ಪ್ರಧಾನಿಗೆ ಗೌರವ ಕೊಡದ ಸಿದ್ದರಾಮಯ್ಯ ಒಬ್ಬ ಅನಾಗರಿಕ: ಶ್ರೀನಿವಾಸ ಪ್ರಸಾದ್
ಚಾಮರಾಜನಗರ, ಮೇ 6: ತನ್ನ ಉಡಾಫೆ ಮಾತಿನಿಂದಲೇ ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಸೋಲಾಗಿದ್ದು ಎಂದು ಬಿಜೆಪಿ ಮುಖಂಡ ಮತ್ತು ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ವಿ ಶ್ರೀನಿವಾಸ ಪ್ರಸಾದ್, ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
120 ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಮಂತ್ರಿಯವರನ್ನು ಬಹುವಚನದಲ್ಲಿ ಮಾತನಾಡಿಸಬೇಕು ಎನ್ನುವ ಕಾಮನ್ ಸೆನ್ಸ್ ಇಲ್ಲದ ಸಿದ್ದರಾಮಯ್ಯ ಒಬ್ಬ ಅನಾಗರಿಕ ಎಂದು ಶ್ರೀನಿವಾಸ ಪ್ರಸಾದ್ ಕಿಡಿಕಾರಿದ್ದಾರೆ.
ರಾಜ್ಯದ ದೋಸ್ತಿ ಸರಕಾರದಲ್ಲಿ ಸಮನ್ವಯ ಇಲ್ಲ ಎನ್ನುವುದು ಜಿ ಟಿ ದೇವೇಗೌಡ ಮತ್ತು ಸಿದ್ದರಾಮಯ್ಯನವರ ಹೇಳಿಕೆಯಿಂದ ಸಾಬೀತಾಗಿದೆ ಎಂದಿರುವ ಶ್ರೀನಿವಾಸ ಪ್ರಸಾದ್, ರಾಜ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ.

ಚಾಮರಾಜನಗರದಲ್ಲಿ ಮತದಾನವೂ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ, ಇದರಿಂದ ನನಗೆ ಹೆಚ್ಚಿನ ಮತ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ. ಇದೊಂದು ಪ್ರಯಾಸಕರವಾದ ಚುನಾವಣೆಯಾಗಿತ್ತು ಎಂದು ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಆದರೂ ಪ್ರಧಾನಿಯವರನ್ನು ಯಾವರೀತಿ ಕರೆಯಬೇಕು, ಹೇಗೆ ಮಾತನಾಡಿಸಬೇಕು ಎಂದು ಗೊತ್ತಿಲ್ಲದ ಅವರು ಒಬ್ಬ ನಾಗರೀಕನೇ ಅಲ್ಲ ಎಂದು ಶ್ರೀನಿವಾಸ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಶಿಷ್ಯನೇ ಆಗಿರುವ ಧ್ರುವನಾರಾಯಣ್, ಶ್ರೀನಿವಾಸ ಪ್ರಸಾದ್ ಅವರ ಪ್ರತಿಸ್ಪರ್ಧಿ, ಮೇ 23ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications