ಪಿಯುಸಿ ಫೇಲ್ ಆದರೂ ತಿಂಗಳಿಗೆ ₹50,000 ಆದಾಯ ಪಡೆಯುತ್ತಾರೆ ಈ ಇಬ್ಬರು ಸಹೋದರರು- ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ
ಚಾಮರಾಜನಗರ, ಡಿಸೆಂಬರ್, 07: 10 ಕೊಳವೆ ಬಾವಿಗಳನ್ನು ಕೊರೆದರೂ ಸಮರ್ಪಕ ನೀರು ಬರಲಿಲ್ಲ, ಇದ್ದ ಎರಡು ಎಕರೆ ಪ್ರದೇಶದಲ್ಲಿ ಎಲ್ಲಾ ರೀತಿಯ ಬೆಳೆ ಬೆಳೆದರೂ ಬೆಲೆ ಕೈ ಹಿಡಿಯಲಿಲ್ಲ ಕೊನೆಗೆ ಈ ರೈತನ ಕುಟುಂಬದಲ್ಲಿ ನಗು ತರಿಸಿದ್ದು ನರ್ಸರಿ. ಹೇಗೆ ಅಂತೀರಾ ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ.
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಪ್ರಕಾಶ್ ಹಾಗೂ ರವಿ ಎಂಬ ಸಹೋದರರ ಕಮಾಲ್‌ನಿಂದ ಈಗ ಕುಟುಂಬ ನರ್ಸರಿಯಲ್ಲಿ ಯಶಸು ಕಂಡು ತಿಂಗಳಿಗೆ 50 ಸಾವಿರಕ್ಕೂ ಅಧಿಕ ಆದಾಯ ಕಾಣುತ್ತಿದ್ದಾರೆ. ಮಡಹಳ್ಳಿ ಗ್ರಾಮದ ಮಹಾದೇವಶೆಟ್ಟಿ ಹಾಗೂ ಗೌರಮ್ಮ ದಂಪತಿಯ ಮಕ್ಕಳಾದ ರವಿ ಹಾಗೂ ಪ್ರಕಾಶ್ ಇಬ್ಬರೂ ಆರ್ಥಿಕ ತೊಂದರೆಯಿಂದ ಪಿಯು ಹಂತದ ಶಿಕ್ಷಣವೂ ಪೂರೈಸದಿದ್ದರೂ, ಬದುಕಿನಲ್ಲಿ, ಕೃಷಿಯಲ್ಲಿ ಪ್ರಥಮ ಶ್ರೇಣಿಯಲ್ಲಿದ್ದಾರೆ.

ನರ್ಸರಿ ಮೂಲಕ ಆದಾಯಕ್ಕೆ ಸರ್ಜರಿ
ತಂದೆ ಮಹಾದೇವಶೆಟ್ಟಿ ಸಾಂಪ್ರದಾಯಿಕ ಬೇಸಾಯದಲ್ಲಿ ಕೈ ಸುಟ್ಟಿಕೊಂಡಿದ್ದನ್ನು ಗಮನಿಸಿದ ಮಕ್ಕಳು ನರ್ಸರಿ ಕೃಷಿಗೆ ಇಳಿಯುತ್ತಾರೆ. ಆರಂಭದಲ್ಲಿ 200-300 ಗಿಡದಿಂದ ಆರಂಭಗೊಂಡ ಇವರ ಕೆಲಸ ಈಗ 5 ಎಕರೆ ಸ್ವಂತ ಜಮೀನಿನಲ್ಲಿ ನರ್ಸರಿ ನಡೆಸುವಷ್ಟು ಭದ್ರರಾಗಿದ್ದಾರೆ. ತಿಂಗಳಿಗೆ ಏನಿಲ್ಲವೆಂದರೂ 50 ಸಾವಿರ ಆದಾಯ ಪಡೆಯಲಾಗುತ್ತದೆ. 10 ಮಂದಿ ನಿತ್ಯ ನಮ್ಮಲ್ಲಿ ಕೆಲಸ ಮಾಡುತ್ತಾರೆ, ನಮ್ಮ ಇಡೀ ಕುಟುಂಬ ನರ್ಸರಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎನ್ನುತ್ತಾರೆ ಯುವ ರೈತ ಪ್ರಕಾಶ್.
ದೇಶದ 12 ರಾಜ್ಯಗಳಿಗೆ ವಹಿವಾಟು
ವರ್ಷಕ್ಕೆ ಏನಿಲ್ಲವೆಂದರೂ 5 ಲಕ್ಷಕ್ಕೂ ಅಧಿಕ ಸಸಿಗಳನ್ನು ಮಾರಾಟ ಮಾಡುವ ಪ್ರಕಾಶ್ ಅವರು, ತಮಿಳುನಾಡು, ಕೇರಳ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ 12 ರಾಜ್ಯಗಳಿಗೆ ಇವರು ಗಿಡಗಳನ್ನು ಪೂರೈಕೆ ಮಾಡುತ್ತಾರೆ.
ಯಾವ್ಯಾವ ಸಸಿಗಳಿವೆ?
ಶ್ರೀಗಂಧ, ಮಹಾಗನಿ, ಹೆಬ್ಬೇವು, ಸಿಲ್ವರ್ ಓಕ್, ಬಟರ್ ಫ್ರೂಟ್, ಮಾವು, ನೇರಳೆ, ಕರಿಬೇವು, ಆಲ ಸೇರಿದಂತೆ 15ಕ್ಕೂ ವಿವಿಧ ಬಗೆಯ, ಉತ್ಕೃಷ್ಟ ಮಟ್ಟದ ಸಸಿಗಳನ್ನು ಇವರು ಪೂರೈಕೆ ಮಾಡುತ್ತಾರೆ. ಒಟ್ಟಿನಲ್ಲಿ ವಿಶ್ವಾಸ ಇದ್ದರೇ, ಕುಟುಂಬದ ಸಾಥ್ ಇದ್ದರೇ ಎಷ್ಟು ಕಷ್ಟ ಇದ್ದರೂ ಸಾಧನೆಯ ಹಾದಿಯನ್ನು ಮುಟ್ಟಬಹುದು ಎಂಬುದಕ್ಕೆ ನರ್ಸರಿ ಮೂಲಕ ನಗು ಕಂಡ ಈ ಕುಟುಂಬ ಸಾಕ್ಷಿಯಾಗಿದೆ.
ಮಧ್ಯಾಹ್ನದೊಳಗೆ 1,200 ರೂ. ಸಂಬಳ ಗಳಿಕೆ
ಅದೇ ರೀತಿ ಸಂಕಷ್ಟಗಳ ಸರಮಾಲೆಯಲೆಯ ನಡುವೆಯೂ ಮಹಿಳೆಯೊಬ್ಬರು ತೆಂಗಿನ ಕಾಯಿ ಸಿಪ್ಪೆ ಸುಲಿದು ಜೀವನ ಸಾಗಿಸುತ್ತಿರುವ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಈ ಮೂಲಕ ಈ ಮಹಿಳೆಯು ಕೈಯಿಂದ ಇನ್ನು ಜೀವನ ಸಾಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವವರಿಗೆ ಕಷ್ಟಗಳ ನಡುವೆ ಗೆದ್ದು ಬೀಗುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾಳೆ. ಹಾಗಾದರೆ ಈ ಸಾಧಕಿಯ ಹಿನ್ನೆಲೆ ಏನು ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಜೀವನಕ್ಕೆ ಆಸರೆಯಾಗಿದ್ದ ಉದ್ಯೋಗ, ಗಂಡ ಎಲ್ಲವೂ ದೂರವಾದಾಗ ಕುಗ್ಗದೆ ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿದ ಈ ಮಹಿಳೆ ಇಂದು ತೆಂಗಿನಕಾಯಿ ಸುಲಿಯುವ ಕಾಯಕದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಗಂಟೆಗೆ 100ಕ್ಕೂ ಹೆಚ್ಚು ತೆಂಗಿನಕಾಯಿ ಸುಲಿಯುವ ಇವರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 1,200ಕ್ಕೂ ಹೆಚ್ಚು ತೆಂಗಿನಕಾಯಿ ಸುಲಿಯುತ್ತಾರೆ.
ಮೂಲತ ಮಡಿಕೇರಿ ನಿವಾಸಿಯಾಗಿರುವ, ಸದ್ಯ ಕಾಸರಗೋಡು ಜಿಲ್ಲೆಯ ವಾಣಿನಗರ ನಿವಾಸಿಯಾಗಿರುವ ಹರಿಣಾಕ್ಷಿಯವರ ಯಶಸ್ಸಿನ ಕಥೆ ಇದು. ಆಯುರ್ವೇದ ಥೆರಪಿ ಕಲಿತಿರುವ ಹರಿಣಾಕ್ಷಿ ಅದೇ ವೃತ್ತಿಯನ್ನು ಚೆನ್ನೈ ಮತ್ತು ಬೆಂಗಳೂರಿನಲ್ಲಿ ತನ್ನ ಪತಿಯೊಂದಿಗೆ ನಿರ್ವಹಿಸಿಕೊಂಡಿದ್ದರು. ಆದರೆ ಮಕ್ಕಳಾದ ಬಳಿಕ ಆ ಕೆಲಸವನ್ನು ನಿರ್ವಹಿಸುವುದು ಅಸಾಧ್ಯವಾದಾಗ ಹರಿಣಾಕ್ಷಿ ಊರಿಗೆ ಬಂದಿದ್ದರು. ಇದೇ ಸಮಯದಲ್ಲಿ ಪತಿಯೂ ಆಕೆಯನ್ನು ತೊರೆದು ಹೋಗಿದ್ದ. ಇಬ್ಬರು ಚಿಕ್ಕ ಮಕ್ಕಳ ಜೊತೆಗೆ ತನ್ನ ಬದುಕಿನ ಬಂಡಿಯನ್ನು ಎಳೆಯಬೇಕಾದ ಜವಾಬ್ದಾರಿ ಹರಿಣಾಕ್ಷಿಯ ಹೆಗಲ ಮೇಲೆ ಬಿದ್ದಿತ್ತು.
ಮನೆ ಮನೆಗೆ ತೆರಳಿ ಕೂಲಿ ಮಾಡಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನೆಯನ್ನು ನಡೆಸುತ್ತಿದ್ದರು. ಕೂಲಿಯ ಜೊತೆಗೆ ಕೆಲವು ಮನೆಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವೂ ಸಿಗುತ್ತಿತ್ತು. ಒಂದು ಕಾಯಿ ಸುಲಿದರೆ 1 ರೂಪಾಯಿ ಸಿಗುತ್ತದೆ ಎನ್ನುವುದನ್ನು ಅರಿತ ಹರಿಣಾಕ್ಷಿ ಕಾಯಿ ಸುಲಿಯುವುದನ್ನು ಅಭ್ಯಾಸ ಮಾಡಿಕೊಂಡರು. ಬಳಿಕ ಗಂಟೆಗೆ 100 ಕಾಯಿಗಳಂತೆ ಸುಲಿಯುವುದಕ್ಕೆ ಆರಂಭಿಸಿದರು.
ಕೂಲಿಯಿಂದ ದಿನಕ್ಕೆ ಸಿಗುವ 250 ರೂಪಾಯಿ ಸಂಬಳಕ್ಕಿಂತ ದಿನಕ್ಕೆ 500 ಕಾಯಿ ಸುಲಿದು 500 ರೂಪಾಯಿ ಮಾಡಬಹುದೆಂದು ಲೆಕ್ಕಾಚಾರ ಹಾಕಿ ತೆಂಗಿನಕಾಯಿ ಸುಲಿಯುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ತೆಂಗಿನಕಾಯಿ ಸಲಿಯುವ ಹರಿಣಾಕ್ಷಿ ಮಧ್ಯಾಹ್ನದವರೆಗೆ 1,200 ಕಾಯಿಗಳನ್ನು ಸುಲಭವಾಗಿ ಸುಲಿಯುತ್ತಾರೆ.
ಪುತ್ತೂರಿನ ಆರ್ಲಪದವಿನಲ್ಲಿರುವ ತೆಂಗಿನ ವ್ಯಾಪಾರಿ ಆಲಿಕುಂಞಿ ಯವರಲ್ಲೇ ಹೆಚ್ಚಾಗಿ ತೆಂಗಿನಕಾಯಿ ಸುಲಿಯುವ ಕೆಲಸ ಸಿಗುತ್ತಿದೆ. ವರ್ಷಕ್ಕೆ ಒಂದರಿಂದ ಎರಡು ತಿಂಗಳ ಕಾಲ ಮಾತ್ರ ಕಾಯಿ ಸುಲಿಯಲು ಕಾಯಿಗಳ ಕೊರತೆ ಬಿಟ್ಟರೆ, ಉಳಿದ ಎಲ್ಲಾ ದಿನಗಳಲ್ಲಿ ಸಾಕಷ್ಟು ಕಾಯಿಗಳು ವ್ಯಾಪಾರಿಯ ಬಳಿಯೇ ಸಿಗುತ್ತಿದೆ. ಅಲ್ಲದೆ ಕೆಲವು ಮನೆಗಳಿಗೂ ತೆರಳಿ ತೆಂಗಿನಕಾಯಿ ಸುಲಿಯುತ್ರಿದ್ದು, ಈ ವೃತ್ತಿಯಿಂದ ಸಾಕಷ್ಟು ತೃಪ್ತಿ ಇದೆ ಎನ್ನುತ್ತಾರೆ ಹರಿಣಾಕ್ಷಿ.












Click it and Unblock the Notifications