ಹನೂರು: ಮಲೆ ಮಹದೇಶ್ವರ ಬೆಟ್ಟದ ಆನೆಗೆ 5 ಲಕ್ಷ ರೂಪಾಯಿ ವಿಮೆ
ಚಾಮರಾಜನಗರ, ಜೂನ್ 2 : ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರಸ್ವಾಮಿ ದೇವಾಲಯದ ಆನೆ ಉಮಾ ಮಹೇಶ್ವರಿಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಆರೋಗ್ಯ ವಿಮೆ ಮಾಡಿಸಿದೆ. ಉಮಾ ಮಹೇಶ್ವರಿ ಆನೆ ಹೆಸರಿನಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ವಿಮೆ ಮಾಡಿಸಲಾಗಿದ್ದು, ವರ್ಷಕ್ಕೆ 11 ಸಾವಿರ ರೂಪಾಯಿಯನ್ನು ಆನೆಗಾಗಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಪಾವತಿಸಲಿದೆ.
ಮಲೆ ಮಹದೇಶ್ವರ ದೇವಾಲಯದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಆನೆಗೆ ವಿಮೆ ಮಾಡಿಸಲು ಮುಂದಾದ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರಿಗಳು 48 ವರ್ಷದ ಹೆಣ್ಣಾನೆ ಉಮಾ ಮಹೇಶ್ವರಿಯ ಆರೋಗ್ಯ ತಪಾಸಣೆ ಮಾಡಿಸಿದರು. ಪಶು ವೈದ್ಯರು ತಪಾಸಣೆ ಮಾಡಿದ್ದು, ಆನೆಯು ಆರೋಗ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಅರಣ್ಯ ಇಲಾಖೆಯ ನಿಯಮದ ಪ್ರಕಾರ ಸಾಕಾನೆಗೆ ವಿಮೆ ಮಾಡಿಸಬೇಕು. ಎರಡೂವರೆ ವರ್ಷಗಳಿಂದ ವಿಮೆ ಮಾಡಿರಲಿಲ್ಲ. ಈಗ ಆರೋಗ್ಯ ತಪಾಸಣೆ ಮಾಡಿಸಿ, ವಿಮೆ ಮಾಡಿದ್ದೇವೆ ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ ಮಾಹಿತಿ ನೀಡಿದ್ದಾರೆ.
ರಾಜ್ಯದ ಪ್ರಸಿದ್ಧ ತಾಣಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಉಮಾ ಮಹೇಶ್ವರಿ ಆನೆ ಹಲವಾರು ವರ್ಷಗಳಿಂದ ದೇವಾಲಯದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದೆ. ತನ್ನ ಸಾಧು ಸ್ವಭಾವದಿಂದ ಎಲ್ಲರಿಗೂ ಅಚ್ಚುಮೆಚ್ಚಾಗಿರುವ ಉಮಾ ಮಹೇಶ್ವರಿಯನ್ನು ನೋಡಲು ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ.
ಮಾದಪ್ಪನ ಹುಂಡಿಯಲ್ಲಿ 2.53 ಕೋಟಿ ರೂ ಕಾಣಿಕೆ ಸಂಗ್ರಹ
ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಂಗಳವಾರ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 2.53 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಮಂಗಳವಾರ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ಟ್‌ನಲ್ಲಿ ಎಣಿಕೆ ಕಾರ್ಯ ನಡೆದಿದೆ. ಈ ಬಾರಿ ಅಮಾವಾಸ್ಯೆ, ವಿಶೇಷ ದಿನಗಳಲ್ಲಿ, ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಸಾವಿರರು ಜನರು ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಹಾಗೂ ವಿಧಾನಸಭಾ ಚುನಾವಣೆಯಿದ್ದ ಹಿನ್ನೆಲೆಯಲ್ಲಿ ಕಳೆದ 32 ದಿನಗಳ ಅವಧಿಯಲ್ಲಿ 2.53,58,519 ರೂಪಾಯಿ ಹಣ 65 ಗ್ರಾಂ ಚಿನ್ನ ಹಾಗೂ 3.358 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಶ್ರೀಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪಕಾರ್ಯದರ್ಶಿ ಬಸವರಾಜು, ದ್ವಿತೀಯ ದರ್ಜೆ ಸಹಾಯಕ ಸರಗೂರು ಮಹದೇವಸ್ವಾಮಿ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರು ,ಮ,ಬೆಟ್ಟ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಹುಂಡಿ ಎಣಿಕೆ ಕಾರ್ಯದಲ್ಲಿ ಹಾಜರಿದ್ದರು.












Click it and Unblock the Notifications