ಚಾಮರಾಜನಗರ: ಬಿಜೆಪಿ ರಾಜ್ಯ ಉಪಾಧ್ಯಕ್ಷರ ಮನೆಯಲ್ಲೇ ಕಳ್ಳತನ
ಚಾಮರಾಜನಗರ, ಆಗಸ್ಟ್, 24: ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕರ ಹೆಚ್ಚಾಗುತ್ತಲೇ ಇವೆ. ಅದರಲ್ಲೂ ಸಾಮಾನ್ಯ ಜನರ ಮನೆಗಳಿಗೆ ಕಳ್ಳರು ನುಗ್ಗಿ ದೋಚಿರುವ ಘಟನೆಗಳು ನಡೆದಿವೆ. ವಿಚಿತ್ರ ಎಂದರೆ ಇದೀಗ ಮಾಜಿ ಶಿಕ್ಷಣ ಸಚಿವ, ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಅವರ ಕೊಳ್ಳೆಗಾಲದ ಮನೆಯಲ್ಲಿ ಕಳ್ಳತನವಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಆದರ್ಶ ಬಡಾವಣೆಯಲ್ಲಿ ಮಾಜಿ ಶಿಕ್ಷಣ ಸಚಿವ ಎನ್.ಮಹೇಶ್ ಅವರ ನಿವಾಸವಿದ್ದು, ನಿನ್ನೆ ಸಂಜೆವರೆಗೆ ಮನೆಯಲ್ಲಿದ್ದ ಎನ್.ಮಹೇಶ್ ಅವರು ಬೆಂಗಳೂರಿಗೆ ತೆರಳಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಹೊಂಚು ಹಾಕುತ್ತಿದ್ದ ಖರ್ತನಾಕ್ ಕಳ್ಳರು ರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ನೆರೆ ಮೆನೆಯವರಿಂದ ಎನ್.ಮಹೇಶ್ ಮನೆಗೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ.

ಇನ್ನು ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಮನೆಯಲ್ಲಿ ಏನು ಕಳುವಾಗಿದೆ ಎಂದು ತಿಳಿದು ಬಂದಿಲ್ಲವಾದರೂ ಮಹೇಶ್ ಅವರು ಬಂದು ವಸ್ತುಗಳ ಮಾಹಿತಿ ನೀಡಿದ ಬಳಿಕ ಕಳವಿನ ಬಗ್ಗೆ ಹೆಚ್ಚು ಮಾಹಿತಿ ತಿಳಿಯಲಿದೆ.
ಸಿದ್ದರಾಮಯ್ಯ ಪ್ರಾಮಾಣಿಕ ರಾಜಕಾರಣಿ: ರಾಜ್ಯದಲ್ಲಿ ಇದೀಗ ಮುಡಾ ಹಗರಣ ಪ್ರಕರಣ ಸದ್ದು ಮಾಡುತ್ತಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ಇನ್ನು ಈ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಎಚ್.ಸಿ.ಮಹಾದೇವಪ್ಪ ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರು, ಮಂತ್ರಿಗಳು ಹಾಗೂ ಹೈಕಮಾಂಡ್ ಸಿದ್ದರಾಮಯ್ಯ ಪರ ಇದೆ. ಸಿದ್ದರಾಮಯ್ಯ ಯಾವ ತಪ್ಪು ಕೂಡ ಮಾಡಿಲ್ಲ, ಅವರು ಪ್ರಾಮಾಣಿಕ ರಾಜಕಾರಣಿ ಎಂದು ತಿಳಿಸಿದರು.
ಜೆಡಿಎಸ್, ಬಿಜೆಪಿ ರಾಜಭವನವನ್ನು ರಾಜಕೀಯ ಅಂಗಳ ಮಾಡಿಕೊಂಡಿದ್ದಾರೆ. ಸಂವಿಧಾನ ಉಲ್ಲಂಘನೆ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯ. ಪ್ರಾಮಾಣಿಕ ರಾಜಕಾರಣಿ ಸಿದ್ದರಾಮಯ್ಯ ಮೇಲೆ ಕಳಂಕ, ಗೌರವಕ್ಕೆ ಧಕ್ಕೆ ತರಲು ಕೋಮು ವಾದಿಗಳು, ಮತೀಯವಾದಿಗಳಿಂದ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದರು.
ಮುಡಾ ಪ್ರಕರಣದಲ್ಲಿ ಹಣಕಾಸಿನ ಅವ್ಯವಹಾರ ಆಗಿಲ್ಲ, ಸ್ವಜನ ಪಕ್ಷಪಾತ ಆಗಿಲ್ಲ, ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ 4-5 ವರಮಾನ ಬರುತ್ತಿದೆ. ಇದನ್ನು ಕಂಡು ಬಡವರ ಪರ ಕೆಲಸ ಮಾಡಬಾರದು ಎಂದು ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ, ಜೆಡಿಎಸ್ ನಾಯಕರು ಪಿತೂರಿ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರು 135 ಜನರನ್ನು ಕಳುಹಿಸಿರುವುದು ರಾಜೀನಾಮೆ ಕೊಡುವುದಕ್ಕಾ.? ರಾಜೀನಾಮೆ ಕೊಡಲು ಏನಾಗಿದೆ.? ವಿಜಯೇಂದ್ರ ಹೇಳಿದ ತಕ್ಷಣ ರಾಜೀನಾಮೆ ಕೊಡಕ್ಕಾಗತ್ತಾ? ಅವರೆಲ್ಲ ಏನೇನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ಮಾಜಿ ಮುಖ್ಯಮಂತ್ರು ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ನಿರಾಣಿ, ಜನಾರ್ದನ ರೆಡ್ಡಿ ಏನೇನು ಮಾಡಿದ್ದಾರೆ. ಅವರೆಲ್ಲರ ಮೇಲೂ ಕೇಸ್‌ಗಳಿದೆಯಲ್ಲಾ, ಪ್ರಾಸಿಕ್ಯೂಷನಲ್ಲು ಇದೆಯಲ್ಲ, ಮೊದಲು ಅದನ್ನು ಅವರು ಶುದ್ಧಿ ಮಾಡಿಕೊಳ್ಳಲಿ. ಅವರ ಮನೆಯನ್ನು ಮೊದಲು ಸ್ವಚ್ಚವಾಗಿಟ್ಟುಕೊಳ್ಳಲಿ ಎಂದು ವಿಜಯೇಂದ್ರಗೆ ತಿರುಗೇಟು ನೀಡಿದರು.












Click it and Unblock the Notifications