ಗುಂಡ್ಲುಪೇಟೆ: ಸಾಧಾರಣ ಮಳೆಗೇ ಬಯಲಾಯ್ತು, ರಸ್ತೆಯ ಕಳಪೆ ಕಾಮಗಾರಿ
ಆರು ತಿಂಗಳ ಹಿಂದಷ್ಟೇ ನಿರ್ಮಾಣಗೊಂಡಿದ್ದ ಗುಂಡ್ಲುಪೇಟೆಯ ಚಿಕ್ಕತುಪ್ಪೂರು - ತೆರಕಣಾಂಬಿಹುಂಡಿ ರಸ್ತೆ ಸಾಧಾರಣ ಮಳೆಗೇ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿಗೆ ನಿದರ್ಶನವಾಗಿದೆ.
ಚಾಮರಾಜನಗರ, ಮೇ 15: ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಬಳಿಯಿಂದ ತೆರಕಣಾಂಬಿಹುಂಡಿ ಗ್ರಾಮದವರೆಗೆ ನಿರ್ಮಾಣಗೊಂಡಿರುವ ರಸ್ತೆಯ ಡಾಂಬರು ಇತ್ತೀಚೆಗೆ ಸುರಿದ ಮಳೆಗೆ ಕಿತ್ತುಬಂದು ಇದು ಕಳಪೆ ಕಾಮಗಾರಿ ಎಂಬುದನ್ನು ಬಯಲು ಮಾಡಿದೆ.
ಮೇಲ್ನೋಟಕ್ಕೆ ಸುಂದರವಾಗಿ ಕಾಣುತ್ತಿರುವ ರಸ್ತೆ, ನಿರ್ಮಿಸಿದ ಆರು ತಿಂಗಳಲ್ಲೇ ಕಿತ್ತ ಬರುತ್ತಿದೆ. ಅದೂ ಚಿಕ್ಕ ಮಳೆಗೇ ರಸ್ತೆಯ ಡಾಂಬರು ಕಿತ್ತುಬಂದಿರುವುದು ರಸ್ತೆಯಲ್ಲಿ ಸಾಗುವವರು ದಿನಂಪ್ರತಿ ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುವಂತೆ ಮಾಡಿದೆ.[ಬಂಡೀಪುರ ಅರಣ್ಯ ವ್ಯಾಪ್ತಿಯ ರಸ್ತೆ ನಿರ್ಮಾಣದಲ್ಲಿ ಅಕ್ರಮ, ಎಸಿಬಿಗೆ ದೂರು]

ಗುಂಡ್ಲುಪೇಟೆಯ ಚಿಕ್ಕತುಪ್ಪೂರು ಬಳಿಯಿಂದ ತೆರಕಣಾಂಬಿಹುಂಡಿ ಗ್ರಾಮದವರೆಗೆ 9 ಕಿ.ಮೀ. ಅಂತರದಲ್ಲಿ ಕಿರಿದಾದ ಹಾಗೂ ತಿರುವುಗಳಿಂದ ಕೂಡಿದ್ದ ರಸ್ತೆಯನ್ನು ಅಗಲಗೊಳಿಸಿ 9 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಿ ಕಳೆದ ಆರು ತಿಂಗಳ ಹಿಂದೆ ಮುಕ್ತಾಯಗೊಳಿಸಲಾಯಿತು.
ರಸ್ತೆ ನಿರ್ಮಾಣದಿಂದ ಎಲ್ಲ ರೀತಿಯಲ್ಲೂ ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ಬಿದ್ದ ಸಾಧಾರಣ ಮಳೆಗೇ ಕಗ್ಗಳದಹುಂಡಿ ಬಳಿಯ ರಸ್ತೆಗೆ ಹಾಕಲಾಗಿದ್ದ ಡಾಂಬರು ಕಿತ್ತುಹೋಗಿ ಕೊರಕಲುಗಳುಂಟಾಗಿವೆ.

ಗುಣಮಟ್ಟದ ಕಾಮಗಾರಿ ಕೈಗೊಳ್ಳದ ಪರಿಣಾಮವಾಗಿ ಕಾಮಗಾರಿ ಮುಗಿದ ಆರುತಿಂಗಳಿನಲ್ಲಿಯೇ ರಸ್ತೆಯ ಡಾಂಬರು ಕಿತ್ತಿಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು, ಕೂಡಲೇ ದುರಸ್ತಿಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. ಸಂಬಂಧಿಸಿದವರು ಇತ್ತ ಗಮನಹರಿಸದೆ ಹೋದರೆ ಮುಂದಿನ ದಿನಗಳಲ್ಲಿ ಸುರಿಯುವ ಮಳೆಗೆ ರಸ್ತೆ ಇನ್ನೆಷ್ಟು ಹದಗೆಡಲಿದೆಯೋ?












Click it and Unblock the Notifications