ಚಾಮರಾಜನಗರ: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಸಾಗಾಟ-ಮೂವರು ಅಂದರ್
ಚಾಮರಾಜನಗರ, ಸೆಪ್ಟೆಂಬರ್, 12: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ. ಹಾಗಾದರೆ ಬಂಧಿತ ಆರೋಪಿಗಳ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ಪ್ರಕಾಶ್(38) ಮಳವಳ್ಳಿ ತಾಲೂಕಿನ ಮಾಗನೂರು ಗ್ರಾಮದ ನಾಗೇಂದ್ರಸ್ವಾಮಿ(45), ಮಳವಳ್ಳಿ ತಾಲೂಕಿನ ರಾಗಿಭೋಮ್ಮನಹಳ್ಳಿ ನಾಗರಾಜು(54) ಬಂಧಿತ ಆರೋಪಿಗಳು.

ಹನೂರು ತಾಲೂಕಿನ ಗುಂಡಿಮಾಳ ಮಾರ್ಗದ ಮೂಲಕ ಮಾರಾಟ ಮಾಡುವ ಉದ್ದೇಶದಿಂದ ನಕ್ಷತ್ರ ಆಮೆ ರವಾನೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹನೂರಿನ ಹುಲುಸುಗುಡ್ಡೆಯ ಬಳಿ ದಾಳಿ ನಡೆಸಿದ ಪೊಲೀಸರು ಆರೋಪಿಗಳ ಸಹಿತ 1ಕೆಜಿ 280 ಗ್ರಾಂ ತೂಕದ ಎರಡು ಜೀವಂತ ನಕ್ಷತ್ರ ಆಮೆ, ಟಾಟಾ ಇಂಡಿಕಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹುಲಿಯನ್ನೇ ಗುಮ್ಮಿದ ಕಾಡೆಮ್ಮೆ: ಚಾಮರಾಜನಗರ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಾಡುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಹುಲಿಯೊಂದು ಎರಡು ಹಸುಗಳ ರಕ್ತ ಹೀರಿರುವ ಘಟನೆ ಜಿಲ್ಲೆಯ ವಡೆಯನಪುರ ಗ್ರಾಮದಲ್ಲಿ ನಡೆದಿತ್ತು. ಇನ್ನು ಇದೀಗ ಬೇಟೆಯಾಡಲು ಬಂದ ಹುಲಿಯನ್ನೇ ಕಾಡೆಮ್ಮೆಯೊಂದು ಹಿಮ್ಮೆಟ್ಟಿಸಿರುವುದು ಬಂಡೀಪುರ ಸಫಾರಿಯಲ್ಲಿ ನಡೆದಿದೆ.
ಸುಮ್ಮೆನೆ ಯಾವುದೇ ಪ್ರಾಣಿಗರ ತಂಟೆಗೆ ಹೋಗದೇ ಮೇಯುತ್ತಿದ್ದ ಕಾಡೆಮ್ಮೆ ಮೇಲೆ ದಾಳಿ ಹುಲಿ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಹುಲಿಗೆ ಕಾಲಿನಿಂದ ಒದ್ದು ಕಾಡೆಮ್ಮೆ ಎದುರಿಸಿ ನಿಂತಿದೆ. ಇನ್ನು ಕಾಡೆಮ್ಮೆಯ ರೌದ್ರಾವತಾರ ಕಂಡ ಹುಲಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಸ್ಥಳದಿಂದ ಕಾಲ್ಕಿತ್ತಿದೆ.
ಇನ್ನು, ಈ ರೋಮಾಂಚಕ ಬೇಟೆ ದೃಶ್ಯವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರು ಸೆರೆ ಹಿಡಿದಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 11) ಸಂಜೆ ಸಫಾರಿಯಲ್ಲಿ ಈ ಬೇಟೆ ಕಾಳಗ ನಡೆದಿದೆ ಎಂದು ತಿಳಿದುಬಂದಿದೆ. ಕಾಡೆಮ್ಮೆ ಬಲಿಷ್ಠ ಪ್ರಾಣಿಯಾದರೂ ಸಹ ಹುಲಿಯ ಪ್ರಮುಖ ಬೇಟೆಗಳಲ್ಲಿ ಒಂದಾಗಿದೆ. ಆದರೆ, ಹುಲಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಮಾತ್ರ ರೋಮಾಂಚಕಾರಿ ಆಗಿದೆ.
ಹೋಟೆಲ್‌ಗೆ ಎಂಟ್ರಿ ಕೊಟ್ಟ ಕಾಡಾನೆ: ಚಾಮರಾಜನಗರದಲ್ಲಿ ಪ್ರಾಣಿಗಳು ಆಗಾಗ ಹಾವಾಳಿ ಮಾಡುತ್ತಲೇ ಇರುತ್ತವೆ. ಹಾಗೆಯೇ ಇದೀಗ ಹೋಟೆಲ್‌ಗೆ ಕಾಡಾನೆ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ಕೊಟ್ಟ ಘಟನೆ ಪ್ರಸಿದ್ಧ ಪ್ರವಾಸಿ ತಾಣವಾದ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಶನಿವಾರ (ಸೆಪ್ಟೆಂಬರ್ 08) ರಾತ್ರಿ ನಡೆದಿದೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆಯು ನಡೆಸುತ್ತಿರುವ ಹೋಟೆಲ್ ಮಯೂರಗೆ ಕಾಡಾನೆ ಎಂಟ್ರಿ ಕೊಟ್ಟು ಆವರಣದಲ್ಲಿ ಓಡಾಡಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಬಳಿಕ ಹೋಟೆಲ್ ಆವರಣಕ್ಕೆ ಆನೆ ಬಂದದ್ದನ್ನು ಕಂಡು ಅಲ್ಲಿನ ಸಿಬ್ಬಂದಿ ಶಬ್ಧ ಮಾಡಿ ಆನೆಯನ್ನು ಓಡಿಸಿ ಹೋಟೆಲ್ ಗೇಟ್ ಬಂದ್ ಮಾಡಿದ್ದಾರೆ. ಇನ್ನು, ಆನೆ ಓಡಾಟದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಆನೆಯೊಂದು ಬೆಟ್ಟದ ತೇರಿನ ಬೀದಿಗೆ ಅಂಗಡಿಗಳ ಮೇಲೆ ದಾಳಿ ಮಾಡಿತ್ತು. ಹಲಸಿನ ಹಣ್ಣಿನ ಆಸೆಗೆ ಬರುತ್ತಿದ್ದ ಕಾಡಾನೆ ಈಗ ವಸತಿ ಪ್ರದೇಶಗಳಲ್ಲೂ ಓಡಾಡುತ್ತಿರುವುದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.












Click it and Unblock the Notifications