ರಾಜ್ಯದಲ್ಲಿ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕನಿಗೆ ₹1 ಲಕ್ಷ ಪರಿಹಾರ-ಯಾವ ಜಿಲ್ಲೆಯಲ್ಲಿ?
ಚಾಮರಾಜನಗರ, ಏಪ್ರಿಲ್, 18: ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕನಿಗೆ ಸಮಾಜ ಕಲ್ಯಾಣ ಇಲಾಖೆಯು 1 ಲಕ್ಷ ರೂಪಾಯಿ ಪರಿಹಾರವನ್ನು ಕೊಟ್ಟಿದ್ದು, ಇದು ಬಾಲಕನಿಗೆ ಪೋಕ್ಸೊ ಅಡಿ ಕೊಟ್ಟ ಮೊದಲ ಪರಿಹಾರವಾಗಿದೆ.
ಕೆಲವು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಶಿಕ್ಷಣ ಸಂಸ್ಥೆಯ ಶಿಕ್ಷಕ ಅರುಣ್ ಕುಮಾರ್ ಎಂಬಾತ SSLC ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ನೊಂದ ಬಾಲಕನು ಈ ಸಂಬಂಧ ದೂರು ಕೊಟ್ಟು ಅಳಲು ತೋಡಿಕೊಂಡಿದ್ದ ಬಳಿಕ ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಬಾಲಕನಿಗೆ ಪರಿಹಾರ ನೀಡಿದ ಪ್ರಕರಣ ರಾಜ್ಯದಲ್ಲೇ ಇದೇ ಮೊದಲು ಎಂದು ಹೇಳಲಾಗಿದೆ. ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತರಾದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ನೀಡಲು ಅವಕಾಶವಿದೆ. ಹೀಗಾಗಿ ಬಾಲಕನ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಉಪನಿರ್ದೇಶಕ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚು ಬಾಲಕಿಯರು ಸಂತ್ರಸ್ಥೆಯಾಗಿರುತ್ತಾರೆ. ಈ ಪ್ರಕರಣದಲ್ಲಿ ಬಾಲಕ ಸಂತ್ರಸ್ಥನಾಗಿದ್ದಾನೆ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಈ ಆರೋಪ ಹಿನ್ನೆಲೆ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ ವಿಶೇಷ ಪೋಕ್ಸೋ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಗುರುವಾರ (ಏಪ್ರಿಲ್ 18) ಆದೇಶಿಸಿದೆ.
ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಮಹೇಶ್ ಪ್ರಸಾದ್, ವೆಂಕಟಯ್ಯನಛತ್ರ ಗ್ರಾಮದ ಸಿದ್ದಮಲ್ಲು ಶಿಕ್ಷೆಗೊಳಗಾದ ಅಪರಾಧಿಗಳು. ಇವರಿಬ್ಬರು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಲೈಂಗಿಕ ದೌರ್ಜನ್ಯ ನೀಡಿದ್ದು, ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆ ಚಾಮರಾಜನಗರ ಅಧಿಕ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ ವಿಶೇಷ ಪೋಕ್ಸೋ ನ್ಯಾಯಾಧೀಶರಾದ ಎನ್.ಆರ್.ಲೋಕಪ್ಪ 20 ವರ್ಷ ಕಠಿಣ ಶಿಕ್ಷೆ, 55 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಏನಿದು ಪ್ರಕರಣ?: ವರಸೆಯಲ್ಲಿ ಸ್ವಂತ ತಂಗಿ ಎಂದು ಗೊತ್ತಿದ್ದರೂ ಸಿದ್ದಮಲ್ಲು ಅಪ್ರಾಪ್ತೆಯನ್ನು ಅಪಹರಿಸಿ ಮದುವೆ ಮಾಡಿಕೊಳ್ಳುವೆ ಎಂದು ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಇದಕ್ಕೂ ಮುನ್ನ, ಇವರಿಬ್ಬರ ಪ್ರೀತಿ ವಿಚಾರ ತಿಳಿದಿದ್ದ ಮಹೇಶ್ ಪ್ರಸಾದ್ ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ.
ಸಿದ್ದಮಲ್ಲು ಬಂಧಿಸಿದ ಬಳಿಕ, ಆಪ್ತ ಸಮಾಲೋಚನೆಯಲ್ಲಿ ನೊಂದ ಬಾಲಕಿಯು ಬ್ಲಾಕ್ ಮೇಲ್ ವಿಚಾರವನ್ನು ತಿಳಿಸಿದ ಬಳಿಕ ವಿಚಾರ ಪೊಲೀಸರ ಗಮನಕ್ಕೆ ಬಂದಿದೆ. ಸದ್ಯ, ಇಬ್ಬರು ಅಪರಾಧಿಗಳಿಗೂ 20 ವರ್ಷ ಕಠಿಣ ಶಿಕ್ಷೆ ವಿಧಿಸಿ, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.












Click it and Unblock the Notifications