ಹನೂರು: ಕೋಳಿ ಮಾಡಿದ ರಂಪಾಟ, 7 ದಿನಗಳಿಂದ ಶಾಲೆಗೆ ಹೋಗದ ಮಕ್ಕಳು.!
ಚಾಮರಾಜನಗರ, ನವೆಂಬರ್, 29: ಕೋಳಿ ಮಾಡಿದ ಎಡವಟ್ಟು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ 1 ವಾರದಿಂದ ಶಾಲೆಗೆ ಮಕ್ಕಳು ತೆರಳದಿರುವ ಘಟನೆ ಹನೂರು ತಾಲೂಕಿನ ಪೆದ್ದನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕಳೆದ ಗುರುವಾರ ಶಾಲೆಯಲ್ಲಿ ಒಂದನೇ ತರಗತಿ ಬಾಲಕಿಗೆ ಕೋಳಿ ಕಚ್ಚಿ ಗಾಯಗೊಳಿಸಿದ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸೂಕ್ತ ರಕ್ಷಣೆ ಕೊಡುವ ತನಕ ಮಕ್ಕಳು ಶಾಲೆಗೆ ಕಳುಹಿಸಲ್ಲ ಎಂದು ಪಟ್ಟು ಹಿಡಿದಿರುವುದರಿಂದ 1 ವಾರದಿಂದ ಮಕ್ಕಳು ಶಾಲೆಗೆ ಬಂದಿಲ್ಲ. ಬಿಇಒ, ತಾಲೂಕು ಇಒ ಬಂದರೂ ಕೂಡ ಪಾಲಕರು ಪಟ್ಟು ಸಡಿಲಿಸಿಲ್ಲ. ಸೂಕ್ತ ರಕ್ಷಣೆ ಇಲ್ಲದಿರುವುದರಿಂದ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಾಲಕರು ತಿಳಿಸಿದ್ದು, ಅದರಂತೆಯೇ ಮಕ್ಕಳು ಶಾಲೆಯತ್ತ ಮುಖ ಮಾಡಿ 1 ವಾರವಾಗಿದೆ.

ಶಾಲೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ವಿನಾಃಕಾರಣ ಹಸು ಕರುಗಳನ್ನು ಕಟ್ಟುತ್ತಿದ್ದು, ಜೊತೆಗೆ ಕೋಳಿಗಳನ್ನು ಮೇಯಲು ಬಿಡುತ್ತಿರುವ ಪರಿಣಾಮ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಶಾಲಾ ಸುತ್ತಲೂ ಕಾಂಪೌಂಡ್ ಕಟ್ಟಬೇಕು, ಶಾಲಾ ಸಮಯದಲ್ಲಿ ಖಾಸಗಿ ವ್ಯಕ್ತಿಗಳು ಶಾಲಾ ಆವರಣ ಪ್ರವೇಶಕ್ಕೆ ನಿರ್ಬಂಧ ಹೇರಬೇಕೆಂದು ಪಾಲಕರ ಒತ್ತಾಯವಾಗಿದೆ. ಹೀಗೆ ಕೋಳಿ ಕುಕ್ಕಿದ ಘಟನೆಯಿಂದ ಬರೋಬ್ಬರಿ 1 ವಾರ ಶಾಲೆಯಿಂದ ಮಕ್ಕಳು ಹೊರಗುಳಿಯುವಂತಾಗಿದೆ.
ಶಾಲೆಗೆ ಬೀಗ ಜಡಿದು ಪೋಷಕರ ಆಕ್ರೋಶ
ಇತ್ತೀಚೆಗಷ್ಟೇ ಶಾಲೆಗೆ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದೇ ಕೋಳಿಯೊಂದು ಬಾಲಕಿಯನ್ನು ಕುಕ್ಕಿದ ಘಟನೆ ಹನೂರು ತಾಲೂಕಿನ ಪೆದ್ದನಪಾಳ್ಯ ಎಂಬ ಗ್ರಾಮದಲ್ಲಿ ನಡೆದಿದ್ದು, ಪಾಲಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದರು.
ಗುರುವಾರ ಪೆದ್ದನ ಪಾಳ್ಯ ಶಾಲೆಯಲ್ಲಿ ಒಂದನೇ ತರಗತಿ ಬಾಲಕಿಗೆ ಕೋಳಿ ಕಚ್ಚಿ ಗಾಯಗೊಳಿಸಿದ್ದು, ಗುರುವಾರದಂದೇ ಶಾಲೆಗೆ ಬೀಗ ಜಡಿದು ಮಕ್ಕಳನ್ನು ಪಾಲಕರು ಮನೆಗೆ ಕರೆದೊಯ್ದಿದ್ದರು. ಇಂದು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪಾಲಕರು ಪ್ರತಿಭಟನೆ ನಡೆಸಿ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟಿಸಿ ಅಕ್ರೋಶ ಹೊರಹಾಕಿದ್ದರು.
ಶಾಲೆಯ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ವಿನಾಕಾರಣ ಹಸು ಕರುಗಳನ್ನು ಕಟ್ಟುತ್ತಿದ್ದು, ಜೊತೆಗೆ ಕೋಳಿಗಳನ್ನು ಮೇಯಲು ಬಿಡುತ್ತಿರುವ ಪರಿಣಾಮ ಈ ಘಟನೆ ನಡೆದಿದೆ. ಇಲಾಖೆ ಸರಿಯಾದ ರೀತಿ ವ್ಯವಸ್ಥೆ ಮಾಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ. ಸದ್ಯ, ಅಧಿಕಾರಿಗಳು ಇಂದು ಶಾಲೆಗೆ ಭೇಟಿ ಕೊಟ್ಟು ಪಾಲಕರ ಮನವೊಲಿಸುವ ಕೆಲಸವನ್ನು ಮಾಡುತ್ತಿದ್ದರು.












Click it and Unblock the Notifications