ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ ನೀಡಬೇಕು-ನಟ ಚೇತನ್
ಚಾಮರಾಜನಗರ, ಡಿಸೆಂಬರ್ 5: ಸಾರ್ವಜನಿಕ ವಲಯದಂತೆ ಕ್ರೀಡಾ ಕ್ಷೇತ್ರವಾದ ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ ನೀಡಬೇಕು ಎಂದು ನಟ ಚೇತನ್ ಒತ್ತಾಯಿಸಿದ್ದಾರೆ.
ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಣೆಯಲ್ಲಿ ಮಾತನಾಡಿದ ಅವರು, ಭಾರತೀಯ ಕ್ರಿಕೆಟ್ ತಂಡದಲ್ಲಿ ಶೇ.70ರಷ್ಟು ಮೇಲ್ಜಾತಿಯವರೇ ಇದ್ದಾರೆ. ಹೀಗಾಗಿ ಕ್ರಿಕೆಟ್‌ನಲ್ಲೂ ಮೀಸಲಾತಿ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಬಂಡೀಪುರ ಟೂ ಸಾತ್ಪುರ: ಹೊರರಾಜ್ಯಕ್ಕೆ ತೆರಳಿದ ನಾಲ್ಕು ಗಜಗಳು
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ 2016ರಿಂದ 6 ಮಂದಿ ಕರಿಯರಿಗೆ ಮೀಸಲಾತಿ ನೀಡಲಾಗುತ್ತಿದೆ. ಅದೇ ರೀತಿ ಭಾರತೀಯ ಕ್ರಿಕೆಟ್‌ನಲ್ಲೂ ಮೀಸಲಾತಿ ನೀಡಬೇಕು. ಇಲ್ಲಿನ ಕ್ರಿಕೆಟ್ ಶ್ರೀಮಂತವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯದವರಿಗೆ ಮೀಸಲಾತಿ ನೀಡಿದಲ್ಲಿ ಕ್ರಿಕೆಟ್ ತಂಡ ಇನ್ನಷ್ಟು ಉತ್ತಮವಾಗುತ್ತದೆ ಎಂದು ಹೇಳಿದರು.

ಮೀಸಲಾತಿ ಆರ್ಥಿಕ ಸಬಲೀಕರಣ ಅಲ್ಲವೇ ಅಲ್ಲ
ಖಾಸಗಿ ವಲಯದಲ್ಲಿ ಮೀಸಲಾತಿ ಬಹಳ ಅವಶ್ಯಕವಾಗಿದೆ. ಮೀಸಲಾತಿ ಪ್ರಾಧಾನ್ಯತೆ ಅಷ್ಟೇ ಅಲ್ಲದೇ ಅದೊಂದು ನ್ಯಾಯ. ಮೀಸಲಾತಿ ಪ್ರಾತಿನಿಧ್ಯವೋ- ಆರ್ಥಿಕ ಸಬಲೀಕರಣವೋ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕಾದರೆ, ಮೀಸಲಾತಿ ಪ್ರಾತಿನಿಧ್ಯವೇ ಹೊರತು, ಅದು ಆರ್ಥಿಕ ಸಬಲೀಕರಣ ಅಲ್ಲವೇ ಅಲ್ಲ. ನಮಗೆ ಮೀಸಲಾತಿ ಎಂದರೆ ಪ್ರತಿಯೊಂದು ಸಮುದಾಯಕ್ಕೂ ಆಯಾಯ ಸಮುದಾಯ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳನ್ನು ನೀಡುವುದು. ಅಂದರೆ ಶಿಕ್ಷಣ, ಉದ್ಯೋಗ, ರಾಜಕೀಯ, ಭೌಗೋಳಿಕವಾಗಿ ಪ್ರಾಧಾನ್ಯತೆ ಕೊಡುವ ಒಂದು ಪ್ರಯತ್ನ. ಮೀಸಲಾತಿ ಪ್ರಾಧಾನ್ಯತೆ ಅಷ್ಟೇ ಅಲ್ಲದೇ, ಅದೊಂದು ನ್ಯಾಯ ಎಂದು ನಟ ಚೇತನ್ ಹೇಳಿದ್ದಾರೆ.

ಒಕ್ಕಲಿಗ ಸಮುದಾಯದ ಮೀಸಲಾತಿ ಹೋರಾಟ ಸಮಂಜಸ
ಮಾತು ಮುಂದುವರಿಸಿದ ಅವರು, ರಾಜ್ಯ ಸರ್ಕಾರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಶ್ರೀಗಳ ಹೋರಾಟ ಹಾಗೂ ನಾಗಮೋಹನ್ ದಾಸ್ ವರದಿ ಪ್ರಕಾರ ಎಸ್‌ಟಿಗೆ ಶೇ.3 ರಿಂದ ಶೇ 7ಕ್ಕೆ ಎಸ್‌ಸಿಗೆ ಶೇ. 15 ರಿಂದ 17 ಕ್ಕೆ ಮೀಸಲಾತಿ ಹೆಚ್ಚು ಮಾಡಿದೆ. ಇದೊಂದು ಒಳ್ಳೆಯ ನಿರ್ಧಾರವಾಗಿದೆ. ಇನ್ನು ಒಕ್ಕಲಿಗ ಸಮುದಾಯ ಶೇ೪ ರಿಂದ 12ರವಗೆ ಮೀಸಲಾತಿ ಬೇಕು ಎಂದು ಹೋರಾಟ ಮಾಡುವುದು ಸಮಂಜಸವಾಗಿದೆ ಎಂದರು.

ಕರ್ನಾಟಕದಲ್ಲಿ ಕನ್ನಡಗರಿಗೆ ಉದ್ಯೋಗಾವಕಾಶ ನೀಡಬೇಕು
ಪಂಚಮಸಾಲಿ ಸಮುದಾಯ 3ಬಿ ಯಿಂದ 2 ಎಗೆ ಸೇರಿಸಬೇಕು ಎಂದು ಹೋರಾಟ ಮಾಡುವುದು ಸ್ವಾರ್ಥದ ಹೋರಾಟವಾಗಿದೆ. ನ್ಯಾ.ಸದಾಶಿವ ಆಯೋಗದ ಪ್ರಕಾರ ಒಳ ಮೀಸಲಾತಿ ನ್ಯಾಯಯುತ ಬೇಡಿಕೆಯಾಗಿದೆ. ಸರೋಜಿನಿ ಮಹಿಷಿ ವರದಿ ಆಧಾರಿತವಾಗಿ ಕರ್ನಾಟಕದಲ್ಲಿ ಕನ್ನಡಗರಿಗೆ ಉದ್ಯೋಗಾವಕಾಶ ನೀಡಬೇಕು. ಶಿಕ್ಷಣ, ಉದ್ಯೋಗ ಮೀಸಲಾತಿಯಲ್ಲಿ ನಮಗೆ ನ್ಯಾಯ ಸಂಪೂರ್ಣ ಪ್ರಾಧಾನ್ಯತೆ ಸಿಗುವ ತನಕ ಬದಲಾಯಿಸಬಾರದು. ಜನಸಂಖ್ಯೆಗೆ ಆಧಾರವಾಗಿ ಮೀಸಲಾತಿ ಕೊಡುವುದು ನ್ಯಾಯವಾಗಿದೆ ಎಂದರು.

ನಮ್ಮ ಸಮಾಜ ಸೇವೆ ಶುರುವಾಗಿದ್ದು ಚಾಮರಾಜನಗರದಿಂದ
ಇನ್ನು ಕಾರ್ಯಕ್ರಮದ ಕುರಿತು ಮಾತನಾಡಿದ ನಟ ಚೇತನ್ ನನಗೆ ಚಾಮರಾಜನಗರಕ್ಕೆ ಬರಲು ಯಾವಾಗಲೂ ಖುಷಿಯಾಗುತ್ತದೆ. ಅಮೇರಿಕಾದಿಂದ ಬಂದ ಮೇಲೆ ಚಾಮರಾಜನಗರದಿಂದ ನಮ್ಮ ಸಮಾಜ ಸೇವೆ ಶುರುವಾಗಿದೆ. ಗುಂಡ್ಲುಪೇಟೆ, ಚಾಮರಾಜನಗರದಲ್ಲಿ ರಂಗಭೂಮಿ ಮುಖಾಂತರ ಪರಿವರ್ತನೆಯಾಗಬೇಕು ಎಂದು ಕೆಲಸ ಮಾಡಿ ಅನುಭವಪಟ್ಟ ನಂತರ ನನಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಆನಂತರ ನಿಮ್ಮ ಜೊತೆ ಮಾತನಾಡಲು ಅವಕಾಶ ಸಿಕ್ಕಿರುವುದು ಬಹಳ ಸಂತೋಷವಾಗಿದೆ ಎಂದು ಹೇಳಿದರು.