗಿಂತ ಸ್ವಲ್ಪ ಹಿಂದೆ ಬಿದ್ದಿರುವ ವಿಜಯ್ ಅವರ ಪಕ್ಷಕ್ಕೆ ಕಾಂಗ್ರೆಸ್‌ನ ಈ ನಿರ್ಧಾರವು ದೊಡ್ಡ ಬಲ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ, ಕೇವಲ ಕಾಂಗ್ರೆಸ್ ಬೆಂಬಲದಿಂದಲೇ ಅಧಿಕಾರ ಹಿಡಿಯಲು ಅಗತ್ಯವಿರುವ ಸಂಖ್ಯೆಯನ್ನು ತಲುಪಲು ಸಾಧ್ಯವೇ ಎನ್ನುವುದನ್ನು ಗಮನಿಸಿದರೆ, ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತಿವೆ. 243 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಯಾವುದೇ ಮೈತ್ರಿಕೂಟಕ್ಕೆ ಕನಿಷ್ಠ 118 ಸ್ಥಾನಗಳ ಅಗತ್ಯವಿದೆ. ಆದರೆ ಪ್ರಸ್ತುತ ಸಮೀಕರಣದ ಪ್ರಕಾರ, ಟಿವಿಕೆ ಮತ್ತು ಕಾಂಗ್ರೆಸ್ ಒಂದಾದರೂ ಈ ಮ್ಯಾಜಿಕ್ ನಂಬರ್ ತಲುಪುವುದು ಕಷ್ಟವಾಗಿದೆ.

ಗಣಿತದ ಲೆಕ್ಕಾಚಾರವನ್ನು ಗಮನಿಸಿದರೆ..
ಟಿವಿಕೆ ಗೆದ್ದಿರುವ ಸ್ಥಾನಗಳು: 108
ಕಾಂಗ್ರೆಸ್ ಗೆದ್ದಿರುವ ಸ್ಥಾನಗಳು: 5
ಟಿವಿಕೆ + ಕಾಂಗ್ರೆಸ್ ಒಟ್ಟು ಬಲ: 113
ಬಹುಮತಕ್ಕೆ ಬೇಕಾದ ಸ್ಥಾನಗಳು: 118
ಈ ಅಂಕಿಅಂಶಗಳ ಪ್ರಕಾರ ಕಾಂಗ್ರೆಸ್ ಮತ್ತು ಟಿವಿಕೆ ಕೈಜೋಡಿಸಿದರೂ ಅವರ ಒಟ್ಟು ಮೊತ್ತವು 113 ಆಗಲಿದ್ದು, ಬಹುಮತದ ಗಡಿಗಿಂತ ಇನ್ನೂ 5 ಸ್ಥಾನಗಳ ಕೊರತೆ ಎದುರಾಗಲಿದೆ. ಹೀಗಾಗಿ, ಕೇವಲ ಕಾಂಗ್ರೆಸ್ ಬೆಂಬಲದೊಂದಿಗೆ ವಿಜಯ್ ಅವರು ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಅಧಿಕಾರದ ಗದ್ದುಗೆ ಏರಲು ಅವರು ಇತರ ಸಣ್ಣ ಪಕ್ಷಗಳು ಅಥವಾ ಪಕ್ಷೇತರರ ಬೆಂಬಲವನ್ನು ಪಡೆಯುವುದು ಅನಿವಾರ್ಯವಾಗಿದೆ.
ಕಾಂಗ್ರೆಸ್ ಬೆಂಬಲದ ಜೊತೆಗೆ ಟಿವಿಕೆ ಇತರ ಸಣ್ಣ ಪಕ್ಷಗಳತ್ತ ಮುಖ ಮಾಡಬೇಕಿದೆ. ಇತ್ತೀಚಿನ ವರದಿಗಳ ಪ್ರಕಾರ, ತಲಾ ಎರಡು ಸ್ಥಾನಗಳನ್ನು ಗೆದ್ದಿರುವ ಸಿಪಿಐಎಂ (CPIM), ಸಿಪಿಐ (CPI) ಮತ್ತು ಐಯುಎಂಎಲ್ (IUML) ಪಕ್ಷಗಳು ಮುಂದಿನ ಸರ್ಕಾರಕ್ಕೆ ಬೆಂಬಲ ನೀಡುವ ಸೂಚನೆ ನೀಡಿವೆ. ಈ ಪಕ್ಷಗಳ ಒಟ್ಟು ಬಲವನ್ನು ಸೇರಿಸಿದರೆ ಮೈತ್ರಿಕೂಟದ ಸಂಖ್ಯಾಬಲವು 119ಕ್ಕೆ ಏರಲಿದ್ದು, ಬಹುಮತದ ಗಡಿಯನ್ನು (118) ಸುಲಭವಾಗಿ ದಾಟಬಹುದಾಗಿದೆ.
ಟಿವಿಕೆ ತಮಿಳುನಾಡಿನ ಅತಿದೊಡ್ಡ ಪಕ್ಷವಾಗಿರುವುದರಿಂದ ಅಲ್ಪಮತದ ಸರ್ಕಾರವನ್ನು ರಚಿಸುವ ಆಯ್ಕೆಯೂ ವಿಜಯ್ ಅವರ ಮುಂದಿದೆ. ಆದರೆ ಈ ದಾರಿ ಅತ್ಯಂತ ಸವಾಲಿನಿಂದ ಕೂಡಿದೆ. ಏಕೆಂದರೆ, ಪ್ರತಿ ಬಾರಿ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಾಗ, ಪ್ರಮುಖ ಮಸೂದೆಗಳನ್ನು ಅಂಗೀಕರಿಸುವಾಗ ಅಥವಾ ಅವಿಶ್ವಾಸ ನಿರ್ಣಯ ಎದುರಾದಾಗ ವಿಜಯ್ ಅವರು ವಿರೋಧ ಪಕ್ಷಗಳ ಬೆಂಬಲದ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಕಾಂಗ್ರೆಸ್ ಬೆಂಬಲವು ವಿಜಯ್ ಅವರಿಗೆ ದೊಡ್ಡ ಶಕ್ತಿಯಾಗಿದ್ದರೂ, ಸ್ಥಿರ ಸರ್ಕಾರವನ್ನು ನೀಡಲು ಅವರು ಇತರ ಮಿತ್ರಪಕ್ಷಗಳ ಬೆಂಬಲವನ್ನು ಪಡೆಯುವುದು ಅತ್ಯಂತ ಅವಶ್ಯಕವಾಗಿದೆ.
ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿಕೂಟಗಳನ್ನು ಒಡೆಯುವ ಮೂಲಕ ಬಹುಮತ ಪಡೆಯುವ ಆಯ್ಕೆ ವಿಜಯ್ ಅವರ ಮುಂದಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷವು ಡಿಎಂಕೆ ಮೈತ್ರಿಯಿಂದ ಹೊರಬಂದು ಟಿವಿಕೆ ಜೊತೆ ಕೈಜೋಡಿಸಿದರೆ, ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇದರೊಂದಿಗೆ ಎಐಎಡಿಎಂಕೆ ಕೂಡ ಟಿವಿಕೆಗೆ ಬೆಂಬಲ ನೀಡಬಹುದು ಎಂಬ ವದಂತಿಗಳು ಹಬ್ಬಿವೆ.
ಸಂಖ್ಯಾಬಲದ ಲೆಕ್ಕಾಚಾರದಲ್ಲಿರುವ ಅಸಲಿ ತೊಡಕುಗಳು
ಮೇಲ್ನೋಟಕ್ಕೆ ಟಿವಿಕೆ ಪಕ್ಷವು ಬಹುಮತಕ್ಕೆ ಕೇವಲ 10 ಸ್ಥಾನಗಳ ದೂರದಲ್ಲಿದೆ ಎಂದು ಕಂಡರೂ, ಪ್ರಾಯೋಗಿಕವಾಗಿ ಅವರಿಗೆ ಕನಿಷ್ಠ 12 ಹೆಚ್ಚುವರಿ ಶಾಸಕರ ಬೆಂಬಲದ ಅಗತ್ಯವಿದೆ. ಟಿವಿಕೆ ಗೆದ್ದಿರುವ 108 ಸ್ಥಾನಗಳಲ್ಲಿ, ವಿಜಯ್ ಅವರು ತಿರುಚ್ಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಎಂಬ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ. ಚುನಾವಣಾ ಆಯೋಗದ ನಿಯಮದಂತೆ ಅವರು ಒಂದು ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ, ಆಗ ಪಕ್ಷದ ಬಲ 107ಕ್ಕೆ ಇಳಿಯಲಿದೆ.
ಪಕ್ಷವು ಒಬ್ಬರನ್ನು ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆ ಮಾಡಬೇಕಾಗುತ್ತದೆ. ಸ್ಪೀಕರ್ ಆದವರು ವಿಶ್ವಾಸಮತ ಯಾಚನೆಯ ಸಮಯದಲ್ಲಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ. ಇದರಿಂದಾಗಿ ಸದನದಲ್ಲಿ ಟಿವಿಕೆಯ ಪರಿಣಾಮಕಾರಿ ಸಂಖ್ಯಾಬಲ 106ಕ್ಕೆ ಕುಸಿಯಲಿದೆ. ಈ ಎಲ್ಲಾ ಕಾರಣಗಳಿಂದಾಗಿ ವಿಜಯ್ ಅವರು ಕೇವಲ ಒಂದು ಮೈತ್ರಿಯ ಮೇಲೆ ಅವಲಂಬಿತವಾಗದೆ, ಸದನದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಹೆಚ್ಚಿನ ಶಾಸಕರ ಬೆಂಬಲವನ್ನು ಕ್ರೋಢೀಕರಿಸಬೇಕಾದ ಅನಿವಾರ್ಯತೆ ಇದೆ.













Click it and Unblock the Notifications