ಚಾಮರಾಜನಗರದಲ್ಲಿ ಕೊನೆಗೂ ಸೆರೆಯಾಯ್ತು ಆತಂಕ ಸೃಷ್ಟಿಸಿದ್ದ ಆನೆ
ಚಾಮರಾಜನಗರ, ಅಕ್ಟೋಬರ್ 24: ತಮಿಳುನಾಡಿನಿಂದ ದಿಕ್ಕು ತಪ್ಪಿ ಬಂದು ಕಳೆದ ಎರಡು ದಿನಗಳಿಂದ ಇಲ್ಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಆನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ.
ಈ ಆನೆಯು ಮಂಗಳವಾರ ಗುಂಡ್ಲುಪೇಟೆ ತಾಲೂಕಿನಲ್ಲಿ ಕಾಣಿಸಿಕೊಂಡು ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಅಷ್ಟೇ ಅಲ್ಲ ಎರಡು ಜಾನುವಾರುಗಳನ್ನು ಬಲಿ ತೆಗೆದುಕೊಂಡಿತ್ತು. ಅಂದು ರಾತ್ರಿ ಹಂಗಳ ಗ್ರಾಮದ ಬಸವೇಶ ಎಂಬುವರ ಬಾಳೆ ತೋಟದಲ್ಲಿದ್ದ ಆನೆಯನ್ನು ಸೆರೆಹಿಡಿಯಲು ನಾಗರಹೊಳೆಯಿಂದ ಅಭಿಮನ್ಯು, ಪಾರ್ಥಸಾರಥಿ, ಗಣೇಶ ಹಾಗೂ ಗೋಪಾಲಸ್ವಾಮಿ ಎಂಬ ಸಾಕಾನೆಗಳನ್ನು ಕರೆತರಲಾಗಿತ್ತು.
ಆದರೆ ಬುಧವಾರ ಬೆಳಗ್ಗೆ ಆನೆ ಕಲ್ಲುಕಟ್ಟೆ ಹಳ್ಳದ ಮಾರ್ಗವಾಗಿ ಸಾಗಿ ಪಾರ್ವತಾಂಬ ಬೆಟ್ಟದ ಸಮೀಪದ ವಿಘ್ನೇಶ್ವರನ ಕಣಿವೆ ಬಳಿಯಲ್ಲಿದೆ ಎಂಬ ಮಾಹಿತಿಯ ಮೇರೆಗೆ ಅರಣ್ಯ ಸಿಬ್ಬಂದಿ ಹೋದರಾದರೂ ಸುಳಿವು ಸಿಕ್ಕಿರಲಿಲ್ಲ. ಡ್ರೋಣ್ ಕ್ಯಾಮರಾ ಮೂಲಕ ಕಂದೇಗಾಲ ಸಮೀಪದ ಸಿದ್ದಪ್ಪಾಜಿ ದೇವಸ್ಥಾನದ ಬಳಿಯಿಂದ ಆನೆಯ ಹೆಜ್ಜೆಗಳನ್ನು ದೇಪಾಪುರ ಗ್ರಾಮದವರೆಗೂ ಸಿಬ್ಬಂದಿ ಹಿಂಬಾಲಿಸಿದರೂ ಯಾವುದೇ ಉಪಯೋಗವಾಗಿರಲಿಲ್ಲ.
Recommended Video

ಆದರೆ ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಬನ್ನಿತಾಳಪುರ ಸಮೀಪ ಆನೆ ಸೆರೆಯಾಗಿದೆ. ಅರವಳಿಕೆ ನೀಡಿ ಆನೆಯನ್ನು ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಗಿದೆ.
ತಮಿಳುನಾಡಿನಲ್ಲಿ 8 ಜನರನ್ನು ಕೊಂದಿದ್ದ ಕಾಡಾನೆಗೆ ರೇಡಿಯೋ ಕಾಲರ್ ಹಾಕಿ ತಮಿಳುನಾಡು ಮಧುಮಲೈ ಅರಣ್ಯಕ್ಕೆ ಅಧಿಕಾರಿಗಳು ತಂದು ಬಿಟ್ಟಿದ್ದರು.












Click it and Unblock the Notifications