ಮಲೆ ಮಹದೇಶ್ವರ ದೇವಾಲಯದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪನೆ
ಚಾಮರಾಜನಗರ, ಜೂನ್ 27; ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಕ್ಷೇತ್ರದಲ್ಲಿ 1 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಮುಂದಾಗಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ.
ಯೋಜನೆ ಅನುಷ್ಠಾನದ ಹೊಣೆಯನ್ನು ಸರ್ಕಾರದ ಅಂಗ ಸಂಸ್ಥೆಯಾದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ಗೆ (ಎಂಎಸ್‌ಐಎಲ್) ವಹಿಸಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದ್ದು ಒಟ್ಟು 8.51 ಕೋಟಿ ವೆಚ್ಚದಲ್ಲಿ ಸ್ಥಾವರ ನಿರ್ಮಾಣವಾಗಲಿದೆ.
ಈ ಕುರಿತು ಮಾತನಾಡಿದ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ, "ಯೋಜನೆ ಅನುಷ್ಠಾನ ಪ್ರಕ್ರಿಯೆಗಳು ಮುಂದಿನ ತಿಂಗಳಿನ ಮೊದಲ ವಾರದಲ್ಲೇ ಆರಂಭವಾಗಲಿವೆ. ಟೆಂಡರ್ ಕರೆಯುವುದು ಸೇರಿದಂತೆ ಎಲ್ಲಾ ಕೆಲಸವನ್ನು ಎಂಎಸ್‌ಐಎಲ್ ಮಾಡಲಿದೆ. ಎಂಟು ತಿಂಗಳ ಅವಧಿಯಲ್ಲಿ ಸ್ಥಾವರ ನಿರ್ಮಾಣವಾಗಲಿದೆ. ಕಾರ್ಯಾರಂಭದ ನಂತರ ಐದು ವರ್ಷಗಳ ಕಾಲ ಸಂಸ್ಥೆಯೇ ಸ್ಥಾವರವನ್ನು ನಿರ್ವಹಿಸಲಿದೆ" ಎಂದು ತಿಳಿಸಿದರು.

"ಈ ಯೋಜನೆಗೆ ರಾಜ್ಯ ಸರ್ಕಾರವು 2020ರ ಮಾರ್ಚ್ ತಿಂಗಳಲ್ಲಿಯೇ ಅನುಮೋದನೆ ನೀಡಿತ್ತು. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಯೋಜನೆಯ ಕಾರ್ಯಸಾಧು ಅಧ್ಯಯನ ನಡೆಸಿ ವರದಿ ನೀಡಿದ್ದರು. ಪ್ರಾಧಿಕಾರ ನೇಮಿಸಿದ್ದ ತಜ್ಞರ ತಂಡ ಕೂಡ ಯೋಜನೆ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಹಿರಿಯ ಅಧಿಕಾರಿಗಳು ಹೆಲಿಪ್ಯಾಡ್ ಪಕ್ಕದಲ್ಲಿ ಯೋಜನೆಗಾಗಿ ಗುರುತಿಸಿರುವ ಸ್ಥಳವನ್ನು ಪರಿಶೀಲಿಸಿ, ಸೂಕ್ತ ಸ್ಥಳ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ" ಎಂದು ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಜಯವಿಭವ ಸ್ವಾಮಿ ಹೇಳಿದರು.
"ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ದೇವಾಲಯ ಸೇರಿದಂತೆ ತನ್ನ ಅಧೀನದಲ್ಲಿರುವ ಎಲ್ಲ ಕಟ್ಟಡಗಳಿಗೂ ತಿಂಗಳಿಗೆ ಸರಾಸರಿ ಎರಡು ಲಕ್ಷ ಯೂನಿಟ್ ಗಳಷ್ಟು ವಿದ್ಯುತ್ ಬಳಸುತ್ತಿದೆ. ಸೆಸ್ಕ್ ನಿಂದ ತಿಂಗಳ ಬಿಲ್ ಸರಾಸರಿ 12 ಲಕ್ಷ ಬರುತ್ತದೆ. ಸೌರ ವಿದ್ಯುತ್ ಸ್ಥಾವರವು ಪ್ರತಿ ತಿಂಗಳು 1.5 ಲಕ್ಷ ಯುನಿಟ್‌ಗಳಷ್ಟು ವಿದ್ಯುತ್ ಉತ್ಪಾದಿಸಲಿದೆ. ಇದರಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 10 ಲಕ್ಷದಷ್ಟು ಹಣ ಉಳಿತಾಯವಾಗಲಿದೆ.
"ಸ್ಥಾವರದಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ಸೆಸ್ಕ್‌ನ ಗ್ರಿಡ್‌ಗೆ ಸಂಪರ್ಕಿಸಲಾಗುವುದು. ಪ್ರಾಧಿಕಾರವು ಪ್ರತಿ ತಿಂಗಳು ಬಳಸುವ ಒಟ್ಟು ಯುನಿಟ್‌ಗಳ ಪೈಕಿ ಈ ಸ್ಥಾವರದಲ್ಲಿ ಉತ್ಪಾದನೆಯಾಗುವ ಯುನಿಟ್‌ಗಳನ್ನು ಕಳೆದು ಉಳಿದ ಯುನಿಟ್‌ಗಳಿಗೆ ಮಾತ್ರ ಬಿಲ್ ಬರಲಿದೆ. 50 ಸಾವಿರ ಯುನಿಟ್‌ಗಳಿಗೆ ಮಾತ್ರ ವಿದ್ಯುತ್ ಬಿಲ್ ಬರಲಿದೆ. ಪ್ರಾಧಿಕಾರದ್ದು ವಾಣಿಜ್ಯ ಉದ್ದೇಶದ ವಿದ್ಯುತ್ ಸಂಪರ್ಕ. ಈಗ ಯುನಿಟ್‌ಗೆ ರೂ 9 ಇದೆ. ನಮ್ಮ ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳು 10 ಲಕ್ಷದಷ್ಟು ಹಣ ಉಳಿತಾಯವಾಗಲಿದೆ. ವರ್ಷಕ್ಕೆ 1.2 ಕೋಟಿ ಉಳಿಯಲಿದೆ. ಆರೇಳು ವರ್ಷಗಳಲ್ಲಿ ಸ್ಥಾವರ ನಿರ್ಮಾಣ ವೆಚ್ಚ ಬರಲಿದೆ" ಎಂದು ಜಯವಿಭವ ಸ್ವಾಮಿ ಹೇಳುತ್ತಾರೆ.
ಈ ಪ್ರದೇಶದಲ್ಲಿ ಆನೆ, ಕಾಡು ಹಂದಿ ಇನ್ನಿತರ ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ ಭದ್ರವಾದ ಆವರಣಗೋಡೆಯ ಅಗತ್ಯವಿದೆ. ಇದಕ್ಕಾಗಿ 1.5 ಕೋಟಿ ವೆಚ್ಚವಾಗಲಿದೆ. ಐದು ವರ್ಷಗಳ ನಿರ್ವಹಣೆಗೆ 50 ಲಕ್ಷ ಬೇಕು. ಹಾಗಾಗಿ ಒಟ್ಟಾರೆ ಯೋಜನೆ ವೆಚ್ಚ 2 ಕೋಟಿಯಷ್ಟು ಹೆಚ್ಚಾಗಿದೆ. ವಿದ್ಯುತ್ ಸ್ಥಾವರ ಕನಿಷ್ಠ ಎಂದರೂ 25 ವರ್ಷ ಬಾಳಿಕೆ ಬರುತ್ತದೆ. ದೀರ್ಘಾವಧಿಯಲ್ಲಿ ಈ ಯೋಜನೆಯಿಂದ ಪ್ರಾಧಿಕಾರಕ್ಕೆ ಸಾಕಷ್ಟು ಲಾಭವಿದೆ.












Click it and Unblock the Notifications